ಬೆಂಗಳೂರು[ಜ.06]: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಪ್ರಕರಣ ವಿವಾದ ಉಂಟಾಗಿರುವ ಬೆನ್ನಲ್ಲೇ, ಅದೇ ಸ್ಥಳದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡಬೇಕು ಎಂದು ಕ್ರೈಸ್ತ ಧರ್ಮದ ಧಾರ್ಮಿಕ ಮುಖಂಡರ ನಿಯೋಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ.

ಭಾನುವಾರ ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿದ ಬೆಂಗಳೂರು ಮಹಾಧರ್ಮ ಕ್ಷೇತ್ರದ ಮಹಾಧರ್ಮಾಧ್ಯಕ್ಷ ಪೀಟರ್‌ ಮಚಾದೋ ನೇತೃತ್ವದ ಮುಖಂಡರ ತಂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಪಾಲ ಬೆಟ್ಟದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಕೋರಿದರು.

ಬಳಿಕ ಮಾತನಾಡಿದ ಅವರು, ‘ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಸುಮಾರು ವರ್ಷಗಳಿಂದಲೂ ಕ್ರೈಸ್ತ ಸಮುದಾಯದವರು ಈ ಸ್ಥಳದಲ್ಲಿ ಏಸುವನ್ನು ಪೂಜಿಸುತ್ತಿದ್ದೇವೆ. ಇದೇ ಜಾಗದಲ್ಲಿ ಇದೀಗ ಏಸು ಪ್ರತಿಮೆ ನಿರ್ಮಾಣವಾಗುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಬೇಡ ಎಂದು ಮನವಿ ಮಾಡಿರುವುದಾಗಿ ಹೇಳಿದರು.

ಆ ಬೆಟ್ಟದಲ್ಲಿ ಹಿಂದು ದೇವತೆಗಳನ್ನು ಪೂಜೆ ಮಾಡುತ್ತಿದ್ದರು ಎಂಬುದರ ನಮಗೆ ಮಾಹಿತಿ ಇಲ್ಲ. ಆ ಸ್ಥಳದ ಹೆಸರು ಕಪಾಲಿ ಬೆಟ್ಟಅಲ್ಲ, ಕಪಾಲ ಬೆಟ್ಟಎಂದು ವಿವರಿಸಿದರು.

ಈ ಹಿಂದೆ ಬಂದಿರುವ ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿರಬಹುದು. ಆದರೆ, ನಾವು ಯಾರನ್ನೂ ಮತಾಂತರ ಮಾಡುತ್ತಿಲ್ಲ. ಅದು ಅಷ್ಟುಸುಲಭವೂ ಅಲ್ಲ. ಆದರೆ, ಸುಮಾರು ಒಂದೂವರೆ ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದೇವೆ. ಈ ಮಕ್ಕಳಲ್ಲಿ ಯಾರನ್ನಾದರೂ ಮತಾಂತರ ಮಾಡಿರುವುದನ್ನು ತೋರಿಸಲಿ. ಮುಖ್ಯಮಂತ್ರಿಗಳು ಎಲ್ಲ ಧರ್ಮಗಳನ್ನು ಗೌರವಿಸುತ್ತಾರೆ ಎನ್ನುವುದು ನಮ್ಮ ನಂಬಿಕೆಯಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕನಕಪುರ ತಾಲೂಕಿನ ನಲ್ಲಹಳ್ಳಿ ಗ್ರಾಮದ ಸರ್ವೆ ನಂ.283ರಲ್ಲಿ 10 ಎಕರೆ ಗೋಮಾಳ ಜಮೀನನ್ನು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆ ಉದ್ದೇಶಕ್ಕಾಗಿ 10,80,065 ರು. ಮೊತ್ತಕ್ಕೆ ಪಡೆಯಲಾಗಿತ್ತು. ಕರ್ನಾಟಕ ಭೂ ಕಂದಾಯ ನಿಯಮಗಳು 1966 ರ ನಿಯಮ 97(4) ರಡಿ ಈ ಜಮೀನನ್ನು ಹಾರೋಬೆಲೆ ಕಪಾಲಬೆಟ್ಟಅಭಿವೃದ್ಧಿ ಟ್ರಸ್ಟ್‌ಗೆ ರಾಮನಗರ ಜಿಲ್ಲಾಧಿಕಾರಿಗಳು ಇತ್ತೀಚೆಗೆ ಮಂಜೂರು ಮಾಡಿದ್ದರು. ಜಮೀನಿಗಾಗಿ ನೀಡಬೇಕಾಗಿದ್ದ ಮೊತ್ತವನ್ನು ಕನಕಪುರ ಶಾಸಕ ಡಿ.ಕೆ.ಶಿವಕುಮಾರ್‌ ಪಾವತಿಸಿದ್ದರು. ಅಲ್ಲದೆ, ಬೆಟ್ಟದಲ್ಲಿ ವಿಶ್ವದ ಅತಿ ದೊಡ್ಡ 114 ಅಡಿ ಎತ್ತರದ ಏಸುಕ್ರಿಸ್ತನ ಪ್ರತಿಮೆ ನಿರ್ಮಿಸಲು ಶಿವಕುಮಾರ್‌ ಅವರು ಶಂಕು ಸ್ಥಾಪನೆ ಮಾಡಿದ್ದರು. ಈ ಪ್ರಕರಣ ವಿವಾದಕ್ಕೆ ಕಾರಣವಾಗಿತ್ತು.

ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ಸಂಬಂಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ಮುಂದಾಗಿದ್ದು, ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತವಾಗಿದೆ. ಇದೀಗ ಕ್ರೈಸ್ತ ಮುಖಂಡರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.