ಚಿತ್ರದುರ್ಗದ ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ಬಸ್ ಚಾಲಕ ಮೊಹಮದ್ ರಫೀಕ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುಟ್ಟು ಕರಕಲಾದ ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.

ಹುಬ್ಬಳ್ಳಿ (ಡಿ.26): ಚಿತ್ರದುರ್ಗದ ಗೊರ್ಲೊತ್ತು ಕ್ರಾಸ್‌ ಬಳಿ ಕ್ರಿಸ್‌ಮಸ್‌ ದಿನದಂದು ಸಂಭವಿಸಿದ ಭೀಕರ ಬಸ್‌ ಅಪಘಾತದಲ್ಲಿ ಸಾವು ಕಂಡವರ ಸಂಖ್ಯೆ 7ಕ್ಕೆ ಏರಿಕೆ ಕಂಡಿದೆ. ಗುರುವಾರ ಒಟ್ಟು 6 ಮಂದಿ ಸಾವು ಕಂಡಿದ್ದರು. ಬಸ್‌ನಲ್ಲಿದ್ದ ಐವರು ಹಾಗೂ ಕಂಟೇನರ್‌ ಚಾಲಕ ಕುಲದೀಪ್‌ ಸ್ಥಳದಲ್ಲಿಯೇ ಸುಟ್ಟು ಕರಕಲಾಗಿದ್ದರು. ಈಗ ಸೀಬರ್ಡ್‌ ಬಸ್‌ನ ಚಾಲಕ ಮೊಹಮದ್‌ ರಫೀಕ್‌ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ.

ಹಿರಿಯೂರು ಸಮೀಪ ಜವನಗೊಂಡನಹಳ್ಳಿಯ ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸೀಬರ್ಡ್‌ ಬಸ್‌ಗೆ ಕಂಟೇನರ್‌ಲಾರಿ ಗುದ್ದಿದ್ದರಿಂದ ಬಸ್‌ನಲ್ಲಿದ್ದ ಐವರು ಪ್ರಯಾಣಿಕರು ದಾರುಣ ಸಾವು ಕಂಡಿದ್ದರು. ಆದರೆ, ಬಸ್‌ನ ಡ್ರೈವರ್‌ ಮೊಹಮದ್‌ ರಫೀಕ್‌ ಹಾಗೂ ಕ್ಲೀನರ್‌ ಸಾದಿಕ್‌ ಪವಾಡಸದೃಶ್ಯವಾಗಿ ಪಾರಾಗಿದ್ದರು. ಘಟನೆಯಲ್ಲಿ ಎರಡು ಕಾಲಿ ಹಾಗೂ ಒಂದು ಕೈ ಮುರಿದುಕೊಂಡಿದ್ದ ರಫೀಕ್‌ಗೆ ಹಿರಿಯೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.

ಆದರೆ, ಕಿಮ್ಸ್‌ ಆಸ್ಪತ್ರೆಯಲ್ಲಿ ಆಪರೇಷನ್‌ ನಡೆಸುವ ವೇಳೆ ಚಿಕಿತ್ಸೆ ಫಲಿಸದೆ ರಫೀಕ್‌ ಶುಕ್ರವಾರ ಸಾವು ಕಂಡಿದ್ದಾರೆ. ಆಸ್ಪತ್ರೆಯ ಎದುರು ಅವರ ಕುಟುಂಬ ಕಣ್ಣೀರು ಸುರಿಸಿದೆ. ಕಿಮ್ಸ್‌ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿಯೇ ಅವರಿಗೆ ಆಪರೇಷನ್‌ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಆಪರೇಷನ್‌ ವೇಳೆ ರಫೀಕ್‌ ದೇಹ ಚಿಕಿತ್ಸೆಗೆ ಸ್ಪಂದಿಸದೇ ಸಾವು ಕಂಡಿದ್ದಾರೆ.

ಶವಾಗಾರದ ಎದುರು ಕುಟುಂಬಸ್ಥರ ಕಣ್ಣೀರು

ಕಿಮ್ಸ್ ಆಸ್ಪತ್ರೆ ಶವಾಗಾರ ಎದುರು ಮೊಹಮದ್‌ ರಫೀಕ್‌ ನೆನೆದು ಕುಟುಂಬದವರು ಕಣ್ಣೀರಿಟ್ಟಿದ್ದಾರೆ. ಮೊಹಮದ್‌ ರಫೀಕ್‌ ಪತ್ನಿ ಹಾಗೂ ಅವರ ಸಹೋದರ ಶವಾಗಾರದ ಎದುರು ಕಣ್ಣೀರ ಕೋಡಿ ಹರಿಸಿದ್ದಾರೆ. ಮನೆಯ ಯಜಮಾನನನ್ನೇ ಕಳೆದುಕೊಂಡಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ. 'ನಮ್ಮ ಅಣ್ಣನೇ ನಮಗೆಲ್ಲ ಆಸರೆಯಾಗಿದ್ದ. ಕುಟುಂಬವನ್ನ ಮುನ್ನಡೆಸುತ್ತಿದ್ದ. ಅಪಘಾತದಲ್ಲಿ ಬದುಕುಳಿದಾಗ ಸ್ವಲ್ಪ ಸಮಾಧಾನ ಆಗಿತ್ತು. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ನೆನ್ನೆ ಕರೆದುಕೊಂಡು ಬಂದಿದ್ದೆವು. ಆದರೆ ರಾತ್ರಿ ಆಪರೇಷನ್ ಮಾಡುವವರೆಗೂ ಮಾತನಾಡ್ತಾ ಇದ್ದರು. ರಾತ್ರಿ 12:30ಕ್ಕೆ ಆಪರೇಷನ್ ಗೆ ಕರೆದುಕೊಂಡು ಹೋಗಿದ್ದರು. ಆಪರೇಷನ್ ಮುಗಿದ ಮೇಲೆ ಕೇವಲ ಉಸಿರಾಟ ಇತ್ತು. ಬೆಳಿಗ್ಗೆ 6 ಗಂಟೆಗೆ ನಮ್ಮ ಅಣ್ಣಾ ಸಾವನ್ನಪ್ಪಿದ್ದಾರೆ' ಎಂದು ಸಹೋದರ ಅಳಲು ತೋಡಿಕೊಂಡಿದ್ದಾರೆ.

ಮೃತದೇಹಗಳ ಪತ್ತೆಗೆ ಡಿಎನ್‌ಎ ಟೆಸ್ಟ್‌

ಚಿತ್ರದುರ್ಗ ಎಸ್‌ಪಿ ನೀಡಿರುವ ಮಾಹಿತಿಯ ಪ್ರಕಾರ, ಘಟನಾ ಸ್ಥಳದಲ್ಲಿ ಒಟ್ಟು 6 ಮೃತದೇಹ ಪತ್ತೆಯಾಗಿದೆ. ಒಂದು ಮೃತದೇಹ ಲಾರಿ ಚಾಲಕ ಕುಲದೀಪ್‌ ಅವರದ್ದಾಗಿದ್ದರೆ, ಬಸ್‌ನಲ್ಲಿದ್ದ ಹಾಸನ ಚೆನ್ನರಾಯಪಟ್ಟಣದ ಸ್ನೇಹಿತೆಯರಾದ ನವ್ಯಾ ಹಾಗೂ ಮಾನಸ, ಉತ್ತರ ಕನ್ನಡದ ಭಟ್ಕಳ ತಾಲೂಕಿನ ರಶ್ಮಿ ಮಹಾಲೆ, ಬೆಂಗಳೂರಿನ ಬಿಂದು ಹಾಗೂ ಆಕೆಯ 8 ವರ್ಷಗಳ ಮಗಳು ಗ್ರಿಯಾ ಅವರ ಮೃತದೇಹಗಳು ಎನ್ನಲಾಗಿದೆ. ಆದರೆ, ಎಲ್ಲ ಶವ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಕಾರಣ ಗುರುತು ಪತ್ತೆ ಮಾಡುವುದು ಕಷ್ಟವಾಗಿದೆ. ಇದರಿಂದಾಗಿ ಡಿಎನ್‌ಎ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರ ನಡೆಯುವ ಕಾರ್ಯ ನಡೆಯಲಿದೆ.

ಪ್ರಸ್ತುತ ವೈದ್ಯರು ಕುಟುಂಬದವರ ಡಿಎನ್‌ಎ ಸ್ಯಾಂಪಲ್‌ ಸಂಗ್ರಹ ಮಾಡಿದ್ದು, 3 ದಿನಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ. ಆ ಬಳಿಕ ಮೃತದೇಹವನ್ನು ಅವರಿಗೆ ಹಸ್ತಾಂತರ ಮಾಡಲಾಗುತ್ತದೆ.