Vaccine Drive in Karnataka: ಮಕ್ಕಳ ಲಸಿಕೆ, 3ನೇ ಡೋಸ್‌ ನಿಧಾನ: ವ್ಯಾಕ್ಸಿನ್‌ ಪಡೆಯಲು ಹಿಂದೇಟು..!

*   11 ಲಕ್ಷ ಮಕ್ಕಳು ಅಭಿಯಾನದಿಂದ ದೂರ
*   ಬೂಸ್ಟರ್‌ ಡೋಸ್‌ ಪಡೆದವರು ಮೂರೇ ಲಕ್ಷ
*   ಶಾಲಾ- ಕಾಲೇಜಲ್ಲಿ ಮಾತ್ರ ಮಕ್ಕಳಿಗೆ ಲಸಿಕೆ ಲಭ್ಯ
 

Children Vaccine 3rd Dose Slow in Karnataka grg

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಜ.20):  ರಾಜ್ಯದಲ್ಲಿ(Karnataka) ಒಂದೆಡೆ ಹದಿಹರೆಯದ ಮಕ್ಕಳ ಕೊರೋನಾ ಲಸಿಕೆ(Children Covid Vaccine) ಅಭಿಯಾನದ ಉತ್ಸಾಹ ಕುಗ್ಗಿದ್ದರೆ, ಮತ್ತೊಂದೆಡೆ ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಅರ್ಹರು ಹಿಂದೇಟು ಹಾಕುತ್ತಿರುವುದರಿಂದ ಲಸಿಕೆ ಅಭಿಯಾನಕ್ಕೆ(Vaccine Drive) ಹಿನ್ನಡೆಯಾಗಿದೆ.

ಆರಂಭ ದಿನಗಳಲ್ಲಿ ವೇಗವಾಗಿ ಸಾಗಿದ ಹದಿಹರೆಯದ ಮಕ್ಕಳ ಕೊರೋನಾ ಲಸಿಕೆ ಅಭಿಯಾನ ಹಲವು ಜಿಲ್ಲೆಗಳಲ್ಲಿ ಶೇ.40ರ ಹಂತದಲ್ಲಿಯೇ ನಿಂತಿದ್ದು, ಮೂರು ವಾರ ಕಳೆದರೂ ರಾಜ್ಯಾದ್ಯಂತ ಇನ್ನೂ 11 ಲಕ್ಷ ಮಕ್ಕಳು(Children) ಲಸಿಕೆಯಿಂದ ದೂರ ಉಳಿದಿದ್ದಾರೆ. ಇನ್ನು ಮುನ್ನೆಚ್ಚರಿಕೆ (ಮೂರನೇ) ಡೋಸ್‌ಗೆಂದು ಗುರುತಿಸಲಾಗಿದ್ದ 21 ಲಕ್ಷ ಅರ್ಹರ ಪೈಕಿ ಮೂರು ಲಕ್ಷ ಮಂದಿ ಮಾತ್ರ ಲಸಿಕೆ(Vaccine) ಪಡೆದಿದ್ದಾರೆ.

Booster Dose: 3ನೇ ಡೋಸ್‌ ಅಭಿಯಾನ ನಿರೀಕ್ಷೆಯಂತೆ ಸಾಗುತ್ತಿಲ್ಲ: ಸುಧಾಕರ್‌

ಜ.3ರಿಂದ ಮಕ್ಕಳ ಲಸಿಕೆ ಆರಂಭವಾಗಿದ್ದು, ರಾಜ್ಯದಲ್ಲಿ 15 ರಿಂದ 17 ವರ್ಷದ 31.7 ಲಕ್ಷ ಮಕ್ಕಳನ್ನು ಗುರುತಿಸಲಾಗಿತ್ತು. ಶಾಲೆ(School) ಮತ್ತು ಕಾಲೇಜುಗಳಲ್ಲಿಯೇ(Colleges) ಲಸಿಕೆ ಶಿಬಿರಗಳನ್ನು ಆಯೋಜಿಸಿ ಒಂದು ಅಥವಾ ಎರಡು ವಾರದೊಳಗೆ ಎಲ್ಲಾ ಮಕ್ಕಳಿಗೆ ಮೊದಲ ಡೋಸ್‌ ನೀಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿತ್ತು. ಅಂತೆಯೇ ಆರಂಭದಲ್ಲಿ ಮಕ್ಕಳ ಲಸಿಕೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ಐದು ದಿನಗಳಲ್ಲಿ (ಜ.3 ರಿಂದ 7ರೊಳಗೆ) ಶೇ.50ರಷ್ಟುಅಂದರೆ, 17 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿತ್ತು. ಆ ಬಳಿಕ ಸಾಕಷ್ಟು ಮಂದಗತಿಯಲ್ಲಿ ಸಾಗಿದ್ದು, ಕಳೆದ 2 ವಾರದಲ್ಲಿ 3 ಲಕ್ಷ ಮಕ್ಕಳಿಗೆ ಮಾತ್ರ ಲಸಿಕೆ ನೀಡಲಾಗಿದೆ. ಇಂದಿಗೂ 11 ಲಕ್ಷ ಮಕ್ಕಳು ಲಸಿಕೆಯಿಂದ ದೂರ ಉಳಿದಿದ್ದಾರೆ. 9 ಜಿಲ್ಲೆಗಳು ಶೇ.60ಕ್ಕಿಂತ ಕಡಿಮೆ, 9 ಜಿಲ್ಲೆಗಳು ಶೇ.60 ರಿಂದ 70, 8 ಜಿಲ್ಲೆಗಳು ಶೇ.71 ರಿಂದ 80, 4 ಜಿಲ್ಲೆಗಳು ಮಾತ್ರ ಶೇ.81 ರಿಂದ 85ರಷ್ಟು ಮಕ್ಕಳಿಗೆ ಲಸಿಕೆ ನೀಡಿದ್ದು, ಯಾವ ಜಿಲ್ಲೆಯೂ ಅಭಿಯಾನವನ್ನು ಪೂರ್ಣಗೊಳಿಸಿಲ್ಲ.

ಮುನ್ನೆಚ್ಚರಿಕೆ ಡೋಸ್‌ಗೆ ಕಿಮ್ಮತ್ತಿಲ್ಲ:

ಕೊರೋನಾ(Coronavirus) ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯರ್ತರು, 60 ವರ್ಷ ಮೇಲ್ಪಟ್ಟ ಆರೋಗ್ಯ ಸಮಸ್ಯೆಯುಳ್ಳವರಿಗೆ ಜ.10ರಿಂದ ಮುನ್ನೆಚ್ಚರಿಕೆ ಡೋಸ್‌ ಲಸಿಕೆ ನೀಡಲಾಗುತ್ತಿದೆ. ಎರಡನೇ ಡೋಸ್‌ ಲಸಿಕೆ ಪಡೆದು 9 ತಿಂಗಳು ಪೂರೈಸಿದ ಆರು ಲಕ್ಷ ಆರೋಗ್ಯ, ಏಳು ಲಕ್ಷ ಮುಂಚೂಣಿ ಕಾರ್ಯಕರ್ತರು, ಎಂಟು ಲಕ್ಷ 60 ವರ್ಷ ಮೇಲ್ಪಟ್ಟವರನ್ನು ಸೇರಿ 21 ಲಕ್ಷ ಜನರನ್ನು ಗುರುತಿಸಲಾಗಿತ್ತು. ಅಭಿಯಾನ ಆರಂಭವಾಗಿ 10 ದಿನಗಳಾದರೂ 1.7 ಲಕ್ಷ ಆರೋಗ್ಯ 62 ಸಾವಿರ ಮುಂಚೂಣಿ ಕಾರ್ಯಕರ್ತರು, 90 ಸಾವಿರ ಸಾರ್ವಜನಿಕರು ಸೇರಿ 3.25 ಲಕ್ಷ ಮಂದಿ ಮಾತ್ರ ಮೂರನೇ ಡೋಸ್‌ ಪಡೆದುಕೊಂಡಿದ್ದಾರೆ. ಜಾಗೃತಿ ಮೂಡಿಸಬೇಕಾದ ಆರೋಗ್ಯ, ಮುಂಚೂಣಿ ಕಾರ್ಯಕರ್ತರೇ ಹಿಂದೇಟು ಹಾಕಿರುವುದು ಅಭಿಯಾನದ ಹಿನ್ನಡೆಗೆ ಕಾರಣವಾಗಿದೆ.

ಮಕ್ಕಳ ಲಸಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು

ಕಲಬುರಗಿ - 48%
ಬಿಬಿಎಂಪಿ - 50%
ರಾಯಚೂರು - 55%
ಬೀದರ್‌ - 55%
ಬಳ್ಳಾರಿ, ಕೊಪ್ಪಳ - 57%

ಯಾದಗಿರಿ, ಚಿತ್ರದುರ್ಗ,ಕೋಲಾರ, ತುಮಕೂರು - 59%

ಮಕ್ಕಳಿಗೆ ಲಸಿಕೆ ಕೊಡಿಸುವಲ್ಲಿ ಶೈಕ್ಷಣಿಕ ಸಂಸ್ಥೆಗಳ ಆಸಕ್ತಿ ಮುಖ್ಯವಾಗುತ್ತದೆ. ಆರೋಗ್ಯ ಇಲಾಖೆಯೊಂದಿಗೆ(Department of Health) ಸಮನ್ವಯತೆ ಸಾಧಿಸಿ, ಮಕ್ಕಳಲ್ಲಿ ಜಾಗೃತಿ(Awareness) ಮೂಡಿಸಿದರೆ ಅರ್ಹ ಎಲ್ಲ ಮಕ್ಕಳಿಗೂ ಲಸಿಕೆ ಸಿಗಲಿದೆ. ಕೆಲವೆಡೆ ಶಿಕ್ಷಣ ಸಂಸ್ಥೆಗಳೇ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಅಂತ ಖಾಸಗಿ ಪಿಯು ಕಾಲೇಜಿನ ಪ್ರಾಚಾರ್ಯ ಪ್ರಸಾದ್‌ ಬಂಗೇರ ತಿಳಿಸಿದ್ದಾರೆ. 

Vaccine Golmal: ಸತ್ತವರಿಗೂ ಲಸಿಕೆ, ಕೊರೋನಾ ಟೆಸ್ಟ್‌ ಮೆಸೇಜ್‌..!

ಏನಾಗಿದೆ?

- 31.7 ಲಕ್ಷ ವಿದ್ಯಾರ್ಥಿಗಳು ಕೋವಿಡ್‌ ಲಸಿಕೆ ಪಡೆಯಲು ಅರ್ಹ
- ಐದೇ ದಿನದಲ್ಲಿ ಶೇ.50ರಷ್ಟುಅಂದರೆ 17 ಲಕ್ಷ ಮಂದಿಗೆ ಲಸಿಕೆ
- ಆ ಬಳಿಕ 2 ವಾರದಲ್ಲಿ ಲಸಿಕೆ ಪಡೆದವರು 3 ಲಕ್ಷ ಮಕ್ಕಳು ಮಾತ್ರ
- ಕೊರೋನಾ 3ನೇ ಡೋಸ್‌ ಲಸಿಕೆಗೆ 21 ಲಕ್ಷ ಮಂದಿ ಅರ್ಹ
- ಆದರೆ ಈವರೆಗೆ ಲಸಿಕೆ ಪಡೆದವರು 3.25 ಲಕ್ಷ ಜನರು ಮಾತ್ರ

ಕಾರಣ ಏನು?

- ಶಾಲಾ- ಕಾಲೇಜಲ್ಲಿ ಮಾತ್ರ ಮಕ್ಕಳಿಗೆ ಲಸಿಕೆ ಲಭ್ಯ. ಆರೋಗ್ಯ ಕೇಂದ್ರಗಳಲ್ಲಿ ಇಲ್ಲ
- ಆನ್‌ಲೈನ್‌ ತರಗತಿಯಿಂದಾಗಿ ಹಲವು ಮಕ್ಕಳು ಶಾಲಾ- ಕಾಲೇಜಿಗೆ ಬರುತ್ತಿಲ್ಲ
- ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸಹಕರಿಸುತ್ತಿಲ್ಲ. ಮಕ್ಕಳ ಗೈರು ಹಾಜರಿ ಹೆಚ್ಚಿದೆ
- ಬೂಸ್ಟರ್‌ ಡೋಸ್‌ಗೆ ಅರ್ಹರಾಗಿರುವವರಲ್ಲಿ ಹಲವರಿಗೆ ಕೊರೋನಾ ಸೋಂಕು
- ಸೋಂಕು ತಾಂಡವ ಕಾರಣ ವಯೋವೃದ್ಧರು ಲಸಿಕೆ ಪಡೆಯಲು ಆಸ್ಪತ್ರೆಗೆ ಬರುತ್ತಿಲ್ಲ
 

Latest Videos
Follow Us:
Download App:
  • android
  • ios