ಕಾವೇರಿ.ಎಸ್‌.ಎಸ್‌.

ಬೆಂಗಳೂರು(ಮೇ.05): ‘ನನಗೆ ಮೈ ಹುಷಾರಿಲ್ಲ, ಊರಿಗೆ ಹೋಗಬೇಕೆಂದು ಅನ್ನಿಸುತ್ತದೆ, ಆದರೆ ಕರೆದುಕೊಂಡು ಹೋಗುವವರಿಲ್ಲ. ಎರಡು ತಿಂಗಳಿನಿಂದ ಮಕ್ಕಳೂ ಬಂದಿಲ್ಲ, ಒಂದು ತಿಂಗಳಿನಿಂದ ಫೋನ್‌ ಕೂಡಾ ಮಾಡಿಲ್ಲ, ಮಾತನಾಡಬೇಕು ಅನ್ನಿಸುತ್ತೆ. ಆದರೆ ಏನು ಮಾಡೋದು? ಹೀಗೆಂದು ನೋವು, ನಿರಾಶೆಯಿಂದ ನುಡಿದವರು ಕನಕಪುರದ ಶೋಭಾ.

‘ತವರು ಮನೆಯಲ್ಲಿ ಅನುಕೂಲವಾಗಿದ್ದಾರೆ, ಅಣ್ಣ ನಮ್ಮವರಾದರೂ ಅತ್ತಿಗೆ ನಮ್ಮವರಾಗಲಿಲ್ಲ. ಎಲ್ಲೂ ಹೋಗಬೇಕು ಅನ್ನಿಸಲ್ಲ!’ಎಂದು ಹೇಳಿದವರು 62 ವರ್ಷದ ಮಂಜುಳ.

‘ಯಾರಾದರೂ ಬೈಕ್‌ನಲ್ಲಿ ಓಡಾಡುವುದನ್ನು ನೋಡಿದಾಗ ಮನೆಗೆ ಹೋಗಬೇಕು, ಕಳಿಸಿ ಎನ್ನುತ್ತೇವೆ. ಮಗ, ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವ ಅದೃಷ್ಟನಮಗಿಲ್ಲ. ಮೊಮ್ಮಕ್ಕಳು ತಿರುಗಿಯೂ ನೋಡಲ್ಲ’ ಎಂದು ನೊಂದುಕೊಂಡವರು ಚೆನ್ನೈ ಮೂಲದ ವಿಜಯಕುಮಾರ್‌.

ರಾಜ್ಯದ ಪ್ರತಿ ವ್ಯಕ್ತಿಯ ಹೆಲ್ತ್‌ ರಿಜಿಸ್ಟರ್‌: ದೇಶದಲ್ಲೇ ಪ್ರಥಮ!

ನಾನಾ ಕಾರಣಗಳಿಂದ ವಿವಿಧ ವೃದ್ಧಾಶ್ರಮದಲ್ಲಿ ಇರುವ ಅನೇಕ ಹಿರಿಯ ನಾಗರಿಕರು ಲಾಕ್‌ಡೌನ್‌ ಸಂದರ್ಭದಲ್ಲಿ ಪಡುತ್ತಿರುವ ನೋವು, ಕೊರಗು, ಆತಂಕದ ಸ್ಥಿತಿ ಇದು.

ಲಾಕ್‌ಡೌನ್‌ನಿಂದಾಗಿ ಇಡೀ ಕುಟುಂಬದ ಸದಸ್ಯರು ತಿಂಗಳುಗಟ್ಟಲೆ ಮನೆಯಲ್ಲಿ ಇರುವ, ಕೂಡಿ ಊಟ ಮಾಡುವ, ಮಾತನಾಡುವ ಪ್ರಸಂಗಗಳನ್ನು ಟೀವಿ, ಪತ್ರಿಕೆಗಳಲ್ಲಿ ಓದುವ ವೃದ್ಧಾಶ್ರಮದಲ್ಲಿರುವ ಹಿರಿಯರು ತಮ್ಮನ್ನು ಮಕ್ಕಳು ಮನೆಗೆ ಕರೆದುಕೊಂಡು ಹೋಗಿ ಕೆಲವು ದಿನಗಳ ಮಟ್ಟಿಗಾದರೂ ಜೊತೆಗೆ ಇರಿಸಿಕೊಳ್ಳಬೇಕೆಂದು ಬಯಸುತ್ತಿದ್ದಾರೆ. ಆದರೆ ಅಂತಹ ಅವಕಾಶವನ್ನು ಬಹುತೇಕ ಮಕ್ಕಳು ಕಲ್ಪಿಸುತ್ತಿಲ್ಲ.

ಮಕ್ಕಳಿಗೆ ಲಾಕ್‌ಡೌನ್‌ ನೆಪ: ‘ವರ್ಷಕ್ಕೊಮ್ಮೆ ಮನೆಗೆ ಕಳಿಸುತ್ತಿದ್ದೆವು. ಲಾಕ್‌ಡೌನ್‌ ಆದ ನಂತರ ಅವರ ಮಕ್ಕಳು, ಸಂಬಂಧಿಕರಿಗೂ ಕರೆ ಮಾಡಿದೆವು. ಆದರೆ ಕೆಲವರು ಲಾಕ್‌ಡೌನ್‌ ನೆಪವೊಡ್ಡಿದರು. ಇನ್ನು ಕೆಲವರಿಗೆ ಕರೆದೊಯ್ಯಲು ಇಷ್ಟವಿಲ್ಲ. ‘ಹೆತ್ತವರನ್ನು ಕರೆದುಕೊಂಡು ಹೋಗಲು ಮಕ್ಕಳಿಗೇ ಇಷ್ಟವಿಲ್ಲ. ಇಲ್ಲಿರುವ ಕೆಲವರು ಇಲ್ಲೇ ನೆಮ್ಮದಿ ಇದೆ, ಇಲ್ಲೇ ಇರ್ತೀವಿ, ಕಳಿಸಬೇಡಿ ಅಂತಾರೆ. ಇನ್ನು ಕೆಲವರು ಬಯಸಿದರೂ ಮನೆಗೆ ಕರೆದುಕೊಂಡು ಹೋಗುತ್ತಿಲ್ಲ. ಇಬ್ಬರನ್ನು ಕಳಿಸಿದ್ದೇವೆ. ಆದರೆ 22 ಮಂದಿಯನ್ನು ಯಾರೂ ಕರೆದುಕೊಂಡು ಹೋಗಿಲ್ಲ ಎಂದು ಮಂಡೂರಿನ ವಿದ್ಯಾರಣ್ಯ ವೃದ್ಧಾಶ್ರಮದ ಮೇಲ್ವಿಚಾರಕರಾದ ನಾಯಕ್‌ ಮಾಹಿತಿ ನೀಡಿದರು.

ಕೊರೋನಾತಂಕ ನಡುವೆ ಗುಡ್ ನ್ಯೂಸ್: ರಾಜ್ಯದಲ್ಲೀಗ ಸೋಂಕಿತರಿಗಿಂತ ಚೇತರಿಕೆ ಹೆಚ್ಚು!

ಶೇ.5ರಷ್ಟುಹಿರಿಯರು ವಾಪಸ್‌: ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಸಬಲೀಕರಣ ಇಲಾಖೆಯಡಿ ರಾಜ್ಯದಲ್ಲಿ 76 ವೃದ್ಧಾಶ್ರಮಗಳಿದ್ದು, ಸುಮಾರು 1900 ವೃದ್ಧರಿದ್ದಾರೆ. ಈವರೆಗೆ ಸರ್ಕಾರಿ-ಖಾಸಗಿ ವೃದ್ಧಾಶ್ರಮದಿಂದ ಶೇ.5ರಷ್ಟುವೃದ್ಧರನ್ನು ಮಾತ್ರ ಕರೆದುಕೊಂಡು ಹೋಗಲಾಗಿದೆ. ಒಂದೊಂದು ವೃದ್ಧಾಶ್ರಮದಲ್ಲಿ ಇಬ್ಬರಿಂದ ಮೂವರನ್ನು ಮಾತ್ರ ಮನೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮಾಸ್ಕ್‌, ಸ್ಯಾನಿಟೈಸರ್‌ ಕಡ್ಡಾಯ

ಕೊರೋನಾ ವೈರಸ್‌ ಇರುವುದರಿಂದ ವೃದ್ಧಾಶ್ರಮದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್‌ ಬಳಕೆ ಕಡ್ಡಾಯಗೊಳಲಾಗಿದೆ. ಈಗಾಗಲೇ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್‌ ಪರೀಕ್ಷೆ ನಡೆಸಲಾಗಿದೆ.

- ಉಮೇಶ್‌, ಕಲ್ಯಾಣಾಧಿಕಾರಿ, ಜಿಲ್ಲಾ ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಸಬಲೀಕರಣ ಇಲಾಖೆ