ಹೊಸ ಸರ್ಕಾರ ನೂತನ ಬಜೆಟ್‌ ಜುಲೈ 7 ರಂದು ಮಂಡನೆಯಾಗಲಿದೆ ಎಂದು ಸರ್ಕಾರ ಪ್ರಕಟಿಸಿದೆ. ಜುಲೈ 3 ರಿಂದ ಬಜೆಟ್‌ ಅಧಿವೇಶನ ಆರಂಭವಾಗಲಿದೆ.

ಬೆಂಗಳೂರು (ಜೂ.9): ದಾಖಲೆಯ 14ನೇ ಬಾರಿಗೆ ಬಜೆಟ್‌ ಮಂಡನೆ ಮಾಡಲು ಸಿದ್ಧರಾಮಯ್ಯ ಅಣಿಯಾಗಿದ್ದಾರೆ. ಭಾರೀ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಪಕ್ಷ, ಜುಲೈ 3 ರಂದು ಬಜೆಟ್‌ ಅಧಿವೇಶನ ಕರೆದಿದ್ದು, ಜುಲೈ 7 ರಂದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಜೆಟ್‌ ಮಂಡನೆ ಮಾಡಲಿದ್ದಾರೆ. ಜುಲೈ 3 ರಂದು ಆರಂಭವಾಗಲಿರುವ ಅಧಿವೇಶನದ ಮೂರು ದಿನ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೊಟ್‌ ಅವರ ಭಾಷಣದ ಮೇಲೆ ಚರ್ಚೆಗಳು ನಡೆಯಲಿದೆ. ಕಾಂಗ್ರೆಸ್‌ ಸರ್ಕಾರ ಈಗಾಗಲೇ ಅನುಷ್ಠಾನಕ್ಕೆ ಸಿದ್ಧಗೊಳ್ಳುತ್ತಿರುವ ಪಂಚ ಗ್ಯಾರಂಟಿಗಳಿಗೆ ಹೇಗೆ ಹಣ ಹೊಂದಿಕೆ ಮಾಡುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಇದರ ನಡುವೆ ಸಾಮಾನ್ಯ ಜನರ ಮೇಲೆ ತೆರಿಗೆ ಭಾರವನ್ನು ಸಿದ್ಧರಾಮಯ್ಯ ಸರ್ಕಾರ ಏರಿಸಲಿದೆ ಎನ್ನುವ ಊಹಾಪೋಹಗಳು ಕೂಡ ಸೇರಿಕೊಂಡಿದೆ. ಆದರೆ, ಸಿದ್ಧರಾಮಯ್ಯ ಮಾತ್ರ ಈ ಊಹಾಪೋಹಗಳನ್ನು ತಿರಸ್ಕರಿಸಿದ್ದಾರೆ. ಈವರೆಗೂ 13 ಬಜೆಟ್‌ಗಳನ್ನು ಯಶಸ್ವಿಯಾಗಿ ಮಂಡಿಸಿರುವ ಸಿದ್ಧರಾಮಯ್ಯ ದಾಖಲೆಯ 14ನೇ ಬಾರಿಗೆ ಬಜೆಟ್‌ ಮಂಡನೆ ಮಾಡಲಿದ್ದಾರೆ. ಮೇ 20 ರಂದು ಮುಖ್ಯಮಂತ್ರಿ ಗಾದಿ ಏರಿದ್ದ ಸಿದ್ಧರಾಮಯ್ಯ, ಒಂದೂವರೆ ತಿಂಗಳಿನಿಲ್ಲಿಯೇ ಬಜೆಟ್‌ ಅಧಿವೇಶನಕ್ಕೆ ಸಿದ್ಧರಾಗಿದ್ದಾರೆ.