25 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಮತ್ತು ಸೊಸೆ ಭವಾನಿ ರೇವಣ್ಣ ಮೇಲೆ ನಡೆದ ಆಸಿಡ್ ದಾಳಿಯ ಹಿಂದೆ ರಾಜಕೀಯ ಪಿತೂರಿ ಇತ್ತು ಎಂದು ದೇವೇಗೌಡರು ಬಹಿರಂಗಪಡಿಸಿದ್ದರು. ತಮ್ಮನ ಮಗನೇ ದಾಳಿ ನಡೆಸಿದ್ದರೂ, ತಮ್ಮನ ಅಂತಿಮ ದಿನಗಳಿಗಾಗಿ ಆತನನ್ನು ಕ್ಷಮಿಸಿ ಜೈಲಿನಿಂದ ಬಿಡಿಸಿದ ಮಾನವೀಯ ಘಟನೆಯನ್ನು ಈ ಲೇಖನ ವಿವರಿಸುತ್ತದೆ.

ಬೆಂಗಳೂರು: ದೇಶದ ರಾಜಕಾರಣದಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಮ್ಮ ಬಾಳ ಸಂಗಾತಿ ಚೆನ್ನಮ್ಮ ಅವರನ್ನು ಕಳೆದುಕೊಂಡಿದ್ದಾರೆ. 72 ವರ್ಷಗಳ ಕಾಲ ಸುದೀರ್ಘ ದಾಂಪತ್ಯ ನಡೆಸಿದ ಆದರ್ಶ ದಂಪತಿ ದೇವೇಗೌಡ ಮತ್ತು ಚೆನ್ನಮ್ಮ ಅವರದ್ದು, 1954 ರಲ್ಲಿ ಇವರಿಬ್ಬರ ವಿವಾಹ ನಡೆದಿತ್ತು. ಅಲ್ಲಿಂದ ಇಲ್ಲಿವರೆಗೆ ಒಂದು ದಿನವೂ ಚೆನ್ನಮ್ಮ ಅವರನ್ನು ಬಿಟ್ಟು ಊಟ ಮಾಡಿಲ್ಲ. ಗೌಡರಿಗೆ ದೆಹಲಿಗೆ ಹೋಗಿ ಅಲ್ಲೂ ಮುದ್ದೆ ಮಾಡಿಕೊಟ್ಟಿದ್ದರು. ಎಲ್ಲೇ ಹೋಗಲಿ ಜೊತೆಯಲ್ಲೇ ಹೋಗುತ್ತಿದ್ದರು. ಈ ಜೋಡಿ ಸಮಾಜಕ್ಕೆ ಆದರ್ಶ ದಂಪತಿಯಾಗಿ ಅನೇಕರಿಗೆ ಮಾದರಿಯಾಗಿದ್ದರು. ಹೀಗಿರುವಾಗ ಅವರ ಕುಟುಂಬದ ಮೇಲೆ ಭೀಕರ ‘ಆಸಿಡ್ ದಾಳಿ’ (Acid Attack) ನಡೆದಿತ್ತು. ಆ ಘಟನೆ ಈಗ ಭರ್ತಿ 25 ವರ್ಷಗಳು ಕಳೆದಿವೆ. 2001ರ ಫೆಬ್ರವರಿ 21ರಂದು ನಡೆದಿದ್ದ ಆ ಕರಾಳ ದಿನದ ಆಘಾತಕಾರಿ ರಾಜಕೀಯ ಮತ್ತು ಕೌಟುಂಬಿಕ ರಹಸ್ಯಗಳನ್ನು ಹೆಚ್.ಡಿ. ದೇವೇಗೌಡರು ಈ ಹಿಂದೆ ಜೀ ಕನ್ನಡ ವಾಹಿನಿಯ ಜನಪ್ರಿಯ ಶೋ ‘ವೀಕೆಂಡ್ ವಿತ್ ರಮೇಶ್’ ಸಾಧಕರ ಸೀಟಿನಲ್ಲಿ ಕುಳಿತು ಜಗತ್ತಿನ ಮುಂದೆ ಮೊದಲ ಬಾರಿಗೆ ಬಹಿರಂಗಪಡಿಸಿದ್ದರು. ರಾಜಕೀಯ ವೈಷಮ್ಯ ಮತ್ತು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದಿದ್ದ ಈ ದಾಳಿಯ ಸಂಪೂರ್ಣ ವಿವರಗಳು ಮತ್ತು ಆ ನಂತರದ ಬೆಳವಣಿಗೆಗಳು ಅತ್ಯಂತ ರೋಚಕವಾಗಿವೆ.

ಎರಡು ತಿಂಗಳು ಪ್ರಜ್ಞೆಯೇ ಇಲ್ಲದೆ ಮಲಗಿದ್ದ ಚೆನ್ನಮ್ಮ

ಮಹಾಶಿವರಾತ್ರಿಯಂದು ನಡೆದಿದ್ದ ಆ ಭೀಕರ ದುರಂತ ಅದು 2001ರ ಫೆಬ್ರವರಿ 21ರ ಮಹಾಶಿವರಾತ್ರಿಯ ರಾತ್ರಿ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಈಶ್ವರ ದೇವಸ್ಥಾನಕ್ಕೆ ದೇವೇಗೌಡರ ಕುಟುಂಬವು ವಿಶೇಷ ಪೂಜೆ ಸಲ್ಲಿಸಲು ತೆರಳಿತ್ತು. ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಪೂಜೆ ಮುಗಿಸಿಕೊಂಡು ಹೊರಬರುತ್ತಿದ್ದಾಗ, ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಅವರ ಸೊಸೆ ಭವಾನಿ ರೇವಣ್ಣ (ಹೆಚ್.ಡಿ. ರೇವಣ್ಣ ಅವರ ಪತ್ನಿ) ಅವರ ಮೇಲೆ ಏಕಾಏಕಿ ಆಸಿಡ್ ಎರಚಲಾಯಿತು. ಈ ಘೋರ ಕೃತ್ಯದಲ್ಲಿ ಚನ್ನಮ್ಮ ಹಾಗೂ ಭವಾನಿ ರೇವಣ್ಣ ಇಬ್ಬರೂ ತೀವ್ರವಾಗಿ ಸುಟ್ಟು ಗಾಯಗೊಂಡು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಬೇಕಾಯಿತು. ಆಸಿಡ್ ದಾಳಿಯ ತೀವ್ರತೆಗೆ ಚೆನ್ನಮ್ಮ ಅವರಿಗೆ ಸತತ ಎರಡು ತಿಂಗಳುಗಳ ಕಾಲ ಪ್ರಜ್ಞೆಯೇ ಇರಲಿಲ್ಲ. ಆಗ ದೇವೇಗೌಡು ಬಹಳ ನೊಂದುಕೊಂಡಿದ್ದರು.

ಕೌಟುಂಬಿಕ ವೈಷಮ್ಯ ಮತ್ತು ರಾಜಕೀಯ ಪ್ರೇರಣೆ ದಾಳಿ

ಈ ಆಸಿಡ್ ದಾಳಿಯ ಪ್ರಮುಖ ಆರೋಪಿ ಬೇರೆ ಯಾರೂ ಆಗಿರದೆ, ದೇವೇಗೌಡರ ಸ್ವಂತ ತಮ್ಮ ಬಸವೇಗೌಡರ ಮಗ ಲೋಕೇಶ್ ಆಗಿದ್ದನು. ಆರಂಭದಲ್ಲಿ ದಿನಪತ್ರಿಕೆಗಳು ಇದನ್ನು ಆರ್ಥಿಕ ಸಹಾಯದ ವಿವಾದ ಹಾಗೂ ಕೌಟುಂಬಿಕ ಕಲಹದಿಂದ ನಡೆದ ಘಟನೆ ಎಂದು ವರದಿ ಮಾಡಿದ್ದವು. ಆದರೆ, ಇದರ ಹಿಂದಿನ ಅಸಲಿ ಸತ್ಯವನ್ನು ದೇವೇಗೌಡರು ‘ವೀಕೆಂಡ್ ವಿತ್ ರಮೇಶ್’ನಲ್ಲಿ ಬಿಚ್ಚಿಟ್ಟಿದ್ದರು. ನನ್ನ ತಮ್ಮನ ಮಗನೇ ಆಸಿಡ್ ಹಾಕಿದ್ದು ನಿಜ. ಆದರೆ, ಆತನ ಹಿಂದೆ ರಾಜಕೀಯ ಮುಖಂಡರ ಪ್ರೇರಣೆ ಇತ್ತು. ವಾಸ್ತವವಾಗಿ ಅವರ ಸಂಚು ಇದ್ದದ್ದು ನನ್ನ ಮಗ ಹೆಚ್.ಡಿ. ರೇವಣ್ಣನ ಮೇಲೆ ಆಸಿಡ್ ಹಾಕುವುದಾಗಿತ್ತು. ನಾವೆಲ್ಲ ಮಹಾದೇಶ್ವರ ಬೆಟ್ಟಕ್ಕೆ ಹೋದಾಗ ರೇವಣ್ಣ ಬಂದಿರಲಿಲ್ಲ, ಹೀಗಾಗಿ ನನ್ನ ಪತ್ನಿ ಮತ್ತು ಸೊಸೆಯ ಮೇಲೆ ದಾಳಿ ನಡೆಯಿತು ಎಂಬುದನ್ನು ಹಂಚಿಕೊಂಡಿದ್ದರು.

ಕೋರ್ಟ್‌ನಿಂದ 8 ವರ್ಷ ಜೈಲು ಶಿಕ್ಷೆ ತಮ್ಮನಿಗಾಗಿ ಮಗನನ್ನು ಬಿಡಿಸಿದ ದೊಡ್ಡಗೌಡರು

ಆಸಿಡ್ ಎರಚಿದ ಪ್ರಕರಣದಲ್ಲಿ ಲೋಕೇಶ್ ಅಪರಾಧಿ ಎಂದು ಸಾಬೀತಾಗಿ ನ್ಯಾಯಾಲಯವು ಆತನಿಗೆ 8 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಲೋಕೇಶ್ ಜೈಲು ಸೇರಿ ಇನ್ನೂ 4 ವರ್ಷಗಳ ಶಿಕ್ಷೆ ಬಾಕಿ ಇತ್ತು. ಈ ಮಧ್ಯೆ ದೇವೇಗೌಡರ ತಮ್ಮನಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿ ಆ ಕಷ್ಟದ ಸ್ಥಿತಿಯನ್ನು ಕಂಡು ಮರುಗಿದ ಹೆಚ್.ಡಿ. ದೇವೇಗೌಡರು, ತಾವೊಬ್ಬ ಮಾಜಿ ಪ್ರಧಾನಿ ಎಂಬುದನ್ನೂ ಬದಿಗೊತ್ತಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಖುದ್ದಾಗಿ ಫೋನ್ ಮಾಡಿದ್ದರು. ಆಗ ಹೈಕೋರ್ಟ್ ಜಡ್ಜ್ , 'ಮಾಜಿ ಪ್ರಧಾನಿ ಪತ್ನಿ ಮೇಲೆಯೇ ದಾಳಿಯಾಗಿದೆ, ಅಪರಾಧಿಗೆ ಮರಣದಂಡನೆ ಕೊಡಬೇಕು ಎಂದು ದೇಶ ಚರ್ಚಿಸುತ್ತಿದೆ, ನೀವೇನೋ ಬಿಡುಗಡೆ ಮಾಡಿ ಅಂತಿದ್ದೀರಲ್ಲ' ಎಂದು ಆಶ್ಚರ್ಯಪಟ್ಟರು. ಆದರೆ ನನ್ನ ತಮ್ಮ ಸಾಯುವ ಸ್ಥಿತಿಯಲ್ಲಿದ್ದಾನೆ. ಆತನ ಕೊನೆಗಾಲದಲ್ಲಿ ಮಗನ ಜೊತೆ ಇರಲಿ ಎಂದು ಕೇಳಿಕೊಂಡು ನಾನು ಲೋಕೇಶ್‌ನನ್ನು ಜೈಲಿನಿಂದ ಬಿಡಿಸಿದೆ, ಎಂದು ಭಾವನಾತ್ಮಕವಾಗಿ ನುಡಿದಿದ್ದರು.

ಪತ್ನಿ ಚೆನ್ನಮ್ಮ ಯಾವುದೇ ಬೇಸರ ಮಾಡಿಕೊಳ್ಳಲಿಲ್ಲ

ತಮ್ಮ ಜೀವನದ ಅತ್ಯಂತ ಕಠಿಣ ಸಂದರ್ಭದಲ್ಲೂ ಪತ್ನಿ ಚೆನ್ನಮ್ಮ ತೋರಿದ ಸಹನೆ ಮತ್ತು ತ್ಯಾಗವನ್ನು ದೇವೇಗೌಡರು ಮುಕ್ತಕಂಠದಿಂದ ಶ್ಲಾಘಿಸಿದ್ದರು. ತಮ್ಮ ಮೇಲೆ ಆಸಿಡ್ ಹಾಕಿ ವಿಕಾರಗೊಳಿಸಿದ ಅಪರಾಧಿಯನ್ನು ಪತಿ ಗೌಡರು ಜೈಲಿನಿಂದ ಬಿಡಿಸಿದಾಗಲೂ ಚೆನ್ನಮ್ಮ ಅವರು ಯಾವುದೇ ಬೇಸರ ಮಾಡಿಕೊಳ್ಳಲಿಲ್ಲ. ಪತಿಯ ಪ್ರತಿಯೊಂದು ನಿರ್ಧಾರಕ್ಕೂ ಬೆಂಬಲವಾಗಿ ನಿಲ್ಲುವ ಅವರ ಸ್ವಭಾವವೇ ದೇವೇಗೌಡರನ್ನು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆಸಲು ಸಾಧ್ಯವಾಯಿತು. 94ರ ಹರೆಯದಲ್ಲಿ ದೇವೇಗೌಡರು ಆರೋಗ್ಯವಾಗಿದ್ದಾರೆ ಎಂದಾದರೆ ಚೆನ್ನಮ್ಮ ಅವರ ಪ್ರೀತಿ, ಕಾಳಜಿಯ ಪಾಲೇ ಹೆಚ್ಚಿದೆ. ದಂಪತಿಗೆ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಶಾಸಕ ಹೆಚ್.ಡಿ. ರೇವಣ್ಣ ಸೇರಿದಂತೆ ನಾಲ್ವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 25 ವರ್ಷಗಳ ಹಿಂದೆ ನಡೆದ ಈ ಕರಾಳ ಘಟನೆ ಮತ್ತು ಅದರ ಬೆನ್ನಲ್ಲೇ ನಡೆದ ಕ್ಷಮಾಪಣೆಯ ರಾಜಕಾರಣ ದೊಡ್ಡಗೌಡರ ಕೌಟುಂಬಿಕ ಮತ್ತು ಮಾನವೀಯ ಗುಣಕ್ಕೆ ಸಾಕ್ಷಿಯಾಗಿದೆ.