ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಶ್ರೀಮತಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯು ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ತಮ್ಮ ಪತ್ನಿ 'ಅನ್ನಪೂರ್ಣೆ' ಎಂದು ಭಾವುಕರಾಗಿ ಸ್ಮರಿಸಿದ ದೇವೇಗೌಡರು, ಅವರ ಯಶಸ್ಸಿನ ಹಿಂದಿನ ಶಕ್ತಿಯನ್ನು ಕೊಂಡಾಡಿದರು. ಕುಟುಂಬಸ್ಥರು, ರಾಜಕೀಯ ಗಣ್ಯರು ಹಾಗೂ ಅಪಾರ ಜನಸ್ತೋಮದ ಸಮ್ಮುಖದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳು ನಡೆದವು.
ಹಾಸನ (ಹೊಳೆನರಸೀಪುರ): ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ, ಸರಳತೆಯ ಸಾಕಾರಮೂರ್ತಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಬಳಿಯ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳು ನಡೆದವು. ಈ ಮೂಲಕ ಚೆನ್ನಮ್ಮ ಮರಳಿ ಭೂ ತಾಯಿ ಒಡಲು ಸೇರಿದರು. ಅಂತಿಮ ಸಂಸ್ಕಾರದ ವೇಳೆ 4 ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ನೆಂಟರು, ಕುಟುಂಬಸ್ಥರು. ರಾಜಕೀಯ ನಾಯಕರು ಸೇರಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಊರ ಮತ್ತು ಪರವೂರು ಜನ ಜಾತಿ ಬೇದವೆನ್ನದೆ ನೆರೆದಿದ್ದರು. ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ಪಾರ್ಥಿವ ಶರೀರವನ್ನು ತರುವಾಗಲೂ ಮಾರ್ಗದುದ್ದಕ್ಕೂ ಸಹಸ್ರಾರು ಅಭಿಮಾನಿಗಳು ಭಾವುಕರಾಗಿ ತಮ್ಮ ನೆಚ್ಚಿನ 'ಅಮ್ಮ'ನಿಗೆ ಅಂತಿಮ ನಮನ ಸಲ್ಲಿಸಿದರು.
"ನನ್ನ ಹೆಂಡತಿ ಅನ್ನಪೂರ್ಣೆ, ಆಕೆ ನಗುನಗುತ್ತಲೇ ವಿದಾಯ ಹೇಳಿದ್ದಾಳೆ" - ಎಚ್.ಡಿ. ದೇವೇಗೌಡ
ಅಂತ್ಯಕ್ರಿಯೆಯ ವಿಧಿವಿಧಾನಗಳ ಬಳಿಕ ಭಾವುಕರಾಗಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ತಮ್ಮ ಸುದೀರ್ಘ 72 ವರ್ಷಗಳ ದಾಂಪತ್ಯದ ಒಡನಾಟ ಹಾಗೂ ಪತ್ನಿಯ ಮೌನ ಹೋರಾಟವನ್ನು ನೆನೆದು ಕಣ್ಣೀರು ಹಾಕಿದರು. ಹರದನಹಳ್ಳಿ ಬೆಟ್ಟದ ರಂಗನಾಥಸ್ವಾಮಿಯ ಆಶೀರ್ವಾದದಿಂದ ನಾನು ದೇಶದ ಪ್ರಧಾನಮಂತ್ರಿಯಾಗಲು ಸಾಧ್ಯವಾಯಿತು. ಆ ಉನ್ನತ ಸ್ಥಾನದ ಯಶಸ್ಸಿನ ಹಿಂದೆ ನನ್ನ ಅಗಲಿ ಹೋಗಿರುವ ಹೆಂಡತಿ ಚೆನ್ನಮ್ಮಳ ಶ್ರಮ ಹಾಗೂ ತ್ಯಾಗವೂ ಅಡಗಿದೆ. ನನ್ನ ಹೆಂಡತಿ ಅನ್ನಪೂರ್ಣೆ. ನನ್ನ ಶ್ರೀಮತಿ ಆತ್ಮಕ್ಕೆ ಶಾಂತಿ ಇದೆ. ನಗು ನಗುತಾ ಹೋಗ್ತಾರೆ. ನನ್ನ ಮಕ್ಕಳು ಮತ್ತು ಅಳಿಯಂದಿರ ಇಚ್ಛೆಯಂತೆ ಅವಳ ನೆನಪು ಸದಾ ಹಸಿರಾಗಿರಲು ಇಲ್ಲಿಯೇ ಸಮಾಧಿ ಮಾಡಲಾಗುತ್ತಿದೆ. ಅವಳ ಆತ್ಮಕ್ಕೆ ಖಂಡಿತ ಶಾಂತಿ ಸಿಗುತ್ತದೆ. 11ನೇ ದಿನದ ಕಾರ್ಯವನ್ನು ಎಲ್ಲರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಿದ್ದೇವೆ. ಪ್ರಕೃತಿ ಸಹಕಾರ ಮಾಡಬೇಕು. ಮುಂದಿನ ಎಲ್ಲ ಕಾರ್ಯಗಳನ್ನು ರಮೇಶ್ ಅವರು ನೋಡಿಕೊಳ್ಳಲಿದ್ದಾರೆ ಎಂದು ಗದ್ಗದಿತರಾಗಿ ನುಡಿದರು.
"ನಮಗೆ ಮಾತ್ರವಲ್ಲ, ಇಡೀ ನಾಡಿಗೆ ಅವಳು ಅಮ್ಮ" - ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರವನ್ನು ಕಂಡು ಭಾವುಕರಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರ ಹಾಗೂ ಮಾಧ್ಯಮಗಳಿಗೆ ಪ್ರತ್ಯೇಕವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಮಧ್ಯರಾತ್ರಿಯಿಂದ ಹಿಡಿದು ಮುಂಜಾನೆಯವರೆಗೂ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಅಮ್ಮನ ದರ್ಶನ ಪಡೆದಿದ್ದಾರೆ. ನಮ್ಮ ಕುಟುಂಬಕ್ಕೆ ಅಮ್ಮ ಅಲ್ಲ, ಎಲ್ಲರಿಗೂ ಅಮ್ಮ ಎಂದು ಭಾವಿಸಿ ಬಂದಿದ್ದೀರಿ. ಎಲ್ಲರಿಗೂ ಧನ್ಯವಾದಗಳು. ರಾಜ್ಯ ಸರ್ಕಾರವು ಸರ್ಕಾರಿ ಗೌರವ ಸಲ್ಲಿಕೆ ಮಾಡಿದೆ. ರಾಜ್ಯ ಸರ್ಕಾರಕ್ಕೂ ವಂದನೆ ಸಲ್ಲಿಸುತ್ತೇನೆ. ನಮ್ಮ ತಂದೆ ತಾಯಿ ಬದುಕು ಎಷ್ಟು ಆದರ್ಶ ವಾಗಿತ್ತು ಎಂಬುದನ್ನು ಮಾಧ್ಯಮಗಳು ತೋರಿಸಿವೆ. ಎಲ್ಲಾ ಮಾಧ್ಯಮಗಳಿಗೂ ಧನ್ಯವಾದ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅಂತಿಮ ವಿಧಿ ವಿಧಾನಗಳ ಸಮಯದಲ್ಲಿ ಹೇಳಿಕೆ ನೀಡಿದರು.
ಪಕ್ಷಾತೀತ ನಮನ ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಹೊತ್ತ ವಾಹನವು ಸಾಗಿದ ರಾಷ್ಟ್ರೀಯ ಹೆದ್ದಾರಿಯ ದಾರಿಯುದ್ದಕ್ಕೂ ಭಾರಿ ಜನಸ್ತೋಮ ಜಮಾಯಿಸಿತ್ತು. ನೆಲಮಂಗಲ, ಕುಣಿಗಲ್ ವ್ಯಾಪ್ತಿಯ ನಾಗಮಂಗಲ, ಬೆಳ್ಳೂರು ಕ್ರಾಸ್ ಹಾಗೂ ಹಾಸನ ಜಿಲ್ಲೆಯ ಗಡಿಯಾದ ಹಿರಿಸಾವೆ ಸೇರಿದಂತೆ ಹಲವೆಡೆ ಅಭಿಮಾನಿಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಂಬನಿ ಮಿಡಿದರು.ದೇವೇಗೌಡರ ಕಾರನ್ನು ಸುತ್ತುವರಿದ ಅಭಿಮಾನಿಗಳು ಮತ್ತು ಮಹಿಳೆಯರು ತೀವ್ರ ಭಾವುಕರಾಗಿ ಮುಖಂಡರಿಗೆ ಸಾಂತ್ವನ ಹೇಳಿದರು. ಪಕ್ಷದ ಭೇದ-ಭಾವ ಮರೆತು ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಹೊಳೆನರಸೀಪುರಕ್ಕೆ ಧಾವಿಸಿ ಬಂದು ಚೆನ್ನಮ್ಮ ಅವರಿಗೆ ಅಂತಿಮ ನಮನ ಸಲ್ಲಿಸುವ ಮೂಲಕ ನಾಡಿನ ಹಿರಿಯ ಚೇತನಕ್ಕೆ ಗೌರವ ಸೂಚಿಸಿದರು. ಕೌಟುಂಬಿಕ ಧಾರ್ಮಿಕ ವಿಧಿವಿಧಾನಗಳ ನಂತರ ಅರ್ಚಕರ ಮಾರ್ಗದರ್ಶನದಲ್ಲಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯ ಮಹಾ ಪೂಜೆ ನೆರವೇರಿತು. ಆಡಂಬರವಿಲ್ಲದೆ ಬದುಕಿದ 'ದೊಡ್ಡಗೌಡರ ಮನೆ ಯಜಮಾನಿ' ಮಣ್ಣಿನ ಮಗಳಾಗಿ ಹಾಸನದ ಮಣ್ಣಿನಲ್ಲಿಯೇ ಲೀನವಾದರು.


