ಚೆನ್ನೈ[ಡಿ.08]: ತಮಿಳುನಾಡಿನ ಚೆನ್ನೈನಲ್ಲಿರುವ ರೇಲಾ ಆಸ್ಪತ್ರೆ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ್​ ಸ್ವಾಮೀಜಿಗಳ ಹೆಲ್ತ್​ ಬುಲೆಟಿನ್​ ಬಿಡುಗಡೆ ಮಾಡಿದೆ. 

ರೇಲಾ ವೈದ್ಯರಿಂದ ಶ್ರೀಗಳಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶ್ರೀಗಳಿಗೆ ಈ ಹಿಂದೆ ಅಳವಡಿಸಲಾಗಿದ್ದ ಮೆಟಲ್​ ಹಾಗೂ ಪ್ಲಾಸ್ಟಿಕ್​ ಸ್ಟಂಟ್ಸ್​ಗಳನ್ನು ತೆಗೆಯಲಾಗಿದ್ದು, ಈಗಾಗಲೇ ಅರವಳಿಕೆಯಿಂದ ಶ್ರೀಗಳು ಎಚ್ಚರಗೊಂಡಿದ್ದಾರೆ. 

ಶಸ್ತ್ರ ಚಿಕಿತ್ಸೆ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಸದ್ಯ ಶ್ರೀಗಳನ್ನು ಐಸಿಯೂನಲ್ಲಿ ಇಟ್ಟು ಪರೀಕ್ಷಿಸಲಾಗುತ್ತಿದೆ. ಅರವಳಿಕೆಯಿಂದ ಎಚ್ಚರಗೊಂಡ ಶ್ರೀಗಳು ಎಲ್ಲರ ಜೊತೆ ಲವಲವಕೆಯಿಂದ ಮಾತನಾಡುತ್ತಿದ್ದಾರೆ. ಯಾವುದೇ ಆತಂಕ ಬೇಡ ಎಂದು ರೇವಾ ಆಸ್ಪತ್ರೆ ಮೂಲಗಳು ತಿಳಿಸಿವೆ.

​ ಸಿದ್ದಗಂಗಾ ಶ್ರೀಗಳ ಶಸ್ತ್ರಚಿಕಿತ್ಸೆ ಯಶಸ್ವಿ: ಭಕ್ತರಲ್ಲಿ ಸಂತಸ

ಇಂದು [ಶನಿವಾರ] ಶಾಸಕ ವಿ. ಸೋಮಣ್ಣ, ಮಾಜಿ ಸಚಿವ ಬಸವರಾಜ ರಾಯರಡ್ಡಿ ಆಸ್ಪತ್ರೆಗೆ ಭೇಟಿ ನೀಡಿ, ಶ್ರೀಗಳ ಆರೋಗ್ಯ ವಿಚಾರಿಸಿದರು, 

ಮೇದೋಜ್ಜೀರಕ ಗ್ರಂಥಿಯಿಂದ ಪಿತ್ತಕೋಶಕ್ಕೆ ಹೋಗಬೇಕಾದ ನೀರಿನ ಅಂಶ ಸರಾಗವಾಗಿ ಹೋಗದ ಕಾರಣ ಶ್ರೀಗಳಿಗೆ 11 ಸ್ಟೆಂಟ್ ಗಳನ್ನು ಅಳವಡಿಸಲಾಗಿತ್ತು. ಇಷ್ಟಾದರೂ ಮೇದೋಜ್ಜೀರಕ ಗ್ರಂಥಿಯಿಂದ ಹೋಗುತ್ತಿದ್ದ ನೀರಿನ ಅಂಶ ಗಟ್ಟಿಯಾಗಿ ನಿಲ್ಲುತ್ತಿತ್ತು. 

ಪರಿಣಾಮವಾಗಿ ಆ ಭಾಗದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸಿದ್ದಗಂಗಾ ಶ್ರೀಗಳಿಗೆ ಬೈಪಾಸ್ ಸರ್ಜರಿ ಅಗತ್ಯವಿತ್ತು. ಹೀಗಾಗಿ ಶಿವಕುಮಾರ ಸ್ವಾಮೀಜಿಯನ್ನು ಸರ್ಜರಿಗಾಗಿ ಶುಕ್ರವಾರದಂದು ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಭಕ್ತರಲ್ಲಿ ಸಂತಸ ಮನೆ ಮಾಡಿದೆ.