ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ನಡೆದ ಹೋರಾಟದಲ್ಲಿ ಸ್ವಾಮೀಜಿಗಳ ಮೇಲೆ ದಾಖಲಾಗಿರುವ ಎಫ್ಐಆರ್ ಅನ್ನು ಪರಿಶೀಲಿಸಿ ವಾಪಸ್ ತೆಗೆಯಲು ಹೇಳಿರುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರು (ಜೂ.09): ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ನಡೆದ ಹೋರಾಟದಲ್ಲಿ ಸ್ವಾಮೀಜಿಗಳ ಮೇಲೆ ದಾಖಲಾಗಿರುವ ಎಫ್ಐಆರ್ ಅನ್ನು ಪರಿಶೀಲಿಸಿ ವಾಪಸ್ ತೆಗೆಯಲು ಹೇಳಿರುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೋರಾಟದಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳನ್ನು ಎಫ್ಐಆರ್ ನಲ್ಲಿ ಸೇರಿಸುವುದು ಬೇಡ ಎಂದು ಹೇಳಿದ್ದೇನೆ. ಸ್ವಾಮೀಜಿಗಳಿಗೆ ಗೌರವ ಕೊಡುವಂಥ ಕೆಲಸ ಮಾಡಬೇಕಾಗತ್ತದೆ ಎಂದರು. ಸ್ವಾಮೀಜಿಗಳನ್ನು ಹೋರಾಟಕ್ಕೆ ಕರೆದಿದ್ದಾರೆ, ಅವರು ಹೋಗಿದ್ದಾರೆ. ಆದ್ದರಿಂದ ಅದನ್ನು ಪುನರ್ ಪರಿಶೀಲನೆ ಮಾಡಿ ಅಂತ ಎಸ್ಪಿಗೆ ತಿಳಿಸಿದ್ದೇನೆ ಎಂದರು.

ಹೋರಾಟದಲ್ಲಿ ಸರ್ಕಾರಿ ಬಸ್ ಗೆ ಕಲ್ಲು ಹೊಡೆದವರು. ಸರ್ಕಾರಿ ವಾಹನಗಳ ಗಾಳಿ ಬಿಟ್ಟಿದ್ದರ ಬಗ್ಗೆ ಪರಿಶೀಲನೆ ಮಾಡುವಂತೆ ಸೂಚಿಸಿದ್ದೇನೆ. ಪೊಲೀಸರ ಬಳಿ ಸಿಸಿಟಿವಿ ದೃಶ್ಯವಳಿ ಇದೆ, ಪರಿಶೀಲಿಸಿ ಯಾರು ಕಾನೂನು ವಿರುದ್ಧ ನಡೆದುಕೊಂಡಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು. ಆರ್ಸಿಬಿ ವಿಜಯೋತ್ಸವದ ವೇಳೆ ಅಪಾಯದ ಮುನ್ನೆಚ್ಚರಿಕೆ ಸಂಬಂಧ ವಿಧಾನಸೌಧ ಡಿಸಿಪಿ ಪತ್ರ ವಿಚಾರದ ಬಗ್ಗೆ ಮಾತನಾಡಿದ ಪರಮೇಶ್ವರ್ ತನಿಖೆ ಪ್ರಾರಂಭವಾಗಿದೆ. ಆದ್ದರಿಂದ ನಾವು ಏನನ್ನೂ ಹೇಳಿಕೆ ಕೊಡುವುದು ಸರಿಕಾಣುವುದಿಲ್ಲ ಎಂದರು. ಸ್ವಾಮೀಜಿಗಳಿಂದ ಸಿಎಂ, ಡಿಸಿಎಂ ಹಾಗೂ ಗೃಹಸಚಿವರ ವಿರುದ್ಧ ದೂರು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ದೂರನ್ನು ಕೊಡಲಿ. ಕೊಡೋದಕ್ಕೆ ನಾವು ಬೇಡವೆಂದು ಹೇಳೋದಕ್ಕೆ ಆಗುತ್ತಾ ಎಂದರು.

ಹೇಮಾವತಿ ಕೆನಾಲ್ ವಿರೋಧಿಗಳ ಡೆಡ್ ಲೈನ್ ವಿಚಾರದ ಬಗ್ಗೆ ಮಾತನಾಡಿದ ಅವರು, ಸರ್ಕಾರ ಏನು ತೀರ್ಮಾನ ಮಾಡಿದೆಯೋ ಅದರ ಪ್ರಕಾರ ಕೆಲಸಗಳು ನಡೆಯುತ್ತವೆ. ಅವರು ಕೇಳಿರುವುದು ನಮಗೊಂದಿಷ್ಟು ಸಮಯಕೊಡಿ. ನಮ್ಮ ಜೊತೆ ಮಾತನಾಡಿ ಎಂದು. ಅದಕ್ಕೆ ನಾನು, ನೀರಾವರಿ ಸಚಿವರು, ಡಿಸಿಎಂಗೆ ಹೇಳಿದ್ದೇವೆ, ಡಿಸಿಎಂ ಸಮಯ ಕೊಟ್ಟ ಮೇಲೆ ಅವರ ಜೊತೆ ಕೂತು ಮಾತನಾಡುವ ಪ್ರಯತ್ನ ಮಾಡುತ್ತೇನೆ ಎಂದರು.

ಕೆನಾಲ್ ಲಿಂಕ್ ವಿಚಾರವಾಗಿ ನೀರಾವರಿ ಸಚಿವರು ತೆಗೆದುಕೊಳ್ಳುವಂಥ ತೀರ್ಮಾನ ಅಂತಿಮವಾಗಿ ಸರ್ಕಾರ ತೆಗೆದುಕೊಳ್ಳುವ ತೀರ್ಮಾನ ಆಗಿರುತ್ತದೆ. ನಮ್ಮ ಜಿಲ್ಲೆಯ ರೈತರ ಮುಖಂಡರ ಜೊತೆ ಸಭೆ ಮಾಡಿ ಅವರ ಮನವೊಲಿಸುವ ಪ್ರಯತ್ನ ಮಾಡ್ತೀರಾ ಎಂದು ನೀರಾವರಿ ಸಚಿವರನ್ನೇ ಕೇಳಿದ್ದೇನೆ ಎಂದರು.

ನೈತಿಕತೆ ಜೆಡಿಎಸ್, ಬಿಜೆಪಿಗೆ ಇಲ್ಲ: ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರ ಬಗ್ಗೆ ಮಾತನಾಡುವ ನೈತಿಕತೆ ಜೆಡಿಎಸ್, ಬಿಜೆಪಿಗೆ ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್‌ ಹೇಳಿದ್ದಾರೆ.ಇದು ರಾಜಕೀಯ ಮಾತನಾಡುವ ಸಮಯವಲ್ಲ, ಪರಮೇಶ್ವರ್ ಅವರು ಮೆರವಣಿಗೆಗೆ ಅವಕಾಶ ನೀಡದಿದ್ದಾಗ ಪ್ರತಿಪಕ್ಷದವರು ಯಾವ ರೀತಿ ಜನರನ್ನ ಪ್ರಚೋದಿಸಿ ಗೃಹ ಸಚಿವರ ಆತ್ಮವಿಶ್ವಾಸ ಕುಗ್ಗಿಸಲು ಪ್ರಯತ್ನಿಸಿದರು ಎಂಬುದು ಕರ್ನಾಟಕದ ಜನತೆಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿದೆ. ಇಂತಹ ಘಟನೆಗಳು ನಡೆದಿರುವುದು ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ. ನಮ್ಮ ವ್ಯವಸ್ಥೆಯ ಬಗ್ಗೆ ನಮಗೆ ನಾವೇ ಅವಲೋಕನ ಮಾಡಿಕೊಳ್ಳಬೇಕಾಗಿ. ಇದು ಗೃಹ ಸಚಿವರ ಅಥವಾ ಸರ್ಕಾರದ ವೈಫಲ್ಯವನ್ನು ಟೀಕಿಸುವ ಬರದಲ್ಲಿ ವೈಯುಕ್ತಿಕ ದಾಳಿಗೆ ಮುಂದಾಗಿರುವುದು ರಾಜಕೀಯ ಪಕ್ಷಗಳ ಹತಾಶ ಮನೋಭಾವನೆ ಗೋಚರಿಸುತ್ತದೆ ಎಂದಿದ್ದಾರೆ.