ಕಮಲ ರೀತಿ ಶಿವಮೊಗ್ಗ ಏರ್‌ಪೋರ್ಟ್ ನಿರ್ಮಾಣ: ಕೈ ಕಿಡಿ!
* ಪಕ್ಷಗಳ ಚಿಹ್ನೆ ಬಳಕೆಗೆ ಸುಪ್ರೀಂ ನಿರ್ಬಂಧ: ಬ್ರಿಜೇಶ್ ಕಾಳಪ್ಪ
* ಕಮಲ ರೀತಿ ಶಿವಮೊಗ್ಗ ಏರ್‌ಪೋರ್ಟ್ ನಿರ್ಮಾಣ: ಕೈ ಕಿಡಿ
* ವಿನ್ಯಾಸ ಬದಲಿಸದಿದ್ದರೆ ರಸ್ತೆಗಿಳಿದು ಹೋರಾಟ ಮಾಡುವ ಎಚ್ಚರಿಕೆ
ಬೆಂಗಳೂರು(ಜೂ.22): ಶಿವಮೊಗ್ಗ ವಿಮಾನ ನಿಲ್ದಾಣವನ್ನು ಬಿಜೆಪಿ ಚಿಹ್ನೆ ಕಮಲದ ಆಕಾರದಲ್ಲಿ ನಿರ್ಮಿಸಲಾಗುತ್ತಿದ್ದು, ಕೂಡಲೇ ಈ ಕಾಮಗಾರಿ ನಿಲ್ಲಿಸಿ ವಿನ್ಯಾಸ ಬದಲಿಸಬೇಕು. ಇಲ್ಲದಿದ್ದರೆ ರಸ್ತೆಗಿಳಿದು ಹೋರಾಟ ನಡಸಬೇಕಾಗುತ್ತದೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಹಣ ಹಾಗೂ ಜಾಗವನ್ನು ಪಕ್ಷದ ಪ್ರಚಾರಕ್ಕೆ ಬಳಸುವಂತಿಲ್ಲ ಎಂದು ನ್ಯಾಯಾಲಯ, ಚುನಾವಣಾ ಆಯೋಗ ಹೇಳಿವೆ. ಆದ್ದರಿಂದ ಚಿಹ್ನೆ ಬದಲಿಸಬೇಕು. ಇಲ್ಲದಿದ್ದರೆ ಬಿಜೆಪಿ ಚಿಹ್ನೆ ಕಳೆದು ಕೊಳ್ಳಬೇಕಾಗುತ್ತದೆ ಎಂದರು. ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅಧಿಕಾರದಲ್ಲಿದ್ದಾಗ ತಮ್ಮ ಪಕ್ಷದ ಚಿಹ್ನೆಯಾದ ಆನೆಯ ಆಕಾರದಲ್ಲಿ ಹಲವು ಪ್ರತಿಮೆ ನಿರ್ಮಾಣ ಮಾಡಿದ್ದರು. ಈ ಬಗೆಗಿನ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ರಾಜಕೀಯ ಪಕ್ಷದ ಚಿಹ್ನೆಯ ಪ್ರಚಾರಕ್ಕಾಗಿ ತೆರಿಗೆದಾರರ ಹಣ ಬಳಸುವಂತಿಲ್ಲ ಎಂದು 2016 ರಲ್ಲಿ ತೀರ್ಪು ನೀಡಿದೆ ಎಂದು ತಿಳಿಸಿದರು.
ಅಲ್ಲದೆ, ಚುನಾವಣಾ ಆಯೋಗವು 2016ರಲ್ಲಿ ನಿರ್ಣಯವೊಂದನ್ನು ಕೈಗೊಂಡಿದ್ದು, ಅದರ ಪ್ರಕಾರ ಸಾರ್ವಜನಿಕ ಹಣ ಮತ್ತು ಜಾಗವನ್ನು ಬಳಸಿಕೊಂಡು ರಾಜಕೀಯ ಪಕ್ಷ ಅಥವಾ ಅದರ ಚಿಹ್ನೆಗೆ ಪ್ರಚಾರ ನೀಡುವುದು ಪಾರದರ್ಶಕ ಚುನಾವಣಾ ನೀತಿಗೆ ವಿರುದ್ಧ. ಈ ನೀತಿ ಉಲ್ಲಂಸಿದರೆ ಸದರಿ ಚಿಹ್ನೆಯನ್ನು ರದ್ದುಪಡಿಸಬಹುದು ಎಂದು ಅವರು ವಿವರಿಸಿದರು.