ಕೇಂದ್ರ ಸರ್ಕಾರದಿಂಧ ಈ 2 ನಗರಗಳ ಜನತೆಗೆ ಗುಡ್ ನ್ಯೂಸ್ ಒಂದನ್ನು ನೀಡಲಾಗಿದೆ. 10ನೇ ಸುತ್ತಿನ ಅನಿಲ ಪೂರೈಕೆ ಲೈಸೆನ್ಸಿಂಗ್‌ಗೆ ಬಿಡ್ಡಿಂಗ್‌ಗಳನ್ನು ಕರೆಯಲಾಗಿದ್ದು, ಈ ಸುತ್ತಿನಲ್ಲಿ 50 ನಗರಗಳಲ್ಲಿ ಪೈಪ್‌ ಮೂಲಕ ಮನೆಮನೆಗೆ ನೈಸರ್ಗಿಕ ಅನಿಲ ಪೂರೈಸುವ ಗುರಿ ಹೊಂದಲಾಗಿದೆ.

ನವದೆಹಲಿ :  10ನೇ ಸುತ್ತಿನ ಅನಿಲ ಪೂರೈಕೆ ಲೈಸೆನ್ಸಿಂಗ್‌ಗೆ ಬಿಡ್ಡಿಂಗ್‌ಗಳನ್ನು ಕರೆಯಲಾಗಿದ್ದು, ಈ ಸುತ್ತಿನಲ್ಲಿ 50 ನಗರಗಳಲ್ಲಿ ಪೈಪ್‌ ಮೂಲಕ ಮನೆಮನೆಗೆ ನೈಸರ್ಗಿಕ ಅನಿಲ ಪೂರೈಸುವ ಗುರಿ ಹೊಂದಲಾಗಿದೆ. ಬಿಡ್ಡಿಂಗ್‌ಗೆ ಒಳಗಾಗಲಿರುವ 50 ನಗರಗಳಲ್ಲಿ ಕರ್ನಾಟಕದ ಕಲಬುರಗಿ ಹಾಗೂ ಮೈಸೂರು ಕೂಡ ಸೇರಿವೆ.

ತೈಲ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ನಿಗಮ (ಪಿಎನ್‌ಜಿಆರ್‌ಬಿ), ದೇಶದ 50 ನಗರಗಳಿಗೆ ಮನೆಮನೆಗೆ ಪೈಪ್ ನ್ಯಾಚುರಲ್‌ ಗ್ಯಾಸ್‌ ಪೂರೈಸಲು 10ನೇ ಸುತ್ತಿನ ಬಿಡ್ಡಿಂಗ್‌ಗೆ ಅರ್ಜಿ ಆಹ್ವಾನಿಸಿದೆ. ಫೆಬ್ರವರಿ 5ರೊಳಗೆ ಹರಾಜಿನಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಬೇಕು.

ಇದಕ್ಕಾಗಿ ಬಿಡ್ಡರ್‌ಗಳು ಆಯಾ ನಗರದಲ್ಲಿ ಎಷ್ಟುಸಿಎನ್‌ಜಿ ಘಟಕ ಹಾಗೂ ಎಷ್ಟುಗೃಹಬಳಕೆ ಅನಿಲ ಘಟಕಗಳನ್ನು ಸ್ಥಾಪಿಸಬೇಕು? ಎಷ್ಟುಉದ್ದದ ಪೈಪ್‌ ಅಳವಡಿಸಬೇಕು? ದರ ಎಷ್ಟು? ಎಂಬ ಮಾಹಿತಿಗಳನ್ನು ನೀಡಬೇಕು. 50 ಲಕ್ಷ ಜನಸಂಖ್ಯೆಯ ನಗರಗಳ ಹರಾಜಿನಲ್ಲಿ ಪಾಲ್ಗೊಳ್ಳುವ ಕಂಪನಿಗಳ ನಿವ್ವಳ ಮೌಲ್ಯ 150 ಕೋಟಿ ರುಪಾಯಿಗಿಂತ ಕೆಳಗಿರಬಾರದು. 20ರಿಂದ 50 ಲಕ್ಷ ವರೆಗಿನ ನಗರಗಳ ಹರಾಜಿನಲ್ಲಿ ಭಾಗವಹಿಸುವ ಕಂಪನಿಗಳ ನಿವ್ವಳ ಮೌಲ್ಯ 100 ಕೋಟಿ ರು.ಗಿಂತ ಕೆಳಗಿರಬಾರದು.

2020ರೊಳಗೆ 1 ಕೋಟಿ ಮನೆಗಳಿಗೆ ಅನಿಲ ಸಂಪರ್ಕ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರಿ ಹಾಕಿದ್ದು, ಈ ಗುರಿ ತಲುಪುವ ನಿಟ್ಟಿನಲ್ಲಿ ಅನಿಲ ನಿಗಮ ಕಾರ್ಯೋನ್ಮುಖವಾಗಿವೆ. ಈಗಾಗಲೇ 9 ಸುತ್ತಿನ ಬಿಡ್ಡಿಂಗ್‌ಗಳು ಮುಗಿದಿವೆ. 9ನೇ ಸುತ್ತಿನಲ್ಲಿ ಅದಾನಿ ಗ್ಯಾಸ್‌, ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌, ಭಾರತ್‌ ಪೆಟ್ರೋಲಿಯಂ ಹಾಗೂ ಟೊರೆಂಟ್‌ ಗ್ಯಾಸ್‌- ಪ್ರಮುಖ ವಿಜೇತ ಕಂಪನಿಗಳು.