ಎಡಿಜಿಪಿ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ. ಸರ್ಕಾರದ ಆದೇಶ ಕೈಸೇರಿದ ಬಳಿಕ ನ್ಯಾಯಾಲಯಕ್ಕೆ ಎಡಿಜಿಪಿ ವಿರುದ್ಧ ಪಿಸಿ ಕಾಯ್ದೆ ಅಳವಡಿಕೆಗೆ ಕೋರಿಕೆ ಸಲ್ಲಿಸಲಾಗುತ್ತದೆ.
ಬೆಂಗಳೂರು(ಜು.05): ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ ಸಂಬಂಧ ಬಂಧಿತ ನೇಮಕಾತಿ ವಿಭಾಗದ ಮಾಜಿ ಮುಖ್ಯಸ್ಥ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಮೃತ್ ಪಾಲ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕ್ರಮ ಜರುಗಿಸಲು ರಾಜ್ಯ ಅಪರಾಧ ತನಿಖಾ ದಳಕ್ಕೆ (ಸಿಐಡಿ) ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ನೇಮಕಾತಿ ವಿಭಾಗ ಮುಖ್ಯಸ್ಥರಾಗಿ ಪಿಎಸ್‌ಐ ನೇಮಕಾತಿಯನ್ನು ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ಅಮೃತ್ ಪಾಲ್ ಅವರು ನಡೆಸಬೇಕಿತ್ತು. ಆದರೆ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕೆಲ ಅಭ್ಯರ್ಥಿಗಳಿಂದ ಹಣ ಪಡೆದು ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಲು ನೆರವಾಗಿ ಭ್ರಷ್ಟಾಚಾರ ನಡೆಸಿದ್ದಾರೆ. ಹೀಗಾಗಿ ಅಖಿಲ ಭಾರತ ಸೇವಾ ಅಧಿಕಾರಿಯಾಗಿರುವ ಅಮೃತ್ ಪಾಲ್ ವಿರುದ್ಧ ಭ್ರಷಾಚಾರ ನಿಗ್ರಹ ಕಾಯ್ದೆಯನ್ನು ದಾಖಲಿಸಲು ಪ್ರಾಸಿಕ್ಯೂಷನ್ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಸಿಐಡಿ ಮನವಿ ಮಾಡಿತ್ತು.
PSI Recruitment Scam: ಎಡಿಜಿಪಿ ಅಮೃತ್ ಪಾಲ್ ಸಿಐಡಿ ವಶಕ್ಕೆ
ಈ ಮನವಿ ಪುರಸ್ಕರಿಸಿದ ಕೇಂದ್ರ ಸರ್ಕಾರವು, ಎಡಿಜಿಪಿ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದೆ. ಸರ್ಕಾರದ ಆದೇಶ ಕೈಸೇರಿದ ಬಳಿಕ ನ್ಯಾಯಾಲಯಕ್ಕೆ ಎಡಿಜಿಪಿ ವಿರುದ್ಧ ಪಿಸಿ ಕಾಯ್ದೆ ಅಳವಡಿಕೆಗೆ ಕೋರಿಕೆ ಸಲ್ಲಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಪಿಎಸ್‌ಐ ಹಗರಣದಲ್ಲಿ ಬಂಧಿತರಾಗಿ ಅಮೃತ್ ಪಾಲ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಮೊದಲು ವಂಚನೆ, ದಾಖಲೆ ತಿದ್ದಿದ ಹಾಗೂ ಅಧಿಕಾರ ದುರ್ಬಳಕೆ ಹೀಗೆ ವಿವಿಧ ಆರೋಪಗಳಡಿ ತನಿಖೆ ನಡೆಸಿ ಎಡಿಜಿಪಿ ವಿರುದ್ಧ ನ್ಯಾಯಾಲಯಕ್ಕೆ ಸಿಐಡಿ ಆರೋಪ ಪಟ್ಟಿಸಲ್ಲಿಸಿದೆ. ಈಗ ಆ ಆರೋಪ ಪಟ್ಟಿಗೆ ಹೆಚ್ಚುವರಿಯಾಗಿ ಪಿಸಿ ಕಾಯ್ದೆಯನ್ನು ಸಹ ಸೇರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
