ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ರಾಜ್ಯದ ಜೈಲುಗಳಲ್ಲಿನ ಅಕ್ರಮಗಳನ್ನು ತಡೆಯಲು ಅತ್ಯಾಧುನಿಕ ಸೆಂಟ್ರಲ್ ಕಮಾಂಡ್ ಸೆಂಟರ್ ಅನ್ನು ಉದ್ಘಾಟಿಸಿದರು. ಈ ಕೇಂದ್ರದ ಮೂಲಕ 8 ಕೇಂದ್ರ ಹಾಗೂ 4 ಜಿಲ್ಲಾ ಕಾರಾಗೃಹಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಬೆಂಗಳೂರಿನಿಂದಲೇ ನೇರವಾಗಿ ಮೇಲ್ವಿಚಾರಣೆ ನಡೆಸಬಹುದು.

ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಉದ್ದೇಶದಿಂದ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ವತಿಯಿಂದ ಸ್ಥಾಪಿಸಲಾದ ಅತ್ಯಾಧುನಿಕ ಸೆಂಟ್ರಲ್ ಕಮಾಂಡ್ ಸೆಂಟರ್ ಅನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಂದು ಉದ್ಘಾಟಿಸಿದರು.

ಕಾರಾಗೃಹ ಹಾಗೂ ಸುಧಾರಣಾ ಸೇವಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಸ್ಥಾಪಿಸಲಾದ ಈ ಸೆಂಟ್ರಲ್ ಕಮಾಂಡ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು (ಡಿಜಿ–ಐಜಿಪಿ) ಸಲೀಂ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸೆಂಟ್ರಲ್ ಕಮಾಂಡ್ ಸೆಂಟರ್ ಉಪಯೋಗ ಏನು?

ಈ ಸೆಂಟ್ರಲ್ ಕಮಾಂಡ್ ಸೆಂಟರ್ ಮೂಲಕ ರಾಜ್ಯದ 8 ಕೇಂದ್ರ ಕಾರಾಗೃಹಗಳು ಹಾಗೂ 4 ಜಿಲ್ಲಾ ಕಾರಾಗೃಹಗಳಲ್ಲಿ ಅಳವಡಿಸಲಾದ ಎಲ್ಲಾ ಸಿಸಿಟಿವಿ ಕ್ಯಾಮರಾಗಳ ನೇರ ವೀಕ್ಷಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿರುವ ಜೈಲುಗಳ ಸಿಸಿಟಿವಿ ಕಂಟ್ರೋಲ್ ವ್ಯವಸ್ಥೆಯನ್ನು ಇದೀಗ ಬೆಂಗಳೂರು ಕೇಂದ್ರದಿಂದಲೇ ಒಂದೇ ಕಡೆ ಮೇಲ್ವಿಚಾರಣೆ ಮಾಡಬಹುದಾಗಿದೆ.

ಜೈಲುಗಳೊಳಗೆ ಮತ್ತು ಜೈಲು ಆವರಣದಲ್ಲಿ ಯಾರು ಒಳಗೆ ಬರುತ್ತಿದ್ದಾರೆ, ಯಾರು ಹೊರಗೆ ಹೋಗುತ್ತಿದ್ದಾರೆ, ಭೇಟಿ ನೀಡುವವರ ಮೇಲೆ ಸಮರ್ಪಕ ನಿಗಾ ವಹಿಸಲಾಗುತ್ತಿದೆಯೇ, ಅಧಿಕಾರಿಗಳು ಹಾಗೂ ಸಿಬ್ಬಂದಿ ಸರಿಯಾಗಿ ತಪಾಸಣೆ ನಡೆಸುತ್ತಿದ್ದಾರೆಯೇ ಎಂಬ ಎಲ್ಲಾ ಅಂಶಗಳನ್ನು ಒಂದೇ ಸ್ಥಳದಿಂದ ಗಮನಿಸಲು ಈ ಕಮಾಂಡ್ ಸೆಂಟರ್ ಸಹಕಾರಿಯಾಗಲಿದೆ.

ಕಮಾಂಡ್ ಸೆಂಟರ್‌ನ ಪ್ರಮುಖ ಉದ್ದೇಶ

ಜೈಲುಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ತಡೆಯುವುದು, ಶಿಸ್ತು ಪಾಲನೆಗೆ ಉತ್ತೇಜನ ನೀಡುವುದು, ಭದ್ರತಾ ಲೋಪಗಳನ್ನು ತಕ್ಷಣವೇ ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದು ಈ ಸೆಂಟ್ರಲ್ ಕಮಾಂಡ್ ಸೆಂಟರ್‌ನ ಪ್ರಮುಖ ಉದ್ದೇಶವಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಇದು ನೆರವಾಗಲಿದೆ.

ಜೈಲು ಆಡಳಿತದಲ್ಲಿ ಪಾರದರ್ಶಕತೆ, ಭದ್ರತೆ ಹಾಗೂ ಜವಾಬ್ದಾರಿತನವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಈ ವ್ಯವಸ್ಥೆ ಮಹತ್ವದ ಹೆಜ್ಜೆಯಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದರು. ಮುಂದಿನ ದಿನಗಳಲ್ಲಿ ತಂತ್ರಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ಜೈಲು ಸುಧಾರಣಾ ಕ್ರಮಗಳನ್ನು ಬಲಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.