ನವದೆಹಲಿ [ಜ.07]:  ಕಳೆದ ವರ್ಷದ ಭೀಕರ ಪ್ರವಾಹದ ಪರಿಹಾರ ಹಣ ಬಿಡುಗಡೆಯಲ್ಲಾಗುತ್ತಿದ್ದ ವಿಳಂಬ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತುಮಕೂರಲ್ಲಿ ಪ್ರಧಾನಿ ಮೋದಿ ಅವರ ಎದುರೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈಗ ಕೇಂದ್ರದಿಂದ ನೆರೆ ಪರಿಹಾರವಾಗಿ ರಾಜ್ಯಕ್ಕೆ 2ನೇ ಕಂತಿನ ಹಣ ಘೋಷಣೆಯಾಗಿದೆ. ಎನ್‌ಡಿಆರ್‌ಎಫ್‌ ನಿಧಿಯಡಿ ಈ ಬಾರಿ ರಾಜ್ಯಕ್ಕೆ 1869.85 ಕೋಟಿ ರು. ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಹಿಂದೆ ಕೇಂದ್ರ ಸರ್ಕಾರ 1200 ಕೋಟಿ ರು.ನ್ನು ಮಧ್ಯಂತರದ ಪರಿಹಾರವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ರಾಜ್ಯಕ್ಕೆ ಒಟ್ಟಾರೆ 3 ಸಾವಿರ ಕೋಟಿ ರು. ಪ್ರವಾಹ ಪರಿಹಾರವಾಗಿ ರಾಜ್ಯಕ್ಕೆ ಬಿಡುಗಡೆ ಮಾಡಿದಂತಾಗಿದೆ. ಈ ಮೂಲಕ ಕಳೆದ ವರ್ಷದ ಪ್ರವಾಹಕ್ಕಾಗಿ ದೇಶದಲ್ಲೇ ಅತಿಹೆಚ್ಚು ಪರಿಹಾರವನ್ನು ಕರ್ನಾಟಕ ಪಡೆದಂತಾಗಿದೆ.

ರಾಜ್ಯದಲ್ಲಿ ಕಳೆದ ಆಗಸ್ಟ್‌ನಲ್ಲಿ ಇತಿಹಾಸದಲ್ಲಿ ಕಂಡು ಕೇಳರಿಯದಷ್ಟುಪ್ರವಾಹ ಬಂದು ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭಾರೀ ಹಾನಿ ಹಾನಿ ಸಂಭವಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸಮೀಕ್ಷೆ ಮಾಡಿ ಹೋಗಿದ್ದರೂ ಪರಿಹಾರ ನೀಡಲು ಕೇಂದ್ರ ಸರ್ಕಾರ ಮೀನ ಮೇಷ ಎಣಿಸಿತ್ತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೇಂದ್ರ ಸಚಿವರನ್ನು ಭೇಟಿಯಾಗಿ ಪ್ರವಾಹ ಪರಿಹಾರಕ್ಕಾಗಿ ಮೂರ್ನಾಲ್ಕು ಬಾರಿ ಮನವಿ ಮಾಡಿಕೊಂಡಿದ್ದರು. ಕೇಂದ್ರ ಸಚಿವರಾಗಿರುವ ಡಿ.ವಿ. ಸದಾನಂದ ಗೌಡ ಮತ್ತು ಪ್ರಹ್ಲಾದ ಜೋಶಿ ಅವರೂ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾರನ್ನು ಭೇಟಿಯಾಗಿ ಶೀಘ್ರ ಪರಿಹಾರ ಬಿಡುಗಡೆಗೆ ಕೋರಿದ್ದರು. ಪ್ರತಿಪಕ್ಷಗಳೂ ಪ್ರವಾಹ ಪರಿಹಾರ ನೀಡಲು ಕೇಂದ್ರ ಸರ್ಕಾರ ತೋರುತ್ತಿದ್ದ ವಿಳಂಬವನ್ನೇ ಬಿಜೆಪಿಯ ವಿರುದ್ಧದ ಟೀಕೆಗೆ ಪ್ರಧಾನ ಅಸ್ತ್ರವನ್ನಾಗಿಸಿಕೊಂಡಿದ್ದವು.

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ: ಅಂತಿಮವಾಗಿ CM ಸಭೆಯಲ್ಲಿ ಏನಾಯ್ತು..?...

ಈ ಒತ್ತಡಗಳಿಂದಾಗಿ ಅ.4 ರಂದು ಕೇಂದ್ರ ಸರ್ಕಾರ ರಾಜ್ಯಕ್ಕೆ 1,200 ಕೋಟಿ ರು.ಗಳ ಮಧ್ಯಂತರ ಆರ್ಥಿಕ ನೆರವು ಘೋಷಿಸಿತ್ತು. ಆದರೆ ಈ ಹಣ ಏನಕ್ಕೂ ಸಾಲಲ್ಲ ಎಂದು ಆ ಬಳಿಕವೂ ರಾಜ್ಯ ಸರ್ಕಾರ ವಿವಿಧ ಮೂಲಗಳಿಂದ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಲೇ ಇತ್ತು. ಇತ್ತೀಚೆಗೆ ಪ್ರಧಾನಿ ಮೋದಿ ತುಮಕೂರಿಗೆ ಭೇಟಿ ನೀಡಿದ್ದಾಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮುಂದೆಯೇ ಈ ವಿಚಾರ ಪ್ರಸ್ತಾಪಿಸಿದ್ದರು. ‘ಕಿಸಾನ್‌ ಸಮ್ಮಾನ್‌’ ಯೋಜನೆ ಕಾರ್ಯಕ್ರಮದಲ್ಲಿ ಪ್ರಧಾನಿ ಸಮ್ಮುಖದಲ್ಲೇ ಪರಿಹಾರ ಬಿಡುಗಡೆಯಾಗದ ಕುರಿತು ಬೇಸರ ವ್ಯಕ್ತಪಡಿಸಿದ್ದರು. ಇದಾದ ನಾಲ್ಕು ದಿನದಲ್ಲೇ ದೇಶದ 7 ರಾಜ್ಯಗಳೊಂದಿಗೆ ಕರ್ನಾಟಕಕ್ಕೂ ಪ್ರಹಾರ ಪರಿಹಾರ ಘೋಷಣೆಯಾಗಿದೆ.

ಸೋಮವಾರ ಕೇಂದ್ರದ ಗೃಹ ಸಚಿವ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿ ಗೃಹ, ಹಣಕಾಸು, ಕೃಷಿ ಮತ್ತು ನೀತಿ ಆಯೋಗದ ಅಧಿಕಾರಿಗಳನ್ನು ಒಳಗೊಂಡಿದ್ದ ಉನ್ನತ ಮಟ್ಟದ ಸಮಿತಿಯು ಪ್ರವಾಹ ಪರಿಹಾರ ಘೋಷಿಸುವ ನಿರ್ಧಾರಕ್ಕೆ ಬಂತು. ಪ್ರವಾಹದಿಂದ ಸಂಕಷ್ಟಅನುಭವಿಸಿದ 7 ರಾಜ್ಯಗಳಿಗೆ 5908.56 ಕೋಟಿ ರು.ಗಳನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌)ಯಡಿ ಹೆಚ್ಚುವರಿ ಸಹಾಯದ ರೂಪದಲ್ಲಿ ನೀಡಲು ತೀರ್ಮಾನಿಸಲಾಯಿತು. ಇದರಲ್ಲಿ ಅಸ್ಸಾಂಗೆ 616.63 ಕೋಟಿ ರು., ಹಿಮಾಚಲ ಪ್ರದೇಶಕ್ಕೆ 284.93 ಕೋಟಿ ರು., ಮಧ್ಯಪ್ರದೇಶಕ್ಕೆ 1749.73 ಕೋಟಿ ರು., ಮಹಾರಾಷ್ಟ್ರಕ್ಕೆ 956.93 ಕೋಟಿ ರು., ತ್ರಿಪುರಾಕ್ಕೆ 63.32  ಕೋಟಿ ರು., ಉತ್ತರ ಪ್ರದೇಶಕ್ಕೆ 367.17 ಕೋಟಿ ರು. ಪರಿಹಾರ ಘೋಷಿಸಲಾಗಿದೆ. ಕರ್ನಾಟಕದ ನಂತರ ದೇಶದಲ್ಲಿ ಅತೀ ಹೆಚ್ಚು ಪ್ರವಾಹ ಪರಿಹಾರ ಪಡೆದ 2ನೇ ರಾಜ್ಯ ಮಧ್ಯಪ್ರದೇಶವಾಗಿದ್ದು, ಆ ರಾಜ್ಯಕ್ಕೆ 2749.73 ಕೋಟಿ ರು. ಪರಿಹಾರ ಬಿಡುಗಡೆ ಮಾಡಲಾಗಿದೆ.

ಸಂಪುಟ ವಿಸ್ತರಣೆ ಯಾವಾಗ? ಕೊನೆಗೂ ಬಾಯ್ಬಿಟ್ಟ ಯಡಿಯೂರಪ್ಪ...

35 ಸಾವಿರ ಕೋಟಿ ರು. ನಷ್ಟಅಂದಾಜು: ರಾಜ್ಯದಲ್ಲಿ ಕಳೆದ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದ ಸೃಷ್ಟಿಯಾಗಿದ್ದ ಪ್ರವಾಹದಿಂದಾಗಿ ರಾಜ್ಯ ಸರ್ಕಾರ 35,000 ಕೋಟಿ ರು.ಗೂ ಹೆಚ್ಚು ನಷ್ಟಅಂದಾಜಿಸಿತ್ತು. ಆದರೂ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್‌ ನಿಧಿಯಡಿ 3,500 ಕೋಟಿ ರು. ನೆರವಿನ ನಿರೀಕ್ಷೆಯಲ್ಲಿತ್ತು. ಆದರೆ ಕೇಂದ್ರ ಸರ್ಕಾರ ಈವರೆಗೆ ಒಟ್ಟಾರ 3000 ಕೋಟಿ ರು.ಗಳ ನೆರವು ನೀಡುವ ಮೂಲಕ ರಾಜ್ಯದ ನಿರೀಕ್ಷೆಗೆ ತಕ್ಕಮಟ್ಟಿಗೆ ಸ್ಪಂದಿಸಿದಂತಾಗಿದೆ. ಪ್ರವಾಹ ಬಂದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ತುರ್ತಾಗಿ ಸ್ಪಂದಿಸಿದ್ದರೂ ಹಣಕಾಸು ನೆರವು ನೀಡಲು ಮೀನಮೇಷ ಎಣಿಸಿದ್ದರ ಬಗ್ಗೆ ರಾಜ್ಯದಲ್ಲಿ ತೀವ್ರ ಜನಾಕ್ರೋಶ ಸೃಷ್ಟಿಯಾಗಿತ್ತು.