ಬೆಂಗಳೂರು(ಮಾ.10): ‘ಸಹೋದರರೂ ಆದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆಸಿದವರನ್ನು ಸುಮ್ಮನೆ ಬಿಡುವುದಿಲ್ಲ. ಒಂಬತ್ತು ಮಂದಿ ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಿರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿದೆ. ಈ ಪೈಕಿ ಕೆಲವರ ಹೆಸರನ್ನು ಉಲ್ಲೇಖಿಸಿ ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು’ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಡಿಟೆಕ್ಟಿವ್‌ ಏಜೆನ್ಸಿ ಮೂಲಕ ಷಡ್ಯಂತ್ರ ರೂಪಿಸಿದವರ ವಿರುದ್ಧ ತನಿಖೆ ನಡೆಸುತ್ತಿದ್ದೇವೆ. ಈಗಾಗಲೇ ಹೊರ ರಾಜ್ಯದ ಡಿಟೆಕ್ಟಿವ್‌ ಏಜೆನ್ಸಿ ತನಿಖೆ ಆರಂಭಿಸಿದೆ. ಎಲ್ಲಿ ಸಭೆ ನಡೆಸಿದ್ದಾರೆ, ಮೊಬೈಲ್‌ ಸಂಭಾಷಣೆ ಹಾಗೂ ಪ್ರಕರಣದ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ತಿಳಿಯಲಿದೆ. ಮೊಬೈಲ್‌ವೊಂದರಿಂದ ಎಲ್ಲರೂ ಸಿಕ್ಕಿ ಬೀಳಲಿದ್ದಾರೆ ಎಂದು ಹೇಳಿದರು.

ದೂರು ನೀಡುವ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ದೂರನ್ನು ಬೆಳಗಾವಿ, ಗೋಕಾಕ್‌ ಅಥವಾ ಬೆಂಗಳೂರಿನಲ್ಲಿ ನೀಡಬೇಕಾ ಎಂಬ ಬಗ್ಗೆ ವಕೀಲರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಗಾಳಿಯಲ್ಲಿ ಗುಂಡು ಹಾರಿಸುವ ರೀತಿ ದೂರು ನೀಡುವುದಿಲ್ಲ. ಷಡ್ಯಂತ್ರ ನಡೆಸಿದವರ ವಿರುದ್ಧ ಸಾಕ್ಷ್ಯ ಸಮೇತ ಹೆಸರು ಉಲ್ಲೇಖಿಸಿ ದೂರು ನೀಡುತ್ತೇವೆ. ಹೆಸರು ಹೇಳಿದರೆ ಸುಲಭವಾಗಿ ಜಾಮೀನು ಪಡೆದು ಹೊರಬರಲಿದ್ದಾರೆ. ಪೊಲೀಸ್‌ ತನಿಖೆ ಬಳಿಕ ಎಲ್ಲವೂ ಹೊರ ಬರಲಿದೆ. ನಮ್ಮ ಕುಟುಂಬಕ್ಕೆ ಧಕ್ಕೆಯಾಗಿದ್ದು, ಗೌರವವನ್ನು ಮತ್ತೆ ಪಡೆದುಕೊಳ್ಳುತ್ತೇವೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಾಲಚಂದ್ರ, ಪಕ್ಷದ ಸುಮಾರು ಹದಿನೈದು ಮಂದಿ ಶಾಸಕರು ಸೋಮವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು ನಿಜ. ಆದರೆ, ಅವರು ನನ್ನನ್ನು ಮಂತ್ರಿ ಮಾಡಿ ಎಂಬ ಬೇಡಿಕೆ ಇಟ್ಟಿಲ್ಲ. ಸರ್ಕಾರ ರಚನೆ ಮಾಡಲು ರಮೇಶ್‌ ಜಾರಕಿಹೊಳಿ ಅವರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಸಿ.ಡಿ. ವಿಚಾರದಲ್ಲಿ ರಮೇಶ್‌ ಜಾರಕಿಹೊಳಿ ಅವರಿಗೆ ಅನ್ಯಾಯವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಇತ್ಯರ್ಥಗೊಂಡು ಒಳ್ಳೆಯದಾಗಲಿದೆ ಎಂಬ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ತಿಳಿಸಿದರು.

ನನ್ನ ಮಂತ್ರಿ ಮಾಡುವ ಬೇಡಿಕೆ ಇಲ್ಲ

ಪಕ್ಷದ ಸುಮಾರು 15 ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದು ನಿಜ. ಆದರೆ, ಅವರು ನನ್ನನ್ನು ಮಂತ್ರಿ ಮಾಡಿ ಎಂಬ ಬೇಡಿಕೆ ಇಟ್ಟಿಲ್ಲ. ಸರ್ಕಾರ ರಚನೆ ಮಾಡಲು ರಮೇಶ್‌ ಜಾರಕಿಹೊಳಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು.

- ಬಾಲಚಂದ್ರ ಜಾರಕಿಹೊಳಿ