ಭಾರೀ ಡೀಲ್ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ಹಾಗೂ ಗಣಿ ದಣಿ ಜನಾರ್ದನ ರೆಡ್ಡಿಗೆ ಸಿಸಿಬಿ ಇದೀಗ ಡೆಡ್ ಲೈನ್ ನೀಡಿದೆ. ಒಟ್ಟು 48 ಗಂಟೆಗಳ ೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಬೆಂಗಳೂರು : ಆ್ಯಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬೆಂಗಳೂರಿನ ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು 48 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರು ಶುಕ್ರವಾರ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗದಿದ್ದರೆ ರೆಡ್ಡಿಗೆ ಇನ್ನಷ್ಟುಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.
ಇನ್ನು ನ್ಯಾಯಾಲಯದಲ್ಲಿ ಕೂಡ ನಿರೀಕ್ಷಣಾ ಜಾಮೀನು ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಭಾನುವಾರ ಜನಾರ್ದನ ರೆಡ್ಡಿ ವಿಚಾರಣೆಗೆ ಹಾಜರಾಗದಿದ್ದರೆ ತನಿಖಾಧಿಕಾರಿಗಳು ಅದನ್ನೇ ಮುಂದಿಟ್ಟುಕೊಂಡು ಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಇದರಿಂದ ರೆಡ್ಡಿಯ ನಿರೀಕ್ಷಣಾ ಜಾಮೀನು ರದ್ದಾಗುವ ಸಾಧ್ಯತೆ ಇದೆ. ಇನ್ನು ವಿಚಾರಣೆಗೆ ಹಾಜರಾದರೆ ಅವರನ್ನು ಬಂಧಿಸುವುದು ಅಥವಾ ವಿಚಾರಣೆ ನಡೆಸಿ ಕಳುಹಿಸುವುದು ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು.
ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸಿಸಿಬಿ ಅಧಿಕಾರಿಗಳು ಜನಾರ್ದನ ರೆಡ್ಡಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಗೆ ಇನ್ನಷ್ಟುಸಂಕಷ್ಟಉಂಟಾಗಲಿದೆ ಎಂದು ಕಾನೂನು ತಜ್ಞರೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಅಲಿಖಾನ್‌ಗೆ 24 ಗಂಟೆಗಳ ಡೆಡ್‌ಲೈನ್: ಜನಾರ್ದನ ರೆಡ್ಡಿ ಅವರ ಆಪ್ತ ಮೆಹಫಜ್ ಅಲಿಖಾನ್‌ಗೆ ಕೂಡ ತನಿಖಾಧಿಕಾರಿ ನೋಟಿಸ್ ಜಾರಿ ಮಾಡಿದ್ದು, 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಹಣದ ವರ್ಗಾವಣೆಯಾದ ಬಳಿಕ ಚಿನ್ನದ ಗಟ್ಟಿಯನ್ನು ಜನಾರ್ದನ ರೆಡ್ಡಿ ತಮ್ಮ ಆಪ್ತ ಅಲಿಖಾನ್ ಮೂಲಕ ಪಡೆದಿದ್ದಾರೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಅಲಿಖಾನ್‌ಗೆ ಕೂಡ ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
