Asianet Suvarna News Asianet Suvarna News

ನಗರದಲ್ಲಿ ಸಿಕ್ಕಿಬಿದ್ದ 7 ರೋಹಿಂಗ್ಯ ಮುಸ್ಲಿಮರು

ಮ್ಯಾನ್ಮಾರ್ ದೇಶದ ಏಳು ಮಂದಿ ರೋಹಿಂಗ್ಯ ಮುಸ್ಲಿಮರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸಿಸಿಬಿ ಬಲೆಗೆ ಬಿದ್ದಿದ್ದಾರೆ.  

CCB Arrest 7 Rohingya Muslims in Bengaluru Airport
Author
Bengaluru, First Published Feb 16, 2019, 7:58 AM IST

ಬೆಂಗಳೂರು :  ಭಾರತೀಯರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಮಲೇಷ್ಯಾಕ್ಕೆ ಹಾರಲು ಯತ್ನಿಸಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮ್ಯಾನ್ಮಾರ್ ದೇಶದ ಏಳು ಮಂದಿ ರೋಹಿಂಗ್ಯ ಮುಸ್ಲಿಮರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸಿಸಿಬಿ ಬಲೆಗೆ ಬಿದ್ದಿದ್ದಾರೆ.  

ಮ್ಯಾನ್ಯಾರ್ ದೇಶದ ಅಕ್ರಮ ವಲಸಿಗರಾದ ಆಸ್ಮಾ ಬೇಗಂ, ಮಹಮದ್ ತಾಹೀರ್, ಓಂಕಾರ್ ಫಾರೂಕ್, ಮಹಮದ್ ಹಾಲೆಕ್, ರೆಹನಾ ಬೇಗಂ, ಮಹಮದ್ ಮುಸ್ತಾಫ ಹಾಗೂ ರಜತ್ ಮಂಡಲ್ ಬಂಧಿತರು. ಈ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಅಬ್ದುಲ್ ಅಲೀಮ್  ಸೇರಿದಂತೆ ಇತರರ ಪತ್ತೆಗೆ ತನಿಖೆ ಮುಂದುವರಿದಿದೆ. 

ಅಕ್ರಮವಾಗಿ ಕೆಐಎ ಮೂಲಕ ಮಲೇಶಿಯಾಕ್ಕೆ ಪ್ರಯಾಣಿಸಲು ಆರೋಪಿಗಳು ಯತ್ನಿಸಿರುವ ಕುರಿತು ಸಿಸಿಬಿಗೆ ಕೇಂದ್ರ ತನಿಖಾ ಸಂಸ್ಥೆ ಮಾಹಿತಿ ನೀಡಿತ್ತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಸಿಸಿಬಿ ಎಸಿಪಿ ವೋಹನ್ ಕುಮಾರ್ ನೇತೃತ್ವದ ತಂಡವು, ಕೆಐಎ ವಲಸೆ ವಿಭಾಗದ ನೆರವು ಪಡೆದು ರೋಹಿಂಗ್ಯಗಳನ್ನು ಸೆರೆ ಹಿಡಿದಿದೆ.

ಈ ಬಂಧಿತರ ಪೈಕಿ ರಜನ್ ಮಂಡಲ್ ಪಶ್ಚಿಮ ಬಂಗಾಳದ ವಿಳಾಸದಲ್ಲಿ ದಾಖಲೆ ಸೃಷ್ಟಿಸಿದ್ದಾನೆ. ಇನ್ನುಳಿದ ಆರು ಮಂದಿ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ನಿವಾಸಿಗಳೆಂದು ಪಾಸ್ ಪೋರ್ಟ್ ಪಡೆದಿದ್ದರು. ಈ ಹಿಂದೆ ಸಹ ಕೆಐಎ ಮೂಲಕ ಪ್ರಯಾಣಿಸಿರುವ ಕುರಿತು ಆರೋಪಿಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಡಿ ದಾಟಿ ಬಂದಿದ್ದರು: ಮ್ಯಾನ್ಮಾರ್ ದೇಶದಿಂದ ಗಡಿಪಾರಿಗೆ ಒಳಗಾಗಿರುವ ಈ ಏಳು ಮಂದಿ ರೋಹಿಂಗ್ಯಗಳು, ಆರು ವರ್ಷಗಳ ಹಿಂದೆ ಅಕ್ರಮವಾಗಿ ಪಶ್ಚಿಮ ಬಂಗಾಳದ ಗಡಿ ಹಾದು ಭಾರತಕ್ಕೆ ನುಸುಳಿದ್ದರು. ಅಲ್ಲಿಂದ ಕೊನೆಗೆ ಹೈದರಾಬಾದ್‌ನಲ್ಲಿರುವ ‘ರೋಹಿಂಗ್ಯ ನಿರಾಶ್ರಿತರ ಶಿಬಿರ’ ಸೇರಿದ್ದರು. ಹೀಗಿರುವಾಗ ಕೆಲ ರೋಹಿಂಗ್ಯಗಳು, ಸ್ಥಳೀಯ ಪಾಸ್‌ಪೋರ್ಟ್ ಏಜೆಂಟ್‌ಗಳ ನೆರವು ಪಡೆದು ಭಾರತೀಯರ ಹೆಸರಿನಲ್ಲಿ ಪಾಸ್‌ಪೋರ್ಟ್ ಮತ್ತು ವೀಸಾ ಮಾಡಿಸಿಕೊಂಡು ವಿದೇಶಕ್ಕೆ ಹೋಗಿ ನೆಲೆಸಿದ್ದರು. ಅದರಲ್ಲಿ ಬಂಧಿತರ ಸಂಬಂಧಿಕರು ಸಹ ಸೇರಿದ್ದರು.

ಇತ್ತೀಚೆಗೆ ಆರೋಪಿಗಳನ್ನು ಸಂಪರ್ಕಿಸಿದ ಮಲೇಶಿಯಾದ ರಾಜಧಾನಿಯಲ್ಲಿರುವ ಅವರ ಬಂಧುಗಳು, ಕೌಲಾಲಂಪುರಕ್ಕೆ ವಲಸೆ ಬಂದರೆ ನೆಮ್ಮದಿ ಬದುಕು ಕಟ್ಟಿಕೊಳ್ಳಬಹುದು ಎಂದಿದ್ದರು. ಅದರಂತೆ ಆಸ್ಮಾ ಹಾಗೂ ಆಕೆ ಪುತ್ರ ಮಹಮದ್ ಹಾಲೆಕ್, ಸ್ಥಳೀಯ ಪಾಸ್‌ಪೋರ್ಟ್‌ನ ಏಜೆಂಟ್ ಮೂಲಕ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಿವಾಸಿಗಳ ಹೆಸರಿನಲ್ಲಿ ವೀಸಾ ಮಾಡಿಸಿಕೊಂಡರು.

ಬಳಿಕ ಇದೇ ತಾಯಿ-ಮಗನ ಮುಖಾಂತರ ಇನ್ನುಳಿದವರಿಗೂ ವೀಸಾ-ಪಾರ್ಸ್‌ಪೋರ್ಟ್ ಲಭ್ಯವಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಲೇಶಿಯಾಕ್ಕೆ ಹಾರಲು ಸಜ್ಜಾಗಿರುವ ರೋಹಿಂಗ್ಯಗಳ ಸುಳಿವು ಪಡೆದ ಕೇಂದ್ರ ತನಿಖಾ ಸಂಸ್ಥೆಯು, ತಕ್ಷಣವೇ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಅಲೋಕ್ ಕುಮಾರ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದರು. 

ಈ ವಿಷಯ ತಿಳಿದ ಕೂಡಲೇ ಹೆಚ್ಚುವರಿ ಆಯುಕ್ತರು, ರೋಹಿಂಗ್ಯಗಳ ಪತ್ತೆಗೆ ಮಹಿಳೆ ಮತ್ತು ಮಾದಕ ದ್ರವ್ಯ ನಿಗ್ರಹ ಘಟಕದ ಎಸಿಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಿದರು. ಬಳಿಕ ಕೆಐಎ ವಲಸೆ ವಿಭಾಗದ ಅಧಿಕಾರಿಗಳ ಜತೆ ಸೇರಿ ಪತ್ತೆದಾರಿಕೆ ಆರಂಭಿಸಿದ ಸಿಸಿಬಿ ಅಧಿಕಾರಿಗಳು, ರಾತ್ರಿ ಮಲೇಶಿಯಾಕ್ಕೆ ತೆರಳಲು ಆಗಮಿಸಿದ ಏಳು ಮಂದಿಯನ್ನು ಸೆರೆ ಹಿಡಿದ್ದಾರೆ. ಈ ಬಗ್ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಬಳಿಕ ತನಿಖೆಯನ್ನು ಸಿಸಿಬಿಗೆ ಆಯುಕ್ತರು ವರ್ಗಾಯಿಸಿದ್ದಾರೆ.

Follow Us:
Download App:
  • android
  • ios