ಬೆಂಗಳೂರು[ಫೆ. 06]: ಸಚಿವ ಸಂಪುಟ ವಿಸ್ತರಣೆಯ ಮುನ್ನಾ ದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಅವರು ಕೇಂದ್ರ ಬಿಂದುವಾಗಿ ಕಾಣಿಸಿಕೊಂಡರು.

"

ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ಸಚಿವಾಕಾಂಕ್ಷಿಗಳ ದಂಡೇ ವಿಜಯೇಂದ್ರ ಅವರ ನಿವಾಸದಲ್ಲಿತ್ತು. ಶಿವಾನಂದ ಸರ್ಕಲ್‌ ಬಳಿ ಇರುವ ನಿವಾಸಕ್ಕೆ ಪಕ್ಷದ ಮುಖಂಡರಾದ ಗೋಪಾಲಯ್ಯ, ಶಂಕರ್‌ ಪಾಟೀಲ್‌, ಶಿವರಾಜ್‌ ಪಾಟೀಲ್‌, ಸಿ.ಪಿ.ಯೋಗೇಶ್ವರ್‌, ಎಂ.ಟಿ.ಬಿ ನಾಗರಾಜ್‌, ರುದ್ರೇಶ್‌ ಮತ್ತು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸೇರಿದಂತೆ ಇತರೆ ಗಣ್ಯರು ಭೇಟಿ ನೀಡಿದರು. ಸಂಪುಟ ವಿಸ್ತರಣೆ ಕುರಿತು ಸಮಾಲೋಚನೆ ನಡೆಸಿದರು.

ಯೋಗೇಶ್ವರ್‌ ಕಾರಣದಿಂದ ಕತ್ತಿ, ಲಿಂಬಾವಳಿಗೂ ತಪ್ಪಿತು ಮಂತ್ರಿಗಿರಿ!

ಕಲಬುರಗಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಸಮಾರಂಭದ ಉದ್ಘಾಟನೆಗಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಲ್ಲಿಗೆ ತೆರಳಿದ್ದರು. ಬುಧವಾರ ಬೆಳಗ್ಗೆ 10 ಗಂಟೆಗೆ ಕಲಬುರಗಿ ಹೋಗಿದ್ದರಿಂದ ವಿಜಯೇಂದ್ರ ಇಡೀ ದಿನ ಕೇಂದ್ರ ಬಿಂದುವಾಗಿದ್ದರು. ಮುಖ್ಯಮಂತ್ರಿಗಳು ಸಂಜೆ ಯಡಿಯೂರಪ್ಪ ಬೆಂಗಳೂರಿಗೆ ಹಿಂತಿರುಗಿದ್ದು, ಅಲ್ಲಿಯವರೆಗೆ ವಿಜಯೇಂದ್ರ ನಿವಾಸದಲ್ಲಿಯೇ ಸಂಪುಟ ವಿಸ್ತರಣೆಯ ರಾಜಕೀಯ ಚಟುವಟಿಕೆಗಳು ನಡೆದವು. ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಗಣ್ಯರು ಭೇಟಿ ನೀಡಿ ವಿಜಯೇಂದ್ರ ಜತೆ ಸಮಾಲೋಚನೆ ನಡೆಸಿದರು. ಅಷ್ಟರ ಮಟ್ಟಿಗೆ ವಿಜಯೇಂದ್ರ ಅವರು ಪಕ್ಷದಲ್ಲಿ ತಮ್ಮ ಹಿಡಿತವನ್ನು ಸಾಧಿಸಿದ್ದಾರೆ ಎಂಬ ಸಂದೇಶವು ಬುಧವಾರ ನಡೆದ ಬೆಳವಣಿಗೆ ರವಾನಿಸಿದೆ ಎಂದು ಹೇಳಲಾಗಿದೆ.