* ನವೆಂಬರ್ ಒಳಗೆ ರಾಜ್ಯದ ಎಲ್ಲರಿಗೂ ಲಸಿಕೆ: ಸುಧಾಕರ್* ವಿದೇಶದಿಂದಲೂ ಲಸಿಕೆ ಖರೀದಿ* ಸೋಂಕು, ಸಾವು ತಗ್ಗಿಸುವುದೇ ನಮ್ಮ ಗುರಿ
ಬೆಂಗಳೂರು(ಮೇ.20): ನವೆಂಬರ್ ಒಳಗೆ ರಾಜ್ಯದ ಎಲ್ಲರಿಗೂ ಎರಡನೇ ಡೋಸ್ ಲಸಿಕೆ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ವ ರೀತಿಯ ಪ್ರಯತ್ನ ಮಾಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾನಿಂದ ಆಗುತ್ತಿರುವ ಸಾವು ಮತ್ತು ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಎಲ್ಲರಿಗೂ ಲಸಿಕೆ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ. ಏನೇ ಆದರೂ ಈ ವರ್ಷಾಂತ್ಯದೊಳಗೆ ಎಲ್ಲರಿಗೂ ಲಸಿಕೆ ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ಇದುವರೆಗೆ ರಾಜ್ಯಕ್ಕೆ 1.22 ಕೋಟಿ ಡೋಸ್ ಲಸಿಕೆ ಬಂದಿದೆ. 1.13 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಈ ಪೈಕಿ 1.11 ಕೋಟಿ ಡೋಸ್ ಲಸಿಕೆಯನ್ನು ಕೇಂದ್ರ ಸರ್ಕಾರ ನೀಡಿದೆ. ಉಳಿದಂತೆ ರಾಜ್ಯ ಸರ್ಕಾರ 11 ಲಕ್ಷ ಡೋಸ್ ಲಸಿಕೆಯನ್ನು ಖರೀದಿಸಿದೆ. ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಅನ್ನು ಆದ್ಯತೆಯ ಮೇರೆಗೆ ಮತ್ತು ಮೊದಲ ಡೋಸ್ ಲಸಿಕೆಯನ್ನು ಕೂಡ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿದೇಶದಿಂದಲೂ ಲಸಿಕೆ ಖರೀದಿಸುವ ಪ್ರಯತ್ನ ನಡೆದಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ಲಸಿಕೆ ರಾಜ್ಯದಲ್ಲೇ ಉತ್ಪಾದನೆಯಾಗಲಿದೆ. ಆಗ ರಾಜ್ಯಕ್ಕೆ ಇನ್ನಷ್ಟುಹೆಚ್ಚು ಲಸಿಕೆ ಲಭಿಸಬಹುದು ಎಂದು ಸಚಿವರು ತಿಳಿಸಿದರು.
ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ನೀಡುವ 1,050 ಚುಚ್ಚುಮದ್ದು ರಾಜ್ಯಕ್ಕೆ ಬಂದಿದೆ. ಇನ್ನಷ್ಟುಚುಚ್ಚುಮದ್ದು ಒದಗಿಸುವಂತೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರಿಗೆ ಮನವಿ ಮಾಡಿದ್ದೇವೆ. ಮುಂದಿನ ವಾರ ಹೆಚ್ಚಿನ ಪ್ರಮಾಣದಲ್ಲಿ ಚುಚ್ಚುಮದ್ದು ಕಳುಹಿಸಿಕೊಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. 500 ವಯಲ್ಸ್ ಚುಚ್ಚುಮದ್ದು ಹೆಚ್ಚುವರಿಯಾಗಿ ತಕ್ಷಣವೇ ನೀಡುವಂತೆ ಕೋರಿದ್ದೇವೆ ಎಂದು ತಿಳಿಸಿದರು.
ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಅಧ್ಯಯನ ನಡೆಯುತ್ತಿದೆ. ಈ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆಸುವುದು ಸರಿಯಲ್ಲ. ಕೋವಿಡ್‌ನಿಂದ ಸಾವಿನ ಪ್ರಮಾಣ ಕಡಿಮೆ ಮಾಡುವುದು ನಮ್ಮ ಮುಂದಿರುವ ಸವಾಲು ಎಂದು ಸುಧಾಕರ್ ಹೇಳಿದರು.
ಏನೇ ಆದರೂ ಈ ವರ್ಷಾಂತ್ಯದೊಳಗೆ ಎಲ್ಲರಿಗೂ ಲಸಿಕೆ ನೀಡಲು ಬದ್ಧರಾಗಿದ್ದೇವೆ. ಇದುವರೆಗೆ ರಾಜ್ಯಕ್ಕೆ 1.22 ಕೋಟಿ ಡೋಸ್ ಲಸಿಕೆ ಬಂದಿದೆ. ರಾಜ್ಯ ಸರ್ಕಾರ 11 ಲಕ್ಷ ಡೋಸ್ ಖರೀದಿಸಿದೆ. ಈಗ ಮತ್ತೆ ಮೊದಲ ಡೋಸ್ ಕೂಡ ನೀಡುತ್ತಿದ್ದೇವೆ.
- ಡಾ| ಕೆ.ಸುಧಾಕರ್, ಆರೋಗ್ಯ ಸಚಿವ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
