ಬೆಂಗಳೂರು(ಏ.06): ‘ಸಾರಿಗೆ ನೌಕರರ ವೇತನ ಹೆಚ್ಚಳ ಮಾಡುವ ಬಗ್ಗೆ ಚುನಾವಣಾ ಆಯೋಗದ ಅನುಮತಿ ಕೋರಿದ್ದೇವೆ. ಆಯೋಗ ಮುಕ್ತ ಅನುಮತಿ ನೀಡಿದರೆ ಕೂಡಲೇ ವೇತನ ಹೆಚ್ಚಳಕ್ಕೆ ಕ್ರಮ ಜರುಗಿಸುತ್ತೇವೆ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

‘ರಾಜ್ಯದಲ್ಲಿ ಈಗ ಉಪ ಚುನಾವಣೆಗಳು ನಡೆದಿರುವುದರಿಂದ ವೇತನ ಹೆಚ್ಚಳದಂತಹ ಘೋಷಣೆ ಮಾಡಲು ಆಯೋಗದ ಅನುಮತಿಯ ಅಗತ್ಯವಿದೆ. ಅನುಮತಿ ದೊರೆತರೆ ಕೂಡಲೇ ವೇತನ ಹೆಚ್ಚಳ ಮಾಡುತ್ತೇವೆ. ಇದಾಗದ ಪಕ್ಷದಲ್ಲಿ ಚುನಾವಣಾ ನೀತಿ ಸಂಹಿತೆ (ಮೇ 4) ಮುಗಿದ ಕೂಡಲೇ ವೇತನ ಹೆಚ್ಚಳ ಮಾಡುತ್ತೇವೆ. ಅದುವರೆಗೂ ನೌಕರರ ಮುಷ್ಕರ ಕೈ ಬಿಡಬೇಕು’ ಎಂದು ಸಾರಿಗೆ ನೌಕರರಿಗೆ ಅವರು ಮನವಿ ಮಾಡಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಮೇ 4ರ ಬಳಿಕ ವೇತನ ಹೆಚ್ಚಳ ಮಾಡುತ್ತೇವೆ ಎಂಬ ಬಗ್ಗೆ ಸ್ಪಷ್ಟಭರವಸೆ ನೀಡುತ್ತಿದ್ದೇನೆ. ಅಲ್ಲಿಯವರೆಗೂ ನೌಕರರು ಮುಷ್ಕರ ನಿರ್ಧಾರ ಹಿಂಪಡೆಯಬೇಕು. ಆದರೆ, ಸಾರಿಗೆ ನೌಕರರ ಆಗ್ರಹದಂತೆ 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಸಾರಿಗೆ ನಿಗಮಗಳು ತೀವ್ರ ನಷ್ಟದಲ್ಲಿರುವುದರಿಂದ ಇಂತಹ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ, ಸಂಬಳ ಹೆಚ್ಚಳ ಮಾಡುತ್ತೇವೆ. ಈ ಬಗ್ಗೆ ನೌಕರರೊಂದಿಗೆ ಮಾತುಕತೆ ನಡೆಸುತ್ತೇವೆ’ ಎಂದು ತಿಳಿಸಿದರು.

ಕೋರ್ಟ್‌ ಅನುಮತಿ ಬೇಕು:

‘ನೀತಿ ಸಂಹಿತೆ ನೆಪವೊಡ್ಡಿ ನಾವು ವೇತನ ಹೆಚ್ಚಳ ನಿರ್ಧಾರವನ್ನು ಮುಂದಕ್ಕೆ ಹಾಕುತ್ತಿಲ್ಲ. ಮುಷ್ಕರದ ಬಗ್ಗೆ ಕಾರ್ಮಿಕ ನ್ಯಾಯಾಲಯವು ವಿಚಾರಣೆ ನಡೆಸುತ್ತಿದ್ದು ಏ.9ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಆದೇಶಿಸಿದೆ. ನ್ಯಾಯಾಲಯದ ಆದೇಶ ಮೀರಿ ನೌಕರರು ಏ.7 ರಿಂದ ಮುಷ್ಕರ ಮಾಡುವಂತಿಲ್ಲ. ಒಂದು ವೇಳೆ ಮಾಡಬೇಕಾದರೆ ಹೈಕೋರ್ಟ್‌ ಅನುಮತಿ ಪಡೆಯಬೇಕು’ ಎಂದು ಸವದಿ ಎಚ್ಚರಿಕೆ ನೀಡಿದರು.

ಈ ಹಿಂದೆ ಡಿಸೆಂಬರ್‌ನಲ್ಲಿ ದಿಢೀರ್‌ ಮುಷ್ಕರ ಹೂಡಿದ್ದ ನೌಕರರು 9 ಬೇಡಿಕೆಗಳನ್ನು ಸಲ್ಲಿಸಿದ್ದರು. ಅದರಲ್ಲಿ ಎಂಟು ಪ್ರಮುಖ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲು ಆದೇಶ ಮಾಡಿದ್ದೇವೆ. ಕೊರೋನಾ ಸಂದರ್ಭದಲ್ಲೂ ಬಾಟಾ ಕೊಡಲು ಸೂಚಿಸಿದ್ದೇವೆ. ಕೊರೋನಾದಿಂದ ಮೃತರಾದ ಕುಟುಂಬಕ್ಕೆ 30 ಲಕ್ಷ ರು. ಪರಿಹಾರ ನೀಡಲೂ ಈಗಾಗಲೇ ಆದೇಶ ಮಾಡಿದ್ದೇವೆ ಎಂದರು.

ಕೊರೊನಾ ಸೋಂಕು ಬಂದು ವರ್ಷ ಕಳೆದಿದ್ದು, ನಾಲ್ಕೂ ನಿಗಮಗಳಲ್ಲಿ ದಿನವೊಂದರಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರ ಸಂಖ್ಯೆ 1 ಕೋಟಿಯಿಂದ 65 ಲಕ್ಷಕ್ಕೆ ಇಳಿದಿದೆ. ಹೀಗಾಗಿ ಆದಾಯವೂ ಕಡಿಮೆಯಾಗಿದ್ದು, ಬರುವ ಆದಾಯ ಇಂಧನ ಹಾಗೂ ವೇತನ ನಿರ್ವಹಣೆಗೇ ಸಾಲುತ್ತಿಲ್ಲ. ನಮ್ಮಲ್ಲಿ 1.35 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಕೊರೋನಾ ವೇಳೆ 3,200 ಕೋಟಿ ರು. ನಷ್ಟಅನುಭವಿಸಿದ್ದೇವೆ. ಆದರೂ ಯಾರಿಗೂ ವೇತನ ಕಡಿತ ಮಾಡಿಲ್ಲ ಎಂದು ಸವದಿ ಸ್ಪಷ್ಟಪಡಿಸಿದರು.

ಮಹಾರಾಷ್ಟ್ರದಲ್ಲಿ 50 ಸಾವಿರ ಪ್ರಕರಣ ದಾಖಲಾಗುತ್ತಿದೆ. ರಾಜ್ಯದಲ್ಲೂ ನಿತ್ಯ 4 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣ ವರದಿಯಾಗುತ್ತಿದೆ. ಕೊರೋನಾ ಹೆಚ್ಚಾದರೆ ಪ್ರಯಾಣಿಕರ ಕೊರತೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

3,800 ಕೋಟಿ ರು. ಹೊರೆ:

ನೌಕರರು 6ನೇ ವೇತನ ಆಯೋಗ ಅನುಷ್ಠಾನಕ್ಕೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಸಾರಿಗೆ ನೌಕರರಿಗೆ ಶೇ.2ರಷ್ಟುಇನ್ಸೆಂಟಿವ್‌ ನೀಡುತ್ತಿದ್ದೇವೆ. ಹೆಚ್ಚುವರಿ ಭತ್ಯೆ ಸೇರಿ ಹಲವು ಸೌಲಭ್ಯಗಳಿವೆ. ಈ ಬಗ್ಗೆಯೂ ನೌಕರರೊಂದಿಗೆ ಚರ್ಚೆಯಾಗಬೇಕು. 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಹೆಚ್ಚಳ ಮಾಡಿದರೆ 3,800 ಕೋಟಿ ರು. ಹೊರೆ ಬೀಳಲಿದೆ. ಇದಕ್ಕೆ ಎಲ್ಲಿಂದ ಹಣ ಪಡೆದುಕೊಳ್ಳಬೇಕು ಎಂಬ ಬಗ್ಗೆ ಎಂಬುದನ್ನೂ ಚರ್ಚಿಸಬೇಕೆಲ್ಲವೇ? ಇದಕ್ಕೆ ಸಮಯಾವಕಾಶ ನೀಡಬೇಕಲ್ಲವೇ? ಎಂದು ಪ್ರಶ್ನಿಸಿದರು.

ಮುಷ್ಕರ ನಡೆದರೆ ಪರ್ಯಾಯ ವ್ಯವಸ್ಥೆ

ಸಾರಿಗೆ ನೌಕರರು ಕೇಳುತ್ತಿರುವ ಬೇಡಿಕೆಯಲ್ಲಿ ನ್ಯಾಯವಿರಬಹುದು. ಆದರೆ ಕೇಳುತ್ತಿರುವ ಸಂದರ್ಭ ಸೂಕ್ತವಲ್ಲ. ನಾವು ನೌಕರರ ಜೊತೆ ಸಂಧಾನಕ್ಕೆ ಒತ್ತು ನೀಡುತ್ತಿದ್ದು ವಿಫಲವಾದರೆ ಪರ್ಯಾಯ ವ್ಯವಸ್ಥೆಯನ್ನೂ ಮುಕ್ತವಾಗಿಟ್ಟುಕೊಂಡಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

‘ಖಾಸಗಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಲು ಸಿದ್ಧತೆ ನಡೆಸಿದ್ದು ಈಗಾಗಲೇ ಆಸಕ್ತರಿಗೆ ಅರ್ಜಿ ಆಹ್ವಾನಿಸಿದ್ದೇವೆ. 3 ಸಾವಿರ ಬಸ್ಸುಗಳು ಪರವಾನಗಿ ಒಪ್ಪಿಸಿದ್ದಾರೆ. ಜೊತೆಗೆ ಟೆಂಪೋ ಟ್ರಾವೆಲರ್‌ಗಳನ್ನು ಓಡಿಸುವ ಬಗ್ಗೆಯೂ ಚರ್ಚಿಸಿದ್ದೇವೆ’ ಎಂದರು.