ಬೆಂಗಳೂರು[ಫೆ.26]: ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ಬಸ್‌ಗಳ ಟಿಕೆಟ್‌ ದರವನ್ನು ಮಂಗಳವಾರ ಮಧ್ಯರಾತ್ರಿಯಿಂದಲೇ ಶೇ.12ರಷ್ಟುಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ರಸ್ತೆ ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಬಸ್‌ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಡಿಸೇಲ್‌ ದರ ಏರಿಕೆ, ನೌಕರರ ವೇತನ ಹೆಚ್ಚಳ ಸೇರಿದಂತೆ ನಾನಾ ಕಾರಣಗಳಿಂದ ಆರ್ಥಿಕ ನಷ್ಟಅನುಭವಿಸುತ್ತಿವೆ. ರಾಜ್ಯದಲ್ಲಿ 2014ರ ಮೇನಲ್ಲಿ ಶೇ.7.96ರಷ್ಟುಪ್ರಯಾಣ ದರ ಹೆಚ್ಚಳವಾಗಿತ್ತು. ಇದಾದ ನಂತರ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾಲ್ಕೂ ಸಾರಿಗೆ ನಿಗಮಗಳ ಬಸ್‌ ಪ್ರಯಾಣ ದರವನ್ನು ಶೇ.18ರಷ್ಟುಹೆಚ್ಚಳ ಮಾಡಿ ಆದೇಶಿಸಲಾಗಿತ್ತು. ಬಳಿಕ ರಾತ್ರೋರಾತ್ರಿ ದರ ಏರಿಕೆ ಹಿಂಪಡೆಯಲಾಗಿತ್ತು.

ಒಂದು ಕಡೆ ಡಿಸೇಲ್‌ ದರ ಹೆಚ್ಚಳವಾಗುತ್ತಾ ಸಾಗಿದ್ದು ಹಾಗೂ ಸರ್ಕಾರಗಳು 2014ರ ನಂತರ ಬಸ್‌ ದರ ಹೆಚ್ಚಳಕ್ಕೆ ಮುಂದಾಗದೆ ಇದ್ದುದರಿಂದ ಸಾರಿಗೆ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕಿದ್ದವು. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳು ನೂತನ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ದರ ಹೆಚ್ಚಳದ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದ್ದವು. ಈ ಪ್ರಸ್ತಾಪಕ್ಕೆ ಸರ್ಕಾರ ಇದೀಗ ಅಸ್ತು ಎಂದಿದೆ.

ಗ್ರಾಮೀಣ ಬಸ್‌ ಟಿಕೆಟ್‌ ದರ ಇಳಿಕೆ:

ಈ ದರ ಏರಿಕೆಯ ನಡುವೆಯೂ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಬಸ್‌ಗಳಲ್ಲಿ ಮೊದಲ ಸ್ಟೇಜ್‌ ದರವನ್ನು ಕಡಿತಗೊಳಿಸಿದೆ. ಹಾಲಿ 7 ರು. ಇದ್ದ ಪ್ರಯಾಣ ದರವನ್ನು 5 ರು.ಗೆ ಇಳಿಸಿದೆ. ಉಳಿದಂತೆ ಇತರ ಎಲ್ಲ ದರವನ್ನು ಹೆಚ್ಚಳ ಮಾಡಲಾಗಿದೆ. ತಾಲೂಕು ಕೇಂದ್ರಗಳಿಂದ ಬೆಂಗಳೂರಿಗೆ ಬರುವ ಬಸ್‌ಗಳ ದರವನ್ನು ಹಂತಗಳ ಆಧಾರದ ಮೇಲೆ 2 ರು.ನಿಂದ 8 ರು.ವರೆಗೆ ಮತ್ತು ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಸಂಚರಿಸುವ ಬಸ್‌ಗಳ ದರವನ್ನು 5 ರು.ನಿಂದ 32 ರು.ವರೆಗೂ ಹೆಚ್ಚಳ ಮಾಡಲಾಗಿದೆ.

ಬಿಎಂಟಿಸಿಗೆ ಪ್ರತಿ ದಿನ 1 ಕೋಟಿ ನಷ್ಟ:

ಬಿಎಂಟಿಸಿಯು ಪ್ರತಿ ದಿನ ಒಂದು ಕೋಟಿ ರು. ನಷ್ಟಅನುಭವಿಸುತ್ತಿದೆ. ಆದರೆ, ಬಿಎಂಟಿಸಿ ಬಸ್‌ ದರ ಹೆಚ್ಚಳ ಮಾಡದೆ, ಉಳಿದ ಸಾರಿಗೆ ಸಂಸ್ಥೆಗಳ ದರ ಹೆಚ್ಚಳ ಮಾಡಿರುವ ಹಿಂದೆ ಚುನಾವಣಾ ಲೆಕ್ಕಾಚಾರವಿದೆ ಎಂದು ಹೇಳಲಾಗುತ್ತಿದೆ. ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜ್ಯ ಸರ್ಕಾರ ಬಿಎಂಟಿಸಿ ದರ ಏರಿಕೆಗೆ ಮನಸು ಮಾಡಿಲ್ಲ ಎನ್ನಲಾಗುತ್ತಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿಗೆ ರಾಜ್ಯ ಸರ್ಕಾರ ಅನುದಾನ ಕೊಡಬೇಕು. ಇಲ್ಲವಾದರೆ, ನಿಗಮ ನಿರ್ವಹಿಸುವುದೇ ಕಷ್ಟಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

6 ವರ್ಷದಲ್ಲಿ ಡೀಸೆಲ್‌ 11 ರು. ದುಬಾರಿ

ನಾಲ್ಕೂ ನಿಗಮಗಳಿಗೆ ಪ್ರತಿ ದಿನ 1,539 ಕಿ.ಲೀ. ಡೀಸೆಲ್‌ ಅವಶ್ಯವಿದೆ. ಅದರಲ್ಲಿ ಕೆಎಸ್‌ಆರ್‌ಟಿಸಿಗೆ ಅಂದಾಜು 610 ಕಿ.ಲೀ., ಬಿಎಂಟಿಸಿಗೆ 324 ಕಿ.ಲೀ., ಎನ್‌ಡಬ್ಲ್ಯೂಕೆಆರ್‌ಟಿಸಿಗೆ 331 ಕಿ.ಲೀ., ಎನ್‌ಇಕೆಆರ್‌ಟಿಸಿಗೆ 274 ಕಿ.ಲೀ. ಡೀಸೆಲ್‌ ಬೇಕಾಗುತ್ತದೆ. 2014ರಿಂದ ಈವರೆಗೆ ಲೀಟರ್‌ ಡೀಸೆಲ್‌ ದರ 11.27 ರು. ಹೆಚ್ಚಳವಾಗಿದೆ. ಡೀಸೆಲ್‌ ದರ ಪರಿಷ್ಕರಣೆಯಿಂದ ಪ್ರತಿ ವರ್ಷ ಕೆಎಸ್‌ಆರ್‌ಟಿಸಿಗೆ 260.83 ಕೋಟಿ ರು. ಆರ್ಥಿಕ ಹೊರೆಯಾಗುತ್ತಿದೆ.