ಬಿಪಿಎಲ್ ಕುಟುಂಬಕ್ಕೆ ಲ್ಯಾಬ್ ತಪಾಸಣೆ ಉಚಿತ!
ಬಿಪಿಎಲ್ ಕುಟುಂಬಕ್ಕೆ ಲ್ಯಾಬ್ ತಪಾಸಣೆ ಉಚಿತ| ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ಉಚಿತ| ರಾಜ್ಯದ 17 ಆಸ್ಪತ್ರೆಗಳಿಗೆ ಅನ್ವಯ: ಇಷ್ಟು ದಿನ ಇದ್ದ ಶೇ.50 ಶುಲ್ಕ ಮನ್ನಾ
ಬೆಂಗಳೂರು[ಅ.14]: ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡುದಾರರಿಗೆ ರಾಜ್ಯದ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳ ಪ್ರಯೋಗಾಲಯ (ಲ್ಯಾಬ್)ಗಳಲ್ಲಿ ಮಾಡುತ್ತಿದ್ದ ತಪಾಸಣೆಯನ್ನು ಇನ್ನು ಮುಂದೆ ಉಚಿತವಾಗಿ ಮಾಡಿ ವರದಿ ನೀಡಲು ಸರ್ಕಾರ ನಿರ್ಧರಿಸಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳು ಈವರೆಗೆ ಪ್ರಯೋಗಾಲಯಗಳಲ್ಲಿ ಮಾಡುವ ವಿವಿಧ ತಪಾಸಣೆಗಳಿಗೆ ತಗಲುವ ವೆಚ್ಚದ ಶೇ.೫೦ರಷ್ಟು ಶುಲ್ಕವನ್ನು ನೀಡಬೇಕಿತ್ತು. ಬಡ ರೋಗಿಗಳ ಅನುಕೂಲಕ್ಕಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ತನ್ನ ವ್ಯಾಪ್ತಿಯಲ್ಲಿ ಬರುವ ಕಾಲೇಜು ಆಸ್ಪತ್ರೆಗಳಲ್ಲಿ ಪಡೆಯುತ್ತಿದ್ದ ಪ್ರಯೋಗಾಲಯ ಶುಲ್ಕ ರದ್ದು ಮಾಡಿದ್ದು, ತಕ್ಷಣದಿಂದಲೇ ಆದೇಶ ಅನ್ವಯವಾಗಲಿದೆ
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ಹೇಮಲತಾ, ನಿರ್ದೇಶಕ ಗಿರೀಶ್ ಅವರನ್ನು ಒಳಗೊಂಡ ಸಭೆಯಲ್ಲಿ ಚರ್ಚಿಸಿ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ತೀರ್ಮಾನ ಕೈಗೊಂಡಿದೆ
ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಏಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 10 ಸ್ವಾಯತ್ತ ಕಾಲೇಜು ಸೇರಿದಂತೆ ಒಟ್ಟಾರೆ ೧೭ ವೈದ್ಯಕೀಯ ಕಾಲೇಜು ಆಸ್ಪತ್ರೆ ಗಳಿವೆ. ಸಾಮಾನ್ಯವಾಗಿ ಬಿಪಿಎಲ್ ಕಾರ್ಡುದಾರರು ಆರ್ಥಿಕವಾಗಿ ಹಿಂದುಳಿದವರಾಗಿರುವುದರಿಂದ ಶುಲ್ಕ ಪಾವತಿಸುವುದು ಕಷ್ಟವಾಗಲಿದೆ. ಒಂದು ವೇಳೆ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರೆ ರೋಗಿಗಳಿಗೆ ಚಿಕಿತ್ಸೆ ದೊರೆಯುವುದಿಲ್ಲ. ಖಾಸಗಿ ಪ್ರಯೋಗಾಲಯದ ದುಬಾರಿ ವೆಚ್ಚಗಳನ್ನು ಭರಿಸಿ ವರದಿಗಳನ್ನು ಪಡೆಯಲು ಕಷ್ಟವಾಗುವುದನ್ನು ತಪ್ಪಿಸಿ ಬಡವರು ಆರೋಗ್ಯ ಸೇವೆಯಿಂದ ವಂಚಿತಗೊಳ್ಳಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ
ಹಣಕಾಸು ಸಮಸ್ಯೆ:
ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡುವುದಕ್ಕಾಗಿ ವೈದ್ಯಕೀಯ ಶಿಕ್ಷಣಕ್ಕೆ ನೀಡುತ್ತಿದ್ದ ಕೆಲವು ಅನುದಾನವನ್ನು ಕಡಿತಗೊಳಿಸಿತ್ತು. ಸದ್ಯ ಸರ್ಕಾರದ ಅನುದಾನ ಸಿಬ್ಬಂದಿ ವೇತನ ಮತ್ತು ಇತರೆ ನಿರ್ವಹಣಾ ವೆಚ್ಚ ಭರಿಸಲು ಸರಿಹೋಗುತ್ತಿದೆ. ಹೀಗಿರುವಾಗ ಬಿಪಿಎಲ್ ಕಾರ್ಡುದಾರರ ಪ್ರಯೋಗಾಲಯ ಶುಲ್ಕ ರದ್ದುಪಡಿಸಿದರೆ ಸಮಸ್ಯೆಯಾಗುವ ಸಾಧ್ಯತೆಗಳಿವೆ. ಇದಕ್ಕೆ ಬದಲಾಗಿ ಸರ್ಕಾರ ನೀಡುವ ಅನುದಾನ ಹೆಚ್ಚಳ ಮಾಡಿದರೆ ಉತ್ತಮ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.