ಬೆಂಗಳೂರಿನಲ್ಲಿ ಜೀತ ಪದ್ಧತಿಯಲ್ಲಿ ದುಡಿಸಿಕೊಳ್ಳುತ್ತಿದ್ದ 35 ಕಾರ್ಮಿಕರನ್ನು ರಕ್ಷಿಸಲಾಗಿದೆ. ತೆಲಂಗಾಣದಿಂದ ಕರೆತಂದ ಕಾರ್ಮಿಕರನ್ನು ಕಾಂಟ್ರಾಕ್ಟರ್ ಒಬ್ಬರು ಖರೀದಿಸಿ, ಅಮಾನವೀಯವಾಗಿ ದುಡಿಸಿಕೊಳ್ಳುತ್ತಿದ್ದರು. ಈ ಘಟನೆ ಆಧುನಿಕ ನಗರದಲ್ಲಿ ಜೀತಪದ್ಧತಿಯ ಕರಾಳ ಮುಖವನ್ನು ಬಯಲಿಗೆಳೆದಿದೆ.

ಬೆಂಗಳೂರು: ತಂತ್ರಜ್ಞಾನ ಮತ್ತು ಆಧುನಿಕತೆಗಾಗಿ ಹೆಸರಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೇ ಇಂದು ಕೂಡ ಜೀತ ಪದ್ಧತಿ ಎಂಬ ಮಾನವೀಯತೆಗೆ ವಿರೋಧವಾದ ವ್ಯವಸ್ಥೆ ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ವಿದ್ಯಾವಂತ ನಾಗರಿಕ ಸಮಾಜದಲ್ಲಿಯೇ ಈ ರೀತಿಯ ಪದ್ಧತಿ ಇನ್ನೂ ಮುಂದುವರಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ರಸ್ತೆಯಲ್ಲಿರುವ ಅತ್ತಿಬೆಲೆ ಮತ್ತು ಗೂಂಜುರು ಭಾಗದಲ್ಲಿ ಎರಡು ಗುಂಪುಗಳಾಗಿ ಜೀತಕ್ಕೆ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ರಕ್ಷಿಸುವ ಸಲುವಾಗಿ ಅಧಿಕಾರಿಗಳು ಜಂಟಿ ದಾಳಿ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ಅತ್ತಿಬೆಲೆ ಹೋಬಳಿ ಉಪ ತಹಸೀಲ್ದಾರ್ ನವೀನ್ ಕುಮಾರ್, ಕಾರ್ಮಿಕ ಇಲಾಖೆ ಅಧಿಕಾರಿಗಳು, ಅತ್ತಿಬೆಲೆ ಪೊಲೀಸರು ಹಾಗೂ ಮುಕ್ತಿ ಎನ್‌ಜಿಒ ಪ್ರತಿನಿಧಿಗಳು ಸೇರಿಕೊಂಡಿದ್ದರು. ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಕಂಡ ದೃಶ್ಯವೇ ಶಾಕ್ ಉಂಟುಮಾಡಿತು. ಅಕ್ರಮವಾಗಿ ಕಾರ್ಮಿಕರನ್ನು ಖರೀದಿ ಮಾಡಿ ಜೀತದಾಳುಗಳಾಗಿ ದುಡಿಸುತ್ತಿದ್ದ ಕಾಂಟ್ರಾಕ್ಟರ್‌ರ ಕೃತ್ಯ ಬೆಳಕಿಗೆ ಬಂತು.

ತೆಲಂಗಾಣದ ಕಾರ್ಮಿಕರು

ತೆಲಂಗಾಣದ ವನಪರ್ತಿ ಜಿಲ್ಲೆಯಿಂದ ಒಟ್ಟು 35 ಮಂದಿಯನ್ನು ಕಾರ್ಮಿಕರನ್ನು ದುಡ್ಡು ಕೊಟ್ಟು ಖರೀದಿ ಮಾಡಿದ್ದು, ಇದರಲ್ಲಿ 7 ಮಂದಿ ಬಾಲಕಾರ್ಮಿಕರು, ಉಳಿದ 28 ಮಂದಿ ಕೂಲಿ ಕಾರ್ಮಿಕರಾಗಿದ್ದರು. ಇವರನ್ನು ಅತ್ತಿಬೆಲೆ ಮತ್ತು ಗೂಂಜೂರು ಭಾಗಗಳಲ್ಲಿ ಎರಡು ಗುಂಪುಗಳಾಗಿ ಹಂಚಿ ರಸ್ತೆ ಕಾಮಗಾರಿಯಲ್ಲಿ ದುಡಿಸುತ್ತಿದ್ದರು. ಅತ್ತಿಬೆಲೆ ದಾಳಿಯ ವೇಳೆ ಎರಡು ಮಂದಿ ಬಾಲ ಕಾರ್ಮಿಕರು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಅಧಿಕಾರಿಗಳು ರಕ್ಷಣೆ ಮಾಡಿದರು. ಕಾರ್ಮಿಕರು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಅವರಿಗೆ ಅಸಹನೀಯ ಪರಿಸ್ಥಿತಿಯನ್ನು ನಿರ್ಮಿಸಿ ಜೀತದ ದುಡಿಮೆಗೆ ಹಾಕಲಾಗುತ್ತಿತ್ತು.

ಕಾಂಟ್ರಾಕ್ಟರ್‌ನ ಕೃತ್ಯ

ತಿಳಿದುಬಂದ ಮಾಹಿತಿಯ ಪ್ರಕಾರ, ರಾಮ ನಾಗಪ್ಪ ಶೆಟ್ಟಿ ಅವರ RNS ಇನ್‌ಫ್ರಾಸ್ಟ್ರಕ್ಚರ್ಸ್ ಕಂಪನಿಯ ಸಬ್ ಕಾಂಟ್ರಾಕ್ಟರ್ ಯಾಕೂಬ್, ತೆಲಂಗಾಣದ ಕಾರ್ಮಿಕರನ್ನು ಖರೀದಿ ಮಾಡಿ ಜೀತದಾಳುಗಳಾಗಿ ಬಳಸುತ್ತಿದ್ದಾನೆ. ಯಾಕೂಬ್, ಕಾರ್ಮಿಕರ ಕುಟುಂಬದ ಒಂದು ದಂಪತಿಗೆ 1 ಲಕ್ಷ ರೂ. ನೀಡಿ, ಒಬ್ಬೊಬ್ಬರನ್ನು ಒಂದು ವರ್ಷ ಕಾಲ ಉಚಿತವಾಗಿ ದುಡಿಸುವ ಒಪ್ಪಂದ ಮಾಡಿಕೊಂಡಿದ್ದಾನೆ.

ಕೆಲಸ ಅರ್ಧಕ್ಕೆ ಬಿಟ್ಟು ಹೋದರೆ ಆ ಕುಟುಂಬದಿಂದಲೇ 1 ಲಕ್ಷ ರೂ. ಮರಳಿ ನೀಡಬೇಕೆಂದು ಬಾಂಡ್ ಬರೆಸಿಕೊಂಡಿದ್ದು, ಕಾರ್ಮಿಕರ ವಾಸದ ಮನೆ ಪತ್ರಗಳನ್ನು ಕಸಿದುಕೊಂಡು ಬಲವಂತವಾಗಿ ದುಡಿಸುತ್ತಿದ್ದಾನೆ. ಅದರೊಂದಿಗೆ ಅವರಿಗೆ ಹೊಡೆದು ಬೆದರಿಸುವ ಮೂಲಕ ಕೆಲಸಕ್ಕೆ ಇಟ್ಟುಕೊಂಡಿರುವ ಘಟನೆಗಳು ಅಧಿಕಾರಿಗಳ ಮುಂದೆ ಬಯಲಾಯಿತು. ಘಟನೆ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಜೀತ ಪದ್ಧತಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಸಮಾಜದಲ್ಲಿ ಶಿಕ್ಷಣ, ಅಭಿವೃದ್ಧಿ, ಆಧುನಿಕತೆ ಎಲ್ಲವೂ ಇದ್ದರೂ ಜೀತ ಪದ್ಧತಿಯಂತಹ ಅಮಾನವೀಯ ಪದ್ಧತಿ ಇನ್ನೂ ಜೀವಂತವಾಗಿರುವುದು ನಮ್ಮೆಲ್ಲರಿಗೂ ದೊಡ್ಡ ಎಚ್ಚರಿಕೆಯ ಸಂದೇಶವಾಗಿದೆ. ಇಂತಹ ಘಟನೆಗಳು ಮಾನವ ಹಕ್ಕು ಉಲ್ಲಂಘನೆಯ ಘೋರ ಉದಾಹರಣೆ ಆಗಿದ್ದು, ಸರ್ಕಾರ ಮತ್ತು ಸಮಾಜ ಎರಡೂ ಸೇರಿ ಇದನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಬೇಕಾಗಿದೆ.