ಅಂಬೇಡ್ಕರ್ ಹಾಸ್ಟೆಲ್‌ಗಳಲ್ಲಿ ಬೋಗಸ್ ವಿದ್ಯಾರ್ಥಿಗಳು?: 15000 ದಾಖಲಾತಿ ಹೆಚ್ಚಳ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಇತರ ಸಮುದಾಯಗಳ ಬಡ ಮಕ್ಕಳ ವ್ಯಾಸಂಗ, ವಸತಿಗಾಗಿ ಇರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಹಾಸ್ಟೆಲ್‌ಗಳಲ್ಲಿ ಬೋಗಸ್ ದಾಖಲಾತಿ ಮೂಲಕ ಸರ್ಕಾರದ ಸೌಲಭ್ಯಗಳು, ಅನುದಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ.
ಮಂಜುನಾಥ ನಾಗಲೀಕ
ಬೆಂಗಳೂರು (ಅ.04): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಇತರ ಸಮುದಾಯಗಳ ಬಡ ಮಕ್ಕಳ ವ್ಯಾಸಂಗ, ವಸತಿಗಾಗಿ ಇರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಹಾಸ್ಟೆಲ್‌ಗಳಲ್ಲಿ ಬೋಗಸ್ ದಾಖಲಾತಿ ಮೂಲಕ ಸರ್ಕಾರದ ಸೌಲಭ್ಯಗಳು, ಅನುದಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಯಾದಗಿರಿ ಜಿಲ್ಲೆಯ ಹಾಸ್ಟೆಲ್ ವಾರ್ಡನ್‌ವೊಬ್ಬರು ಮಕ್ಕಳ ಹೆಸರಿನಲ್ಲಿ ನಕಲಿ ಬಯೋಮೆಟ್ರಿಕ್ ಹಾಜರಾತಿ ಹಾಕುತ್ತಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗಗೊಂಡಿದ್ದು, ಹಾಸ್ಟೆಲ್‌ನಲ್ಲಿ ನಡೆದಿರುವ ಈ ಅಕ್ರಮವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಅಪರಿಚಿತರೊಬ್ಬರು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಈ ಕುರಿತು ವಿಚಾರಣೆಯು ನಡೆಯುತ್ತಿದೆ. ನಕಲಿ ಹಾಜರಾತಿಯ ವಿಡಿಯೋ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿರುವ 1,215 ಪ್ರಿ ಮೆಟ್ರಿಕ್ ವಸತಿ ನಿಲಯಗಳಲ್ಲಿ ಈ ವರ್ಷ (2024-25) 1,02,458 ಮಕ್ಕಳು ದಾಖಲಾಗಿ ದ್ದಾರೆ. ಕಳೆದ ವರ್ಷ 87,266 ಮಕ್ಕಳು ದಾಖ ಲಾಗಿದ್ದರು. ಕೇವಲ ಒಂದೇ ವರ್ಷದಲ್ಲಿ 15,192 ಮಕ್ಕಳ ದಾಖಲಾತಿ ಹೆಚ್ಚಳ ಕಂಡು ಬಂದಿದೆ. ಈ ಗಣನೀಯ ಹೆಚ್ಚಳಕ್ಕೆಬೋಗಸ್ ದಾಖಲಾತಿಯೇ ಕಾರಣ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರ ಬೀಳಿಸೋ ದುರಾಲೋಚನೆ ಬರದಿರಲಿ: ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ
ಹಾಸ್ಟೆಲ್ ಮಕ್ಕಳಿಗೆ ವಸ್ತ್ರ ಹಾಸಿಗೆ, ಶೂ, ಸೋಪ್, ಟೂತ್ ಪೇಸ್ಟ್, ಬ್ರಶ್ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ವೈದ್ಯಕೀಯ ವೆಚ್ಚ ಮತ್ತು ಹಾಸ್ಟೆಲ್ ನಿರ್ವಹಣೆಗಾಗಿ ಅನುದಾನದ ಜೊತೆಗೆ ಪ್ರತಿ ವಿದ್ಯಾರ್ಥಿಗೆ ಊಟ ಒದಗಿಸಲು ಅಗತ್ಯ ವಿರುವ ಆಹಾರ ಧಾನ್ಯಗಳು, ಅಡುಗೆ ತಯಾರಿ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಆದರೆ, ಹಾಸ್ಟೆಲ್ ವಾರ್ಡನ್‌ಗಳು ಬೋಗಸ್ ದಾಖಲಾತಿ ಮೂಲಕ ಸೌಲಭ್ಯ ಗಳನ್ನು ದುರುಪಯೋಗಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಬೋಗಸ್ ದಾಖಲಾತಿ ಹೇಗೆ?: ವಸತಿ ನಿಲಯಗಳ ಮೇಲ್ವಿಚಾರಕರು ಸರ್ಕಾರಿ ಶಾಲೆಗಳಿಗೆ ತೆರಳಿ ಮಕ್ಕಳ ಪ್ರವೇಶ ದಾಖಲೆ ಗಳನ್ನು ಪಡೆದುಕೊಂಡು ಅದರಲ್ಲಿನ ಎಸ್‌ಸಿ, ಎಸ್ಟಿ ವಿದ್ಯಾರ್ಥಿಗಳು ಮತ್ತು ಇತರ ಸಮು ದಾಯಗಳ ವಿದ್ಯಾರ್ಥಿಗಳ ಮಾಹಿತಿ ಆಧರಿಸಿ ಹಾಸ್ಟೆಲ್‌ಗೆ ದಾಖಲಾತಿ ಮಾಡಿಕೊಳ್ಳುತ್ತಾರೆ. ನಾಮ್‌ಕೇವಾಸ್ತೆಗೆ ಕೆಲವು ವಿದ್ಯಾರ್ಥಿಗಳ ಪಾಲಕರನ್ನು ಸಂಪರ್ಕಿಸಿ ಹಾಸ್ಟೆಲ್ ಸೌಲಭ್ಯ ಪಡೆಯಿರಿ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿ ಹಾಸ್ಟೆಲ್‌ಗೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆ.
ಆದರೆ, ಅನೇಕ ಮಕ್ಕಳು ಹಾಸ್ಟೆಲ್‌ಗೆ ಸೇರುವುದೇ ಇಲ್ಲ. ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಮಕ್ಕಳು ತಮ್ಮ ಊರು, ಮನೆಗಳಿಗೆ ಹೋಗಿದ್ದಾರೆಂದು ವಾರ್ಡನ್‌ಗಳು ತಪ್ಪು ಮಾಹಿತಿ ನೀಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳು ಕೂಡ ವಾರ್ಡನ್‌ಗಳ ಅಕ್ರಮ ಗಳಿಗೆ ಸಾಥ್ ನೀಡುತ್ತಾರೆ ಎನ್ನುವ ಆರೋಪ ಗಳಿವೆ.ಈ ಕುರಿತು ಪ್ರತಿಕ್ರಿಯೆಗಾಗಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಕೆ. ರಾಕೇಶ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.
ಬಯೋಮೆಟ್ರಿಕ್ ಹಾಜರಾತಿಯಲ್ಲಿ ನಕಲು!: ಬೋಗಸ್ ದಾಖಲಾತಿ ತಡೆಯಲು ಬಯೋಮೆಟ್ರಿಕ್ ಹಾಜರಾತಿ ಪರಿಚಯಿಸಲಾ ಗಿದೆ. ಆದರೆ, ಅದನ್ನು ಕೂಡ ನಕಲು ಮಾಡ ಲಾಗುತ್ತಿದೆ. ಇತ್ತೀಚೆಗೆ ಯಾದಗಿರಿ ಜಿಲ್ಲೆಯ ಹಾಸ್ಟೆಲ್‌ವೊಂದರಲ್ಲಿ ವಾರ್ಡನ್‌ವೊಬ್ಬರು ತಮ್ಮ ಬೆರಳುಗಳನ್ನು ಬಳಸಿ ಮಕ್ಕಳ ಹೆಸರಿನಲ್ಲಿ ಬೋಗಸ್ ಹಾಜರಾತಿ ಹಾಕುತ್ತಿರುವುದು ಬೆಳಕಿಗೆ ಬಂದಿದೆ. ಈ ಕೃತ್ಯವನ್ನು ಅಪರಿಚಿತರೊ ಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ವಾರ್ಡನ್ ವಿರುದ್ಧ ಈವರೆಗೂ ಯಾವುದೇ ಕ್ರಮ ಆಗಿಲ್ಲ ಎಂದು ತಿಳಿದು ಬಂದಿದೆ.
ಸಾಮರ್ಥ್ಯ ಮೀರಿ ದಾಖಲಾತಿ: 1,215 ಹಾಸ್ಟೆಲ್‌ಗಳಲ್ಲಿ 90,194 ಮಕ್ಕಳ ದಾಖಲಾತಿಗೆ ಇಲಾಖೆಯಿಂದ ಮಂಜೂರಾತಿ ನೀಡಲಾಗಿದೆ. ಆದರೆ, ಮಕ್ಕಳಿಂದ ಹಾಸ್ಟೆಲ್‌ಗೆ ಬೇಡಿಕೆ ಇದೆ ಎಂಬ ಕಾರಣ ನೀಡಿ ಸೀಟುಗಳ ಸಂಖ್ಯೆಯನ್ನು 33,288ದಷ್ಟು ಹೆಚ್ಚಿಸಿಕೊಳ್ಳಲಾಗಿದೆ. ಇದರಲ್ಲಿ ನೈಜ ಬೇಡಿಕೆ ಎಷ್ಟಿದೆ ಎನ್ನುವುದು ಗೊತ್ತಿಲ್ಲ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು.
ಇನ್ನೊಂದು ವರ್ಷದವರೆಗೂ ಚಾಮುಂಡೇಶ್ವರಿ ಆಶೀರ್ವಾದ ಇರಲಿ: ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ!
ಏನೇನು ಸೌಲಭ್ಯ ಕಬಳಿಕೆ ಸಾಧ್ಯತೆ?: ಹಾಸ್ಟೆಲ್ ಮಕ್ಕಳಿಗೆ ವಸ್ತ್ರ ಹಾಸಿಗೆ, ಶೂ, ಸೋಪ್, ಟೂತ್ ಪೇಸ್ಟ್, ಬ್ರಶ್ ನೀಡಲಾಗುತ್ತದೆ. ವೈದ್ಯಕೀಯ ವೆಚ್ಚ ಮತ್ತು ಹಾಸ್ಟೆಲ್ ನಿರ್ವಹಣೆಗಾಗಿ ಅನುದಾನದ ಜೊತೆಗೆ ಪ್ರತಿ ವಿದ್ಯಾರ್ಥಿಗೆ ಊಟಕ್ಕೆ ಬೇಕಾದ ಆಹಾರ ಧಾನ್ಯಗಳು, ಅಡುಗೆ ತಯಾರಿ ಸಾಮಗ್ರಿಗಳನ್ನು ಸರ್ಕಾರ ನೀಡುತ್ತದೆ. ಹಾಸ್ಟೆಲ್ ವಾರ್ಡನ್‌ಗಳು ಬೋಗಸ್ ದಾಖಲೆ ಸೃಷ್ಟಿಸಿದರೆ ಈ ಎಲ್ಲ ಸೌಲಭ್ಯಗಳನ್ನು ದುರುಪ ಯೋಗ ಮಾಡಿಕೊಳ್ಳಬಹುದು.