ಬೆಂಗಳೂರು(ಜ.25): ಬಿಎಂಟಿಸಿ ಚಾಲಕರ ಅವಸ್ಥೆ ನೋಡಿ. ಅತ್ತ ಹುಲಿ ಇತ್ತ ಪುಲಿಯಂತಾಗಿದೆ ಅವರ ಪಾಡು. ನಗರದ ಜನನಿಬೀಡ ರಸ್ತೆಯಲ್ಲಿ ಕಣ್ತಪ್ಪಿನಿಂದ ಅಪಘಾತವಾದರೆ ಕಿಲ್ಲರ್ ಬಿಎಂಟಿಸಿ ಅಂತಾ ಮುಗಿಬೀಳ್ತಾರೆ. ಅದೇ ನಿಧಾನಗತಿಯ ಚಾಲನೆ ಮಾಡಿ, ನಗರದ ಹಂಪ್ ಗಳನ್ನೆಲ್ಲಾ ದಾಟಿ, ಅಕ್ಕಪಕ್ಕ ವಾಹನಗಳಿಗೆಲ್ಲಾ ದಾರಿ ಮಾಡಿಕೊಟ್ಟರೆ ಜಾಸ್ತಿ ಬ್ರೇಕ್ ಹಾಕಿದ್ದಕ್ಕಾಗಿ ನೊಟೀಸ್ ಕೊಡ್ತಾರೆ.

ಹೌದು, ಚಾಲನೆ ವೇಳೆ ಅತಿಯಾಗಿ ಬ್ರೇಕ್ ಹಾಕಿದ ಅಂತಾ ಬಿಎಂಟಿಸಿ 33ನೇ ಘಟಕದ ವ್ಯವಸ್ಥಾಪಕರೊಬ್ಬರು ಚಾಲಕನಿಗೆ ನೊಟೀಸ್ ನೀಡಿರುವ ಘಟನೆ ನಡೆದಿದೆ.

ಚಾಲಕ ಒಟ್ಟು 77ಬಾರಿ ಬ್ರೇಕ್ ತುಳಿದಿರುವುದು ಐಟಿಎಸ್ ನಿಂದ ಬೆಳಕಿಗೆ ಬಂದಿದ್ದು, ಇದಕ್ಕೆ ಉತ್ತರ ಕೋರಿ ಘಟಕ ವ್ಯವಸ್ಥಾಪಕರು ನೋಟಿಸ್ ನೀಡಿದ್ದಾರೆ.

ಬಸ್ ಚಾಲನೆ ಸಂದರ್ಭದಲ್ಲಿ ಅತಿಯಾಗಿ ಬ್ರೇಕ್ ತುಳಿದರೆ ಕೆಎಂಪಿಎಲ್ ಕಡಿಮೆಯಾಗಿ ಇಂಧನ ಬಳಕೆ ಜಾಸ್ತಿಯಾಗುತ್ತದೆ. ಇದರಿಂದ ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗುತ್ತದೆ ಎಂಬುದು ಘಟಕ ವ್ಯವಸ್ಥಾಪಕರ ವಾದ.

ಆದರೆ ಟ್ರಾಫಿಕ್ ನ್ನೇ ಹೊದ್ದು ಮಲಗಿರುವ ಬೆಂಗಳೂರಿನಂತ ಮಹಾನಗರದಲ್ಲಿ ಬ್ರೇಕ್ ಹಾಕದೇ ಬಸ್ ಹೇಗೆ ಓಡಿಸೋದು ಎಂಬುದು ಚಾಲಕರ ಪ್ರಶ್ನೆಯಾಗಿದೆ.