ಚಿತ್ರದುರ್ಗ(ಜೂ.02): ಕೊರೋನಾದಿಂದ ಗುಣಮುಖರಾದವರನ್ನು ಸದ್ದಿಲ್ಲದೆ ಬಾಧಿಸುತ್ತಿರುವ ಬ್ಲ್ಯಾಕ್‌ ಫಂಗಸ್‌ ಚರ್ಮದಲ್ಲೂ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಮೂಗು, ಸೈನಸ್‌ಗಳಲ್ಲಿ ಪ್ರಾರಂಭವಾಗಿ ಕಣ್ಣು, ಮೆದುಳಿಗೆ ಹರಡುವ, ಸಂಪೂರ್ಣ ಅಂಧತ್ವ ಅಥವಾ ಜೀವಹಾನಿ ಉಂಟು ಮಾಡುವ ಬ್ಲ್ಯಾಕ್‌ ಫಂಗಸ್‌ ಕೋವಿಡ್‌ ರೋಗಿಯೊಬ್ಬರಲ್ಲಿ ಚರ್ಮಕ್ಕೂ ಹರಡಿರುವ ದೇಶದ ಮೊದಲ ಪ್ರಕರಣ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

ಪಂಚಾಕ್ಷರಪ್ಪ ಎಂಬ 54 ವರ್ಷದ ರೋಗಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಅವರ ಕಿವಿಯ ಮೇಲ್ಭಾಗ ಹಾಗೂ ಕಿವಿಯ ಪಕ್ಕದ ಚರ್ಮವು ಕಪ್ಪಾಗಿ ನಶಿಸಿಹೋಗಿದೆ. ವೈದ್ಯರು ಹೆಚ್ಚಿನ ಪರೀಕ್ಷೆಗಾಗಿ ಚರ್ಮದ ಭಾಗಗಳನ್ನು ಕಳುಹಿಸಿದಾಗ ಅದು ಬ್ಲ್ಯಾಕ್‌ ಫಂಗಸ್‌ ಎಂಬುದು ಖಚಿತವಾಗಿದೆ. ಈ ರೋಗಿಗೆ ಚರ್ಮದ ಕಸಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ.

ದೇಶದ ವಿವಿಧ ಭಾಗಗಳಲ್ಲಿ ಕೋವಿಡ್‌ ರೋಗಿಗಳಲ್ಲಿ ಬ್ಲ್ಯಾಕ್‌ ಫಂಗಸ್‌ ಅಥವಾ ಮ್ಯೂಕರ್‌ ಮೈಕೋಸಿಸ್‌ ಸೋಂಕು ಪತ್ತೆಯಾಗಿದೆ. ಆದರೆ ದೇಶದಲ್ಲಿ ಇದೇ ಮೊದಲ ಬಾರಿಗೆ ಸೋಂಕಿತರೊಬ್ಬರ ಚರ್ಮದಲ್ಲೂ ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದೆ ಎಂದು ಕಿವಿ, ಮೂಗು, ಗಂಟಲು ತಜ್ಞ ಡಾ

ಪ್ರಹ್ಲಾದ್‌ ತಿಳಿಸಿದ್ದಾರೆ. ತಜ್ಞರ ಪ್ರಕಾರ, ಚರ್ಮಕ್ಕೂ ಬ್ಲ್ಯಾಕ್‌ ಫಂಗಸ್‌ ಹಬ್ಬಿದ ನಿದರ್ಶನಗಳಿವೆ. ಆದರೆ ಕೋವಿಡ್‌ ರೋಗಿಯೊಬ್ಬರಲ್ಲಿ ಚರ್ಮದಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣ ಇದಾಗಿದೆ.

ಹೇಗೆ ಬೆಳಕಿಗೆ?:

ಪಂಚಾಕ್ಷರಪ್ಪ ಅವರು ಒಂದು ತಿಂಗಳ ಹಿಂದೆ ತೀವ್ರವಾದ ಕೋವಿಡ್‌-19 ಸೋಂಕಿಗೆ ತುತ್ತಾಗಿ, ಈಗ ತಾನೇ ಚೇತರಿಸಿಕೊಳ್ಳುತ್ತಿದ್ದರು. ಅನಿಯಂತ್ರಿತ ಮಧುಮೇಹದಿಂದ ಅವರು ಬಳಲುತ್ತಿದ್ದರು. ಅವರ ಬಲಗಡೆಯ ಕಿವಿಯ ಮೇಲ್ಭಾಗ ಹಾಗೂ ಕಿವಿಯ ಪಕ್ಕದ ಚರ್ಮವು ಕಪ್ಪಾಗಿ ನಶಿಸಿಹೋಗಿತ್ತು. ತಮ್ಮ ಹತ್ತಿರ ತಪಾಸಣೆಗೆಂದು ಬಂದಾಗ ಅವರನ್ನು ಕೂಲಂಕಷವಾಗಿ ಪರೀಕ್ಷಿಸಿ ನಂತರ ಕಿರು ಶಸ್ತ್ರಕ್ರಿಯೆಯ ಮೂಲಕ ಕಪ್ಪಾಗಿ ನಶಿಸಿಹೋದ ಕಿವಿಯ ಮೇಲ್ಭಾಗ ಹಾಗೂ ಕಿವಿಯ ಪಕ್ಕದ ಚರ್ಮದ ಭಾಗಗಳನ್ನು ತೆಗೆದು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಸಮಯದಲ್ಲಿ ರೋಗಿಯಲ್ಲಿನ ಕಪ್ಪು ಫಂಗಸ್‌ ಸೋಂಕು ಕಿವಿಯ ಸುತ್ತಲಿನ ಮತ್ತು ತಲೆಯ ಮೇಲ್ಭಾಗದ ಚರ್ಮಕ್ಕೆ ಹೆಚ್ಚಾಗಿ ಹರಡಿರುವುದು ಪತ್ತೆಯಾಗಿತ್ತು. ಚಿತ್ರದುರ್ಗದ ವಾಸವಿ ಲ್ಯಾಬೋರೇಟರಿಯ ಡಾ.ನಾರಾಯಣ ಮೂರ್ತಿ ಹಾಗೂ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕ ಡಾ.ಸು​ಧೀಂದ್ರ ಚರ್ಮದ ಕಪ್ಪು ಫಂಗಸ್‌ ಸೋಂಕನ್ನು ದೃಢಪಡಿಸಿದ್ದಾರೆ ಎಂದು ಡಾ.ಪ್ರಹ್ಲಾದ್‌ ತಿಳಿಸಿದ್ದಾರೆ.

ಚಿಕಿತ್ಸೆ ಏನು?:

ಕಪ್ಪು ಫಂಗಸ್‌ ಸೋಂಕಿನಿಂದ ಹಾನಿಗೊಂಡಿರುವ ಚರ್ಮವನ್ನು ಸಂಪೂರ್ಣವಾಗಿ ತೆಗೆದು ಹಾಕಿ ಆಂಫೋಟೆರಿಸಿನ್‌-ಬಿ ಚುಚ್ಚುಮದ್ದನ್ನು ನೀಡಿ ಮೊದಲ ಹಂತದ ಚಿಕಿತ್ಸೆ ಮಾಡಬೇಕಾಗಿರುತ್ತದೆ. ಎರಡನೇ ಹಂತದಲ್ಲಿ ಕಪ್ಪು ಫಂಗಸ್‌ ಸೋಂಕಿನಿಂದ ಸಂಪೂರ್ಣವಾಗಿ ರೋಗಿಯು ಗುಣಮುಕ್ತರಾಗಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಂಡು ಚರ್ಮದ ಕಸಿ ಮಾಡಬೇಕಾಗಿದೆ ಎಂದು ಡಾ.ಪ್ರಹ್ಲಾದ್‌ ತಿಳಿಸಿದ್ದಾರೆ.