ಉಡುಪಿ[ಫೆ.23]: ಚುನಾವಣೆಯಲ್ಲಿ ಗೆದ್ದ ಬಳಿಕ ಕ್ಷೇತ್ರದ ಕಡೆ ತಿರುಗಿ ನೋಡಿಲ್ಲ ಎಂಬ ಕಾರಣಕ್ಕಾಗಿ ಇದೀಗ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಪಕ್ಷದ ಕಾರ್ಯಕರ್ತರೇ ಚಳುವಳಿ ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರೇ 'ಗೋ ಬ್ಯಾಕ್ ಶೋಭಕ್ಕ' ಎಂಬ ಚಳುವಳಿ ಆರಂಭಿಸಿದ್ದಾರೆ. ಈ ಮೂಲಕ ಕ್ಷೇತ್ರದೆಡೆ ಗಮನಹರಿಸದ ಶೋಭಕ್ಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಐದು ವರ್ಷದಿಂದ ನಾಪತ್ತೆಯಾಗಿ ಈಗ ಮತ್ತೆ 'ಮೋದಿ ಹೆಸರಲ್ಲಿ ಗೆಲ್ಲಲು ಬಂದಿದ್ದಿರಾ?' ಈಗ ಮತ್ತೆ ನಿಮಗೆ ಕ್ಷೇತ್ರ ನೆನಪಾಯ್ತಾ? ಎಂದು ಶೋಭಾಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸಂಸದೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಭಾಷಣ ಮಾಡುತ್ತಿರುವ ಫೋಟೋ ಒಂದನ್ನು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಈ ಫೋಟೋ ಬಹಳಷ್ಟು ಚರ್ಚೆಗೀಡಾಗಿದ್ದು, ಸದ್ಯ ಶೋಭಕ್ಕನ ವಿರುದ್ಧವೇ ಚಳುವಳಿ ಆರಂಭವಾಗುವಂತೆ ಮಾಡಿದೆ.