ಬೆಂಗಳೂರು[ಡಿ.13]: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋಲುಂಡ ಬೆನ್ನಲ್ಲೇ ರಾಜ್ಯದಲ್ಲಿ ಸಂಘ ಪರಿವಾರ ಮೂಲದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ‘ಅವರ್‌ ಮಿಷನ್‌ ಅಂಡ್‌ ವಿಷನ್‌- 2019’ ಎಂಬ ಅಭಿಯಾನದಡಿ ರಾಜ್ಯಾದ್ಯಂತ ಸಮಾಲೋಚನೆ ನಡೆಸಲು ಮುಂದಾಗಿದ್ದಾರೆ.

ಈ ಮೂಲಕ ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಜನಪ್ರತಿನಿಧಿಗಳನ್ನು ಮುಂದಿಟ್ಟುಕೊಂಡು ಚುನಾವಣೆ ಕುರಿತ ನಿರ್ಧಾರಗಳನ್ನು ಕೈಗೊಳ್ಳುವ ಬದಲು ಕಾರ್ಯಕರ್ತರನ್ನು ಮುಂದಿಟ್ಟುಕೊಂಡು ಹೋಗಬೇಕು ಎಂಬ ಒಕ್ಕೊರಲಿನ ಒತ್ತಾಯವೂ ಕೇಳಿಬಂದಿದೆ.

ಬುಧವಾರ ಶಿವಮೊಗ್ಗ ವಿಭಾಗದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆದಿದ್ದು, ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್‌, ಸಿದ್ರಾಮಣ್ಣ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಇದೇ ರೀತಿಯ ಸಭೆಗಳನ್ನು ರಾಜ್ಯಾದ್ಯಂತ ವಿವಿಧ ವಿಭಾಗವಾರು ಮಾಡುವ ಉದ್ದೇಶ ಹೊಂದಲಾಗಿದ್ದು, ಅಂತಿಮವಾಗಿ ಎಲ್ಲ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಪಕ್ಷದ ಹೈಕಮಾಂಡ್‌ಗೆ ರವಾನಿಸುವ ನಿರೀಕ್ಷೆಯಿದೆ.

ಸಭೆಯಲ್ಲಿ ಮಾತನಾಡಿದ ಹಲವರು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಇತರ ಎಲ್ಲ ಮುಖಂಡರೊಂದಿಗೆ ಸಮಾಲೋಚನೆ ಮಾಡಬೇಕು. ಇತ್ತೀಚೆಗೆ ನಡೆದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವ ಮೊದಲು ಸೌಜನ್ಯಕ್ಕಾದರೂ ಪಕ್ಷದ ಪ್ರಮುಖರ ಜೊತೆ ಸಮಾಲೋಚನೆ ನಡೆಸಬೇಕಾಗಿತ್ತು. ಆದರೆ, ಹಾಗೆ ಮಾಡದೆ ಏಕಾಏಕಿ ಪ್ರಕಟಿಸಿದ್ದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.