ಬೆಂಗಳೂರು[ಜ,19]: ಕಳೆದ ಒಂದು ವಾರದಿಂದ ರೆಸಾರ್ಟ್‌ನಲ್ಲಿರುವ ಬಿಜೆಪಿ ಶಾಸಕರನ್ನು ವಾಪಸ್‌ ಬರುವಂತೆ ತಿಳಿಸಿ ಬರಪೀಡಿತ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳಲು ನಿರ್ದೇಶನ ನೀಡಲಾಗುವುದು ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು ತಮ್ಮ ಶಾಸಕರು ಕೈ ತಪ್ಪಿ ಹೋಗಲಿದ್ದಾರೆ ಎಂಬ ಭೀತಿಯಿಂದ ರೆಸಾರ್ಟ್‌ ವಾಸ್ತವ್ಯಕ್ಕೆ ಕಳಿಸಿದೆ. ಇದಕ್ಕೆ ಯಾವುದೇ ಟೀಕೆ ಟಿಪ್ಪಣೆ ಮಾಡುವುದಿಲ್ಲ. ಬಿಜೆಪಿ ಶಾಸಕರು ರೆಸಾರ್ಟ್‌ನಲ್ಲಿರುವುದನ್ನು ಖಂಡಿಸಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಆಡಳಿತ ಪಕ್ಷದವರೇ ಹೋಗುತ್ತಿರುವುದಕ್ಕೆ ಏನು ಹೇಳುತ್ತಾರೆ ಎಂದೂ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಡಳಿತ ಪಕ್ಷ ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ ವಾಸ್ತವ್ಯಕ್ಕೆ ಟೀಕೆ-ಟಿಪ್ಪಣಿ ಮಾಡುವುದಿಲ್ಲ. ಅವರ ಶಾಸಕರ ರಕ್ಷಣೆಗಾಗಿ ರೆಸಾರ್ಟ್‌ಗೆ ಹೋಗಿದ್ದಾರೆ. ರೆಸಾರ್ಟ್‌ನಲ್ಲಿರುವ ಬಿಜೆಪಿ ಶಾಸಕರಿಗೆ ವಾಪಸ್‌ ರಾಜ್ಯಕ್ಕೆ ಬರಲು ಹೇಳಿ, ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.

ಕಳೆದ ಒಂದು ವಾರದಿಂದ ನಮ್ಮ ಮೇಳೆ ಆಪಾದನೆ ಮಾಡುತ್ತಿರುವ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಈಗ ರಾಜ್ಯದ ಜನತೆಗೆ ಉತ್ತರ ಕೊಡಬೇಕಾಗಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವು ಶಾಸಕರ ಗೈರಾಗಿರುವುದು ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಮುಂದಿನ ದಿನದಲ್ಲಿ ಕೆಂಡವಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳಿವೆ. ರಾಜ್ಯದ ಅಭಿವೃದ್ಧಿಯ ಕಡೆ ಗಮನ ಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬಿಜೆಪಿ ಪ್ರತಿಪಕ್ಷವಾಗಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಕರ್ನಾಟಕದಲ್ಲಿ ಆಪರೇಷನ್‌ ಸಂಸ್ಕೃತಿ ಪ್ರಾರಂಭವಾಗಿದ್ದು 2008ರಲ್ಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇತಿಹಾಸ ಅವಲೋಕಿಸಿದರೆ ಗೊತ್ತಾಗುತ್ತದೆ, ದೇಶದಲ್ಲಿ ‘ಆಯಾರಾಮ್‌ ಗಯಾರಾಮ್‌’ ಸಂಸ್ಕೃತಿಯನ್ನು ಹುಟ್ಟು ಹಾಕಿದವರು ಯಾರು ಎಂಬುದು. ಈಗ ಬಿಜೆಪಿಗೆ ನೈತಿಕ ಪಾಠ ಹೇಳುವ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ವೇಣುಗೋಪಾಲ್‌ ಇದಕ್ಕೇನು ಹೇಳುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಸಹ ಆಪರೇಷನ್‌ ಸಂಸ್ಕೃತಿಯಲ್ಲಿ ಕಾಂಗ್ರೆಸ್‌ ಸೇರಿದ್ದು ಎನ್ನುವುದನ್ನು ಮರೆತಂತಿದೆ. ಕಾಂಗ್ರೆಸ್‌-ಜೆಡಿಎಸ್‌ ನಾಯಕರು ತಮ್ಮ ಸ್ಥಿಮಿತ ಕಳೆದುಕೊಂಡಿದ್ದಾರೆ. ವಿಧಾನಸಭೆಯ ಇತಿಹಾಸದಲ್ಲಿ 104 ಸ್ಥಾನ ಗೆದ್ದು ಬಿಜೆಪಿ ಪ್ರತಿಪಕ್ಷವಾಗಿ ಕೆಲಸ ಮಾಡುತ್ತಿದೆ. 80 ಮತ್ತು 37 ಶಾಸಕರಿರುವ ಕಾಂಗ್ರೆಸ್‌-ಜೆಡಿಎಸ್‌ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಲಾಗುತ್ತಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ 100ಕ್ಕಿಂತ ಹೆಚ್ಚು ಸ್ಥಾನ ಗೆದ್ದು ಪಕ್ಷ ವಿರೋಧ ಪಕ್ಷದಲ್ಲಿ ಕುಳಿತುಕೊಂಡಿರುವುದು ಇದೇ ಮೊದಲ ಸಲ. ಇದು ನಮ್ಮ ಸಹನೆಯನ್ನು ಎತ್ತಿ ತೋರಿಸುತ್ತಿದ್ದು, ನಮಗೆ ಅಧಿಕಾರದ ದಾಹ ಇಲ್ಲ ಎನ್ನುವುದನ್ನು ಬಿಂಬಿಸುತ್ತದೆ ಎಂದು ಯಡಿಯೂರಪ್ಪ ಹೇಳಿದರು.