ಬೆಂಗಳೂರು : ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದರೂ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಹಣ ಇಲ್ಲದಾಗಿದ್ದು, ಸಂಪೂರ್ಣವಾಗಿ ದಿವಾಳಿಯಾಗಿದೆ. ರಾಜ್ಯದ ಹಣಕಾಸು ಸ್ಥಿತಿ ಕುರಿತು ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಆಗ್ರಹಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿರುವ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ಸತ್ತು ಹೋಗಿದೆ. ಸತ್ತು ಹೋಗಿರುವ ಸರ್ಕಾರಕ್ಕೆ ಆರು ತಿಂಗಳ ಪೂರ್ಣಗೊಳಿಸಿರುವುದಕ್ಕೆ ಧನ್ಯವಾದಗಳನ್ನು ಹೇಳಲು ಸಾಧ್ಯವೇ? ಆಡಳಿತ ವ್ಯವಸ್ಥೆ ಕುಸಿದಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ತಮ್ಮ ಅನುಕೂಲಕ್ಕೆ ತಕ್ಕಂತೆ ಸರ್ಕಾರ ಮಾಡಿಕೊಂಡಿರುವ ಕಾರಣ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಪಿಂಚಣಿ, ಮಾಸಾಶನ ಬಿಡುಗಡೆ ಮಾಡಲು ಹಣ ಇಲ್ಲವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶ್ವೇತಪತ್ರ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

‘ವಿವಿಧ ಕಾಮಗಾರಿಗಳ ಆರು ಸಾವಿರ ಕೋಟಿ ರು. ಬಿಲ್‌ ಬಾಕಿ ಇದೆ. ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಆದರೆ, ಈವರೆಗೆ ಋುಣಮುಕ್ತ ಪತ್ರ ನೀಡದೆ ರೈತರನ್ನು ಸರ್ಕಾರವು ವಂಚಿಸುತ್ತಿದೆ. ಅಲ್ಲದೇ, ಬ್ಯಾಂಕ್‌ಗಳು ಸಾಲ ಪಡೆದ ರೈತರ ಬಂಧನಕ್ಕೆ ವಾರೆಂಟ್‌ ಜಾರಿ ಮಾಡುತ್ತಿವೆ. ರಾಜ್ಯ ಸರ್ಕಾರ ಬಳಿಕ ಸಾಲ ಮನ್ನಾ ಮಾಡಲು 46 ಸಾವಿರ ಕೋಟಿ ರು. ಹಣ ಇಲ್ಲ. ಪರಿಣಾಮ ರೈತರು ಸಂಕಷ್ಟಪಡುವಂತಾಗಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಪ್ರತಿ ವರ್ಷ 2 ಕೋಟಿ ರು. ಬಿಡುಗಡೆ ಮಾಡಲಾಗುತ್ತದೆ. ಆದರೆ, ಇಲ್ಲಿವರೆಗೆ ಕೇವಲ 50 ಲಕ್ಷ ರು. ಮಾತ್ರ ಬಿಡುಗಡೆಯಾಗಿದ್ದು, ಇನ್ನು ಒಂದೂವರೆ ಕೋಟಿ ರು. ಬಿಡುಗಡೆ ಮಾಡಿಲ್ಲ’ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಸಮಸ್ಯೆ ಪರಿಹರಿಸಲು ವಿಫಲ:

‘ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಸರ್ಕಾರ ಮಾಡುತ್ತಿಲ್ಲ. ರಾಜ್ಯದಲ್ಲಿ ಸಕ್ಕರೆ ಸಚಿವರು ಇದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ಸಕ್ಕರೆ ಸಚಿವರು ರೈತರ ಸಮಸ್ಯೆಯನ್ನು ಆಲಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಸಮಸ್ಯೆಗಳನ್ನು ಬಗೆಹರಿಸಿದರೆ ರೈತರು ಯಾಕೆ ಬೀದಿಗೆ ಬಂದು ಪ್ರತಿಭಟಿಸುತ್ತಿದ್ದರು? ಎರಡು ತಿಂಗಳ ಹಿಂದೆಯೇ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಮಾತನಾಡಬೇಕಿತ್ತು. ಆದರೆ, ಅಂತಹ ಕೆಲಸ ಮಾಡದೆ ಸಮಸ್ಯೆಯನ್ನು ಬಗೆಹರಿಸಲು ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಶೆಟ್ಟರ್‌ ಆರೋಪಿಸಿದರು.

‘ಮುಖ್ಯಮಂತ್ರಿಗಳು ಇನ್ನು ಮುಂದೆ ಪತ್ರಿಕಾಗೋಷ್ಠಿ ನಡೆಸುವುದಿಲ್ಲ ಎಂದಿದ್ದಾರೆ. ಪ್ರತಿಪಕ್ಷಗಳ ಟೀಕೆಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ಮನಸ್ಥಿತಿಯೇ ಇಲ್ಲವಾಗಿದೆ. ಪ್ರತಿಪಕ್ಷ ಮತ್ತು ಮಾಧ್ಯಮಗಳು ಅವರನ್ನು ಹೊಗಳಲು ಇಲ್ಲ. ತಪ್ಪುಗಳನ್ನು ಪ್ರಶ್ನಿಸಲಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.