ಬೆಳಗಾವಿ[ಡಿ.21]: ನಗರದ ಧರ್ಮನಾಥ ಸರ್ಕಲ್‌ನಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಪ್ರಯಾಣಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಅದೃಷ್ಟವಶಾತ್‌ ಈ ಅವಘಡದಲ್ಲಿ ಜಗದೀಶ ಶೆಟ್ಟರ್‌ ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್‌ಲ್ಲಿ ನಡೆದ ಬಿಜೆಪಿ ಸಭೆ ಬಳಿಕ ಅಧಿವೇಶನದಲ್ಲಿ ಪಾಲ್ಗೊಳ್ಳಲು ಶೆಟ್ಟರ್‌ ಸುವರ್ಣಸೌಧದತ್ತ ಹೊರಟಿದ್ದರು. ಈ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರಿನ ಹಿಂಬದಿಯಲ್ಲಿದ್ದ ಇನ್ನೋವಾ ಕಾರೊಂದು ಬ್ರೇಕ್‌ ಫೇಲ್‌ ಆಗಿ ಶೆಟ್ಟರ್‌ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಜಗದೀಶ ಶೆಟ್ಟರ್‌ ಅವರಿಗೆ ಯಾವುದೇ ಅಪಾಯವಾಗಿಲ್ಲ. ಡಿಕ್ಕಿ ಹೊಡೆದ ಕಾರಿನ ಬಂಪರ್‌ ಹಾಗೂ ಬಾನೆಟ್‌ ಜಖಂಗೊಂಡಿದ್ದು, ಶೆಟ್ಟರ್‌ ಪ್ರಯಾಣಿಸುತ್ತಿದ್ದ ಕಾರಿಗೆ ಯಾವುದೇ ಹಾನಿ ಆಗಿಲ್ಲ. ಘಟನೆ ನಂತರ ಅವರು ತಮ್ಮ ಪ್ರಯಾಣ ಮುಂದುವರಿಸಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.