ವಿಜಯಪುರ :  ರಾಜ್ಯದಲ್ಲಿ 22ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸುವವರೆಗೂವ ಒಂದು ಕ್ಷಣವೂ ವಿರಮಿಸಲಾರೆ, ಹಾಗೆಯೇ ಮನೆಗೆ ಹೋಗುವುದಿಲ್ಲ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಪ್ರತಿಜ್ಞೆ ಮಾಡಿದ್ದಾರೆ.

ನಗರದ ಜಿಲ್ಲಾ ಪಂಚಾಯತಿ ಕಚೇರಿ ಬಳಿ ವಿಶಾಲ ಮೈದಾನದಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾ ಬಿಜೆಪಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮೋದಿ ವಿಜಯ ಸಂಕಲ್ಪ ಯಾತ್ರೆ ಹಾಗೂ ಶಕ್ತಿ ಕೇಂದ್ರದ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ ರಾಜ್ಯದಲ್ಲಿನ 28 ಲೋಕಸಭೆಯ ಸ್ಥಾನಗಳ ಪೈಕಿ 22 ಸ್ಥಾನಗಳಲ್ಲಿ ಬಿಜೆಪಿ ಗೆಲವು ಸಾಧಿಸಿದರೆ ರಾಜ್ಯದಲ್ಲಿನ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.

ಬ್ರೇಕ್‌ ಒಬ್ಬರ ಬಳಿ, ಸ್ಟೇರಿಂಗ್‌ ಇನ್ನೊಬ್ಬರ ಬಳಿ :  ಕೇಂದ್ರ ಕೃಷಿ ಸಚಿವ ಪುರುಷೋತ್ತಮ ರೂಪಾಲಾ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿನ ದೋಸ್ತಿ ಸರ್ಕಾರ ತ್ರಿಚಕ್ರ ವಾಹನವಿದ್ದಂತೆ. ಅದರ ಸ್ಟೇರಿಂಗ್‌ ಒಬ್ಬರ ಬಳಿ ಇದ್ದರೆ, ಬ್ರೇಕ್‌ ಇನ್ನೊಬ್ಬರ ಕೈಯಲ್ಲಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು. ಮುಖ್ಯಮಂತ್ರಿಯಂತೂ ನಾಮ್‌ ಕೆ ವಾಸ್ತೆ ಇದ್ದಾರೆ. ಅವರಿಗೆ ಕೇವಲ ನೋಡುವುದಷ್ಟೇ ಕೆಲಸ. ರಾಜ್ಯದಲ್ಲಿ ಆಡಳಿತ ಸುವ್ಯವಸ್ಥೆ ಹಾಳಾಗಿದ್ದು, ರಾಜ್ಯವನ್ನು ಸರ್ವನಾಶ ಮಾಡುವ ಕಾರ್ಯದಲ್ಲಿ ರಾಜ್ಯ ಸರ್ಕಾರ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಗೋವಿಂದ ಕಾರಜೋಳ, ಶಾಸಕ ಮುರುಗೇಶ ನಿರಾಣಿ ಇದ್ದರು.

ರಮೇಶ ಜಿಗಜಿಣಗಿಯೇ ಅಭ್ಯರ್ಥಿ: ಬಿಎಸ್‌ವೈ

ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಸಲವೂ ಅವರಿಗೇ ವರಿಷ್ಠರು ಟಿಕೆಟ್‌ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ನಗರದಲ್ಲಿ ಆಯೋಜಿಸಿದ್ದ ಮೋದಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಮೋದಿ ಹವಾ ಇರುವುದರಿಂದಾಗಿ ರಮೇಶ ಜಿಗಜಿಣಗಿ ಅವರು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಮತ್ತೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ಈ ಬಾರಿ ರಮೇಶ್‌ ಜಿಗಜಿಣಗಿಯವರಿಗೆ ಲೋಕಸಭಾ ಟಿಕೆಟ್‌ ಸಿಗುವುದಿಲ್ಲ ಎಂಬ ಊಹಾಪೋಹಗಳಿಗೆ ತೆರೆ ಎಳೆದರು.