ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಬಡಿಗೆ ಕೊಟ್ಟು ಹೊಡಿಸಿಕೊಳ್ಳುವ ಕೆಲಸ ಮಾಡ್ತಿದ್ದಾರೆ; ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಯಾವ ಸರ್ಕಾರ ಎಷ್ಟು ಸಾಲ ಮಾಡಿದೆ ಎಂಬ ಲೆಕ್ಕ ಗೊತ್ತಿಲ್ಲದೇ ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರು, ನಮ್ಮ ಕೈಗೆ ಬಡಿಗೆ ಕೊಟ್ಟು ಹೊಡಿಸಿಕೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು (ಏ.08): ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರ ಸಾಲ ಮಾಡಿ ದಿವಾಳಿ ಆಗುತ್ತಿದೆ ಎಂದು ಟೀಕೆ ಮಾಡುತ್ತಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ 2018ರವರೆಗೆ ಸರ್ಕಾರದಿಂದ 2.42 ಲಕ್ಷ ಕೋಟಿ ಸಾಲ ಮಾಡಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ನಾಲ್ಕೂವರೆ ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದೆ. ರಾಜ್ಯದ ಒಟ್ಟು ಸಾಲದ ಮೊತ್ತ 5.40 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿತ್ತು. ಆದರೆ, ಬಿಜೆಪಿ ನಾಯಕರು ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ ಸಾಲದ ಲೆಕ್ಕವನ್ನು ತಿಳಿದುಕೊಳ್ಳದೇ ನಮ್ಮ ಕೈಗೆ ಬಡಿಗೆ ಕೊಟ್ಟು ಹೊಡೆಸಿಕೊಳ್ಳುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಸನ್ಮಾನ್ಯ ಬಿಜೆಪಿ ನಾಯಕರೇ, ನಮ್ಮ ಸರ್ಕಾರ ಸುಭದ್ರವಾಗಿದೆ, ದಿವಾಳಿಯಾಗಿರುವುದು ನಿಮ್ಮ ಬುದ್ದಿಯೇ ಹೊರತು ನಮ್ಮ ರಾಜ್ಯ ಅಲ್ಲ. ದಿನಕ್ಕೊಂದು ಸುಳ್ಳು ಹೇಳುತ್ತಾ, ಆ ಸುಳ್ಳು ಬಯಲಾದಾಗ ಮತ್ತೆ ಅದನ್ನು ಸಮರ್ಥಿಸಲು ಇನ್ನೊಂದಿಷ್ಟು ಸುಳ್ಳುಗಳನ್ನು ಸೃಷ್ಟಿಸುತ್ತಾ ನಿಮ್ಮನ್ನು ನೀವೇ ಬೆತ್ತಲೆ ಮಾಡಿಕೊಳ್ಳಬೇಡಿ. ಕಳೆದ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ರೂ.10,000 ಕೋಟಿ ಸಾಲ ಮಾಡಿದ್ದ ಕಾರಣಕ್ಕಾಗಿ ರಾಜ್ಯ ದಿವಾಳಿಯಾಗುತ್ತಿದೆ ಎಂದು ಬೊಬ್ಬಿಡುತ್ತಿರುವ ನೀವು, ನಿಮ್ಮ ಸರ್ಕಾರದ ಕಾಲದಲ್ಲಿನ ಸಾಲದ ಲೆಕ್ಕವನ್ನು ಪರಿಶೀಲಿಸುವ ಕಷ್ಟ ತೆಗೆದುಕೊಂಡಿದ್ದರೆ ಈ ರೀತಿ ನಮ್ಮ ಕೈಗೆ ಬಡಿಗೆ ಕೊಟ್ಟು ಹೊಡೆಸಿಕೊಳ್ಳುತ್ತಿರಲಿಲ್ಲ.
ಮಾಜಿ ಸಿಎಂ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರಿಗಿಂತ ಪ್ರಭಾವಿ ಮಂತ್ರಿ ಆಗುತ್ತಾರಾ? ಸಚಿವ ಚಲುವರಾಯಸ್ವಾಮಿ
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ 2020-21ರ ಹಣಕಾಸು ವರ್ಷದಲ್ಲಿ ಮಾಡಿದ್ದ ಸಾಲ ರೂ.84,528 ಕೋಟಿ, ಅವರು 2021-22ರಲ್ಲಿ ರೂ.67,332 ಕೋಟಿ ಮತ್ತು 2022-23ರ ಅವಧಿಯಲ್ಲಿ ರೂ.72,000 ಕೋಟಿ ಸಾಲ ಮಾಡಿದ್ದರು. ಆ ಸಾಲ ತೀರಿಸಲು ಅವರು 2022-23ರಲ್ಲಿ ರೂ.43,580 ಕೋಟಿ ಬಳಕೆ ಮಾಡಿದ್ದರು. ಈಗ ಆ ಸಾಲವನ್ನು ನಾವು ತೀರಿಸಬೇಕಾಗಿದೆ. ನಮ್ಮ ಸರ್ಕಾರದ ಮೇಲೆ ಆರೋಪ ಮಾಡುವ ಮೊದಲು ಕನಿಷ್ಠ ಬಸವರಾಜ ಬೊಮ್ಮಾಯಿ ಅವರನ್ನಾದರೂ ಕೇಳುವುದು ಬೇಡವೇ?
ಸ್ವಾತಂತ್ರ್ಯ ಬಂದಾಗಿನಿಂದ 2018ರ ವರೆಗಿನ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತ ರೂ.2.42 ಲಕ್ಷ ಕೋಟಿ ಆಗಿತ್ತು. 2018ರಿಂದ 2023ರ ವರೆಗಿನ ಐದು ವರ್ಷಗಳ ಅವಧಿಯಲ್ಲಿ ಈ ಸಾಲ ರೂ.5.40 ಲಕ್ಷ ಕೋಟಿಗಳಿಗೆ ಏರಿತ್ತು. ಕೇವಲ ಐದು ವರ್ಷಗಳ ಅವದಿಯಲ್ಲಿ ರಾಜ್ಯದ ಸಾಲ 3 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದ್ದು ಯಾವ ಪಕ್ಷದ ಆಡಳಿತದಲ್ಲಿ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಂಡು ರಾಜ್ಯದ ಜನತೆಗೆ ತಿಳಿಸುವಂತವರಾಗಿ.
ಬೆಂಗಳೂರಿನ ಖಾಸಗಿ ಟ್ರಸ್ಟ್‌ಗಳಿಗೆ ಹಂಚಲು ತೋರಿಸುತ್ತಿದ್ದ 30 ಕೋಟಿ ರೂ. ಮೌಲ್ಯದ ನೋಟುಗಳು ಪತ್ತೆ
ಬಿಜೆಪಿ ನಾಯಕರೇ, ಈ ಆಡಳಿತ, ಆರ್ಥಿಕತೆ, ಅಭಿವೃದ್ದಿ ವಿಚಾರಗಳೆಲ್ಲ ನಿಮ್ಮ ಚಹದ ಬಟ್ಟಲಲ್ಲ, ಹಿಂದು-ಮುಸ್ಲಿಂ, ಕೋಮುವಾದ, ಪಾಕಿಸ್ತಾನ, ಮುಸ್ಲಿಂ ಲೀಗ್ ಮೊದಲಾದ ವಿಚಾರಗಳನ್ನು ಜನರ ತಲೆಗೆ ತುಂಬಿ ಸೌಹಾರ್ದತೆಯಿಂದ ಬಾಳುತ್ತಿದ್ದ ಜನರನ್ನು ಪರಸ್ಪರ ಸಂಘರ್ಷಕ್ಕಿಳಿಸಿ ರಾಜಕೀಯ ಲಾಭ ಪಡೆಯುವುದಕ್ಕಷ್ಟೇ ನೀವು ಸಮರ್ಥರು. ಯಾರು ಸುಳ್ಳು ರಾಮಯ್ಯ, ಯಾರು ಸತ್ಯ ರಾಮಯ್ಯ ಎನ್ನುವುದನ್ನು ರಾಜ್ಯದ ಜನ ತಿಳಿದುಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಅವರು ನಿಮಗೆ ಉತ್ತರವನ್ನೂ ನೀಡಲಿದ್ದಾರೆ.