Asianet Suvarna News Asianet Suvarna News

ಘರ್‌ ವಾಪಸಿ ತಡೆಗೆ ಇಂದು ಬಿಜೆಪಿ ಕೋರ್‌ ಕಮಿಟಿ ಸಭೆ

ಹಾಲಿ ಮತ್ತು ಮಾಜಿ ಶಾಸಕರ ಪಕ್ಷಾಂತರದ ಭೀತಿ ನಡುವೆಯೇ ಪ್ರಮುಖ ಪ್ರತಿಪಕ್ಷ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ಸೋಮವಾರ ನಡೆಯುತ್ತಿದೆ.

BJP core committee meeting today to prevent Ghar wapsi at bengaluru rav
Author
First Published Aug 21, 2023, 6:01 AM IST

ಬೆಂಗಳೂರು (ಆ.21) :  ಹಾಲಿ ಮತ್ತು ಮಾಜಿ ಶಾಸಕರ ಪಕ್ಷಾಂತರದ ಭೀತಿ ನಡುವೆಯೇ ಪ್ರಮುಖ ಪ್ರತಿಪಕ್ಷ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ಸೋಮವಾರ ನಡೆಯುತ್ತಿದೆ. ಪಕ್ಷದ ಕಚೇರಿಯಲ್ಲಿ ನಡೆಯುವ ಈ ಸಭೆಯಲ್ಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಮಾಜಿ ಸಚಿವ ಸಿ.ಟಿ.ರವಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ವಿವಿಧ ಚುನಾವಣೆಗಳ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರೂ ಸೇರಿದಂತೆ ವಿವಿಧ ಹಂತದ ಮುಖಂಡರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ವದಂತಿಗಳು ದಟ್ಟವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಾಳೆಯದಲ್ಲಿ ಆತಂಕ ಉಂಟಾಗಿದೆ. ಹೀಗೆ ಬಿಟ್ಟರೆ ಬಿಜೆಪಿಯ ಸಂಘಟನೆ ಕುಸಿಯುತ್ತದೆ ಎಂಬ ಭೀತಿಯಿಂದ ವಲಸೆ ಹೋಗಲು ಸಿದ್ಧವಾಗಿರುವವರನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂಬ ಕೂಗು ಪಕ್ಷದ ಆಂತರಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಹೀಗಾಗಿ ಕೋರ್‌ ಕಮಿಟಿ ಸಭೆ ನಡೆಸಿ ಸಮಾಲೋಚನೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

Ghar wapsi: ಕಾಂಗ್ರೆಸ್‌ಗೆ ಸೋಮಶೇಖರ್‌ ಕರೆ ತರಲು ಶಾಸಕ ಶ್ರೀನಿವಾಸ್‌ಗೆ ಡಿಕೆ ಶಿವಕುಮಾರ್‌ ಟಾಸ್ಕ್

‘ನಮ್ಮ ಪಕ್ಷ ದುರ್ಬಲವಾಗಿದೆ ಎಂಬ ನಿಲವಿಗೆ ಕಾಂಗ್ರೆಸ್‌ ನಾಯಕರು ಬಂದಂತಿದೆ. ನಾವು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಪ್ರಬಲವಾಗಿ ಪ್ರಸ್ತಾಪಿಸಿ ವಿರೋಧಿಸಬೇಕಾಗಿದೆ. ಇಲ್ಲದಿದ್ದರೆ ಕರ್ನಾಟಕದಲ್ಲಿ ಬಿಜೆಪಿಯ ಸಂಘಟನೆಯನ್ನೇ ಮುಗಿಸಿಬಿಡುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಅವಕಾಶ ನೀಡಬಾರದು. ರಾಜ್ಯ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನೂ ಒಳಗೊಂಡಂತೆ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಹೋರಾಟ ಹಮ್ಮಿಕೊಂಡರೆ ನಮ್ಮ ಪಕ್ಷದ ಬಲ ಗೊತ್ತಾಗಲಿದೆ. ಕೋರ್‌ ಕಮಿಟಿ ಸಭೆಯಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಹೆಡೆಮುರಿ ಕಟ್ಟುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಜತೆಗೆ ಪಕ್ಷ ತೊರೆಯಬಹುದು ಎಂಬ ಅನುಮಾನವಿರುವವರನ್ನು ಕರೆದು ಮಾತನಾಡಿ ಅವರ ಅಹವಾಲನ್ನು ಆಲಿಸಿ ಮನವೊಲಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

Karnataka politics: ಪುತ್ರರ ಭವಿಷ್ಯಕ್ಕಾಗಿ ಎಸ್‌ಟಿಎಸ್‌, ಹೆಬ್ಬಾರ್‌ ಘರ್‌ ವಾಪಸಿ ಯತ್ನ?

Follow Us:
Download App:
  • android
  • ios