ಬೆಂಗಳೂರು, (ಮೇ.26): ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಇಂದು (ಬಧವಾರ) ಹೃದಯಾಘಾತದಿಂದ ನಿಧನರಾಗಿದ್ದಾರೆ.  

ಅವರ ನಿಧನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ, ಡಿಸಿಎಂ ಅಶ್ವತ್ಥ್ ನಾರಾಯಣ, ದೇವೇಗೌಡ, ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ನಾಯಕರುಗಳು ಸಂತಾಪ ಸೂಚಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಸ್. ದೊರೆಸ್ವಾಮಿ ವಿಧಿವಶ 

ಈ ಕುರಿತಂತೆ ಟ್ವಿಟ್ ಮಾಡಿರುವಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿ, ಪತ್ರಕರ್ತ, ಸಮಾಜ ಸೇವಕರು, ನಾಡುನುಡಿ ಜನಪರ ಕಾಳಜಿಗಳಿಗೆ ಸದಾ ಧ್ವನಿಯಾಗಿದ್ದ ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ದೇವರು ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರಿದ್ದಾರೆ.

ಸಿದ್ದರಾಮಯ್ಯ ಕಂಬನಿ
ಹಿರಿಯ ಸ್ವಾತಂತ್ರ್ಯ ಸೇನಾನಿ, ಶತಾಯುಷಿ ಎಚ್.ಎಸ್. ದೊರೆಸ್ವಾಮಿಯವರ ನಿಧನ ನನಗೆ ಆಘಾತ ಉಂಟುಮಾಡಿದೆ.‌  ಮನೆ ಹಿರಿಯನನ್ನು ಕಳೆದುಕೊಂಡ ದು:ಖ ನನ್ನದಾಗಿದೆ. ಅವರ ಕುಟುಂಬದ ಸದಸ್ಯರು ಮತ್ತು ಅಪಾರ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ.
ನಮ್ಮನ್ನು ಅಗಲಿ ಹೋದ ಎಚ್.ಎಸ್.ದೊರೆಸ್ವಾಮಿ ಅವರು ನಮ್ಮೆಲ್ಲರ. ಆತ್ಮ ಸಾಕ್ಷಿಯಾಗಿದ್ದರು. ತಪ್ಪು ಕಂಡಾಗ ಎಚ್ಚರಿಸಿ,  ಸರಿ ಕಂಡಾಗ ಬೆಂಬಲಿಸುತ್ತಿದ್ದ ಮಾರ್ಗದರ್ಶಕರಾಗಿದ್ದರು. ಇಳಿ ವಯಸ್ಸಿನಲ್ಲಿಯೂ ಜಗ್ಗದೆ, ಕುಗ್ಗದೆ ಅನ್ಯಾಯ-ಅಕ್ರಮ‌ ಕಂಡಾಗ ಬೀದಿಗಿಳಿಯುತ್ತಿದ್ದ ಅವರು ಎಲ್ಲರ ಪಾಲಿನ ಸ್ಪೂರ್ತಿಯಾಗಿದ್ದರು.

ಎಚ್‌ಡಿ ದೇವೇಗೌಡ ಸಂತಾಪ
ಸ್ವಾತಂತ್ರ್ಯ ಹೋರಾಟಗಾರರು, ಪತ್ರಕರ್ತರು, ಶತಾಯುಷಿಗಳಾದ ಶ್ರೀ ಹೆಚ್. ಎಸ್. ದೊರೆಸ್ವಾಮಿಯವರು ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಯಿತು. ತಮ್ಮ ಜೀವನದುದ್ದಕ್ಕೂ ಸಮಾಜದ ಏಳಿಗೆಗೆ ದುಡಿದ ಒಬ್ಬ ಮಹಾನ್ ಸಾಮಾಜಿಕ ಹೋರಾಟಗಾರರನ್ನು ಕಳೆದುಕೊಂಡು ನಮ್ಮ ರಾಜ್ಯ ಇಂದು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಈ ದುಃಖ ಭರಿಸುವ ಶಕ್ತಿ ದೊರೆಯಲಿ.

ಎಚ್‌ಡಿ ಕುಮಾರಸ್ವಾಮಿ
ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯೋತ್ತರ ನಂತರ ಸೆರೆವಾಸ ಅನುಭವಿಸಿದ್ದ ದೊರೆಸ್ವಾಮಿಯವರ ಬದುಕಿನ ಆದರ್ಶ, ಮೌಲ್ಯಗಳು ಎಲ್ಲರಿಗೂ ಸ್ಪೂರ್ತಿ.ಇಂತಹ ಮಹಾನ್ ಚೇತನ ಎರಡು ಶತಮಾನಗಳ ಕಾಲಘಟ್ಟದಲ್ಲಿ ನಮ್ಮೆಲ್ಲರಿಗೂ ಹೋರಾಟದ ಸ್ಪೂರ್ತಿಯ ಸೆಲೆಯಾಗಿ ಮುಂಚೂಣಿಯ ಮಾರ್ಗದರ್ಶಕರಾಗಿದ್ದರು ಎಂಬುದನ್ನು ಅತ್ಯಂತ ವಿನೀತ ಭಾವದಿಂದ ಸ್ಮರಿಸಿಕೊಳ್ಳುತ್ತೇನೆ. ಮೃತರ ಕುಟುಂಬದ ಸದಸ್ಯರು, ಅವರ ಅಸಂಖ್ಯ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ
ಶತಾಯುಷಿ, ಹಿರಿಯ ಸಾಮಾಜಿಕ ಚಿಂತಕ ದೊರೆಸ್ವಾಮಿಯವರು ಅಗಲಿಕೆಯ ಸುದ್ದಿ ಕೇಳಿ ದುಃಖವಾಗಿದೆ. ಶ್ರೀಯುತರ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.