ತಾಕತ್ತಿದ್ದರೆ ಸಂಘ, ಬಜರಂಗದಳ ನಿಷೇಧಿಸಿ: ಬೊಮ್ಮಾಯಿ, ಕಟೀಲ್‌, ಅಶೋಕ್‌, ನಿಷೇಧ ಅಧಿಕಾರ ರಾಜ್ಯಕ್ಕಿಲ್ಲ, ಕ್ರಮ ಕೈಗೊಂಡರೆ ಕಾಂಗ್ರೆಸ್‌ ನಿರ್ನಾಮ: ಬಿಜೆಪಿ

ಬೆಂಗಳೂರು/ಮಂಗಳೂರು(ಮೇ.27): ಆರ್‌ಎಸ್‌ಎಸ್‌, ಬಜರಂಗದಳ ನಿಷೇಧ ಮಾಡುವ ಕುರಿತು ಕಾಂಗ್ರೆಸ್‌ ನಾಯಕರು ನೀಡಿರುವ ಹೇಳಿಕೆ ವಿರುದ್ಧ ಬಿಜೆಪಿ ಮುಖಂಡರು ಮುಗಿಬಿದ್ದಿದ್ದು, ತಾಕತ್‌ ಇದ್ದರೆ ನಿಷೇಧ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ಶುಕ್ರವಾರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಮಾಜಿ ಸಚಿವ ಆರ್‌.ಅಶೋಕ್‌ ಪ್ರತ್ಯೇಕವಾಗಿ ಮಾತನಾಡಿ, ಕಾಂಗ್ರೆಸ್‌ ಹೇಳಿಕೆ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು, ಆರ್‌ಎಸ್‌ಎಸ್‌, ಬಜರಂಗದಳ ನಿಷೇಧದ ಕುರಿತು ಕಾಂಗ್ರೆಸ್‌ ಹೇಳಿಕೆ ನೀಡಿದೆ. ನಿಷೇಧ ಮಾಡಿ ತೋರಿಸಲಿ. ಯಾವುದೇ ಸಂಘ-ಸಂಸ್ಥೆಯನ್ನು ನಿಷೇಧ ಮಾಡುವ ಅಧಿಕಾರ ಇವರಿಗಿಲ್ಲ. ಅದನ್ನು ಮಾಡುವುದು ಕೇಂದ್ರ ಸರ್ಕಾರ. ಇದೆಲ್ಲ ಗೊತ್ತಿದ್ದರೂ ಸಹ ತುಷ್ಟೀಕರಣದ ರಾಜಕಾರಣ ಮಾಡಲು ಹೊರಟಿದ್ದಾರೆ. ಯಾರಿಗೆ ತುಷ್ಟೀಕರಣ ಮಾಡುತ್ತಿದ್ದಾರೋ ಅವರಿಗೂ ಇವರು ಯಾಮಾರಿಸುತ್ತಿದ್ದಾರೆ ಎಂದು ಟೀಕಿಸಿದರು.

ಆರ್‌ಎಸ್‌ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ: ಪ್ರಿಯಾಂಕ್‌ ವಿರುದ್ಧ ನಳಿನ್ ವಾಗ್ದಾಳಿ

ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಸಂಘಟನೆಯನ್ನು ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ. ನಿಷೇಧ ಮಾಡಲು ಮುಂದಾಗಿದ್ದವರನ್ನು ಈಗಾಗಲೇ ಮನೆಗೆ ಕಳುಹಿಸಲಾಗಿದೆ. ಇದನ್ನು ನಾವು ಸವಾಲಾಗಿ ಸ್ವೀಕಾರ ಮಾಡಿ, ರಾಜಕೀಯವಾಗಿ ಎದುರಿಸುತ್ತೇವೆ ಎಂದರು.

ನಿಷೇಧಕ್ಕೆ ಕೈಹಾಕಿದರೆ ಕಾಂಗ್ರೆಸ್‌ ಇರಲ್ಲ:

ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿ, ಆರ್‌ಎಸ್‌ಎಸ್‌ ನಿಷೇಧಿಸಿದಾಗಲೆಲ್ಲಾ ದೇಶದಲ್ಲಿ ಕಾಂಗ್ರೆಸ್‌ ಸರ್ಕಾರವೇ ಬಂದಿಲ್ಲ. ಆರ್‌ಎಸ್‌ಎಸ್‌, ಬಜರಂಗದಳ ನಿಷೇಧಕ್ಕೆ ಕೈಹಾಕಿದರೆ ಕಾಂಗ್ರೆಸ್‌ ಇರುವುದೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯವೇ ಅಂತ್ಯವಾಗುತ್ತದೆ. ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆಗೆ ತಾಕತ್‌ ಇದ್ದರೆ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದವರನ್ನು ಬಂಧಿಸಲಿ. ಆರ್‌ಎಸ್‌ಎಸ್‌ ಈ ದೇಶದಲ್ಲಿ ರಾಷ್ಟ್ರಭಕ್ತಿ ಕಲಿಸಿದೆ. ಈ ದೇಶವನ್ನು ನಡೆಸುವ ಪ್ರಧಾನಿ ಸಹ ಆರ್‌ಎಸ್‌ಎಸ್‌ ಸ್ವಯಂಸೇವಕ. ಕೇಂದ್ರದ ಸಚಿವರು ಮತ್ತು ನಾವೆಲ್ಲರೂ ಆರ್‌ಎಸ್‌ಎಸ್‌ ಸ್ವಯಂ ಸೇವಕರು. ಮಾಜಿ ಪ್ರಧಾನಿಗಳಾದ ಜವಹಾರ್‌ಲಾಲ್‌ ನೆಹರು, ಇಂದಿರಾಗಾಂಧಿ ಮತ್ತಿತರರು ಆರ್‌ಎಸ್‌ಎಸ್‌ ನಿಷೇಧಕ್ಕೆ ಮುಂದಾಗಿ ಕೈ ಸುಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ದ್ವೇಷ, ವಿಭಜನೆಯ ಮೂಲಕ ಕಾಂಗ್ರೆಸ್‌ ಆಡಳಿತ ಮಾಡುತ್ತಿದೆ. ಇವರ ಸಚಿವ ಸಂಪುಟದ ಗಲಾಟೆಯಲ್ಲಿಯೇ ಕಾಂಗ್ರೆಸ್‌ ವಿಭಜನೆಯಾಗುತ್ತದೆ. ಇದರ ಭಯದಲ್ಲಿ ಆರ್‌ಎಸ್‌ಎಸ್‌ ಹೆಸರಲ್ಲಿ ಕಾಂಗ್ರೆಸ್‌ ಆರೋಪ ಮಾಡುತ್ತಿದೆ. ಇವರ ಜಗಳ ಹೊರ ಬಾರದಂತೆ ತಡೆಯಲು ಇದೊಂದು ಷಡ್ಯಂತ್ರವಾಗಿದೆ ಎಂದು ಕಿಡಿಕಾರಿದರು.

ವಿಷಯಾಂತರಕ್ಕಾಗಿ ನಿಷೇಧ ಹೇಳಿಕೆ:

ಆರ್‌.ಅಶೋಕ್‌ ಮಾತನಾಡಿ, ಉಚಿತ ವಿಚಾರವನ್ನು ದೂರವಿಟ್ಟು ವಿಷಯಾಂತರ ಮಾಡಲು ಆರ್‌ಎಸ್‌ಎಸ್‌ ನಿಷೇಧ ಮಾಡುವ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್‌ ಮತ್ತು ಬಜರಂಗದಳ ಹಿಂದೂಗಳ ಧ್ವನಿ. ಹಿಂದೂಗಳ ಪರವಾಗಿ ನಿಲ್ಲುವ ಸಾರ್ವಜನಿಕ ಸಂಸ್ಥೆಗಳಿವು. ಆರ್‌ಎಸ್‌ಎಸ್‌ ನಿಷೇಧ ಮಾಡಿದರೆ ಗೂಟದ ಕಾರು ಮೂರು ತಿಂಗಳೂ ಇರುವುದಿಲ್ಲ. ದೇಶದ ಪ್ರಧಾನಿ, ಕೇಂದ್ರ ಗೃಹ ಸಚಿವರು, ರಾಷ್ಟ್ರಪತಿಗಳು ಆರ್‌ಎಸ್‌ಎಸ್‌ನವರಾಗಿದ್ದಾರೆ. ನಾವೂ ಆರ್‌ಎಸ್‌ಎಸ್‌ನವರು ಎಂದು ಹೇಳಿದರು.

ದೇಶ ವಿರೋಧಿ ಪಿಎಫ್‌ಐ, ಕೆಎಫ್‌ಡಿ, ಹಿಜಾಬ್‌, ಗೋಹತ್ಯೆ ನಿಷೇಧ ರದ್ದು ಮಾಡುವ ಬೇಡಿಕೆ ಇಟ್ಟಅಮ್ನೆಸ್ಟಿಇಂಟರ್‌ನ್ಯಾಷನಲ್‌ನವರು ಕಾಂಗ್ರೆಸ್‌ ಪರ ಇರುವವರು. ಅವರನ್ನು ಸಂತುಷ್ಟಗೊಳಿಸಲು ಆರ್‌ಎಸ್‌ಎಸ್‌ ವಿಚಾರ ಪ್ರಸ್ತಾಪ ಮಾಡಿದ್ದಾರೆ. ನಾವು ಇದಕ್ಕೆ ಸೊಪ್ಪು ಹಾಕುವುದಿಲ್ಲ. ಇದನ್ನು ಬಿಜೆಪಿ ಎದುರಿಸಲಿದೆ ಎಂದರು.

ಅಧ್ಯಯನ ಮಾಡಿದರೆ ಒಳಿತು: ಸುರೇಶ್‌ಕುಮಾರ್‌

ಆರ್‌ಎಸ್‌ಎಸ್‌ ನಿಷೇಧಿಸುವ ಕಾಂಗ್ರೆಸ್‌ ಹೇಳಿಕೆ ವಿಚಾರದಲ್ಲಿ ಶಾಸಕ ಸುರೇಶ್‌ ಕುಮಾರ್‌ ಟ್ವೀಟ್‌ ಮೂಲಕ ಟೀಕಾಪ್ರಹಾರ ನಡೆಸಿದ್ದು, ‘ನಿಷೇಧಿಸುತ್ತೇವೆ’ ಎಂದು ವೀರಾವೇಶದಿಂದ ಧಮಕಿ ಹಾಕುವ ಮುನ್ನ ಹಿಂದಿನ ವಿದ್ಯಮಾನಗಳನ್ನು ಒಮ್ಮೆ ಅಧ್ಯಯನ ಮಾಡಿದರೆ ಧಮಕಿ ಹಾಕುವವರಿಗೆ ಒಳಿತು ಎಂದು ಹೇಳಿದ್ದಾರೆ.

50ರ ದಶಕದಲ್ಲಿ ದೇಶದ ಅಂದಿನ ಸರ್ವೋಚ್ಚ ನಾಯಕರೊಬ್ಬರು ‘ಐ ವಿಲ್‌ ಕ್ರಶ್‌ ದಿಸ್‌ ಆರ್‌ಎಸ್‌ಎಸ್‌’ ಎಂದಿದ್ದರು. ಭಾರತೀಯ ಜನಸಂಘದ ಸಂಸ್ಥಾಪಕ ಅಧ್ಯಕ್ಷ ಶಾಮ್‌ ಪ್ರಸಾದ್‌ ಮುಖರ್ಜಿ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿ, ‘ವಿ ವಿಲ್‌ ಕ್ರಶ್‌ ದಿಸ್‌ ಕ್ರಶಿಂಗ್‌ ಮೆಂಟಾಲಿಟಿ’ ಎಂದಿದ್ದರು. ಕ್ರಶ್‌ ಮಾಡುತ್ತೇನೆ ಎಂದವರು ಈಗ ಇಲ್ಲ. ಆದರೆ, ಸಂಘ ಇದೆ, ಬೆಳೆದಿದೆ, ಬೆಳೆಯುತ್ತಲಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಇದುವರೆಗೂ ಎರಡು ಬಾರಿ ನಿಷೇಧಿಸಲಾಗಿದೆ. ಆದರೆ, ಇಂದು ಆರ್‌ಎಸ್‌ಎಸ್‌ ಎಷ್ಟುಎತ್ತರಕ್ಕೆ, ಎಷ್ಟುವಿಸ್ತಾರವಾಗಿ (ವಿದೇಶಗಳಲ್ಲಿ ಸಹ) ಬೆಳೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಯಾವ ಯಾವ ಕ್ಷೇತ್ರದಲ್ಲಿ ಪರಿವಾರದ ಸಂಸ್ಥೆಗಳು ಮಹತ್ತರ ಕಾರ್ಯ ಮಾಡುತ್ತಿವೆ ಎಂಬುದು ಬಹಳ ಮಹತ್ವದ ಸಂಗತಿ ಎಂದಿದ್ದಾರೆ.

ತಾಕತ್ತಿದ್ರೆ ಆರೆಸ್ಸೆಸ್‌ ನಿಷೇಧ ಮಾಡಿ: ಸರ್ಕಾರಕ್ಕೆ ಪುತ್ತಿಲ ಸವಾಲು

ಶಾಲೆಗಳಲ್ಲಿ ಆರೆಸ್ಸೆಸ್‌ ಚಟುವಟಿಕೆಗಳಿಗೆ ಬ್ರೇಕ್‌: ಕಾಂಗ್ರೆಸ್‌

ಬೆಂಗಳೂರು: ಆರ್‌ಎಸ್‌ಎಸ್‌ ನಿಷೇಧಿಸಿದರೆ ಕಾಂಗ್ರೆಸ್‌ ನಿರ್ನಾಮ ಆಗಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು ನೀಡಿದ್ದು, ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಆವರಣಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ತಡೆಯುವ ಕುರಿತು ವಿಮರ್ಶಿಸುವುದಾಗಿ ಹೇಳಿಕೆ ನೀಡಿದೆ.

ಕಾಂಗ್ರೆಸ್‌ನಿಂದ ದ್ವೇಷ ರಾಜಕಾರಣ: ಬಿಜೆಪಿ

ಬೆಂಗಳೂರು: ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಸಂಬಂಧ ಡಾ.ಸಿ.ಎಸ್‌.ಅಶ್ವತ್‌್ಥ ನಾರಾಯಣ, ಹರೀಶ್‌ ಪೂಂಜಾ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದು ಕಾಂಗ್ರೆಸ್ಸಿಗರ ದ್ವೇಷದ ರಾಜಕಾರಣವನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್‌.ಅಶೋಕ್‌ ಪ್ರತಿಕ್ರಿಯಿಸಿದ್ದಾರೆ.