'ನಲಪಾಡ್‌ ಹಲ್ಲೆ ಘಟನೆ ಕ್ಷುಲ್ಲಕ ಅಲ್ಲ: 2018ರಲ್ಲೇ ಎಚ್‌ಡಿಕೆ ಎಚ್ಚರಿಸಿದ್ದರೂ ಸಿದ್ದು ‘ಬಿಟ್‌’ ಹಾಕಿದ್ದರು'

* 2018ರಲ್ಲೇ ಎಚ್‌ಡಿಕೆ ಎಚ್ಚರಿಸಿದ್ದರೂ ಸಿದ್ದು ‘ಬಿಟ್‌’ ಹಾಕಿದ್ದರು: ಬಿಜೆಪಿ

* ನಲಪಾಡ್‌ ಹಲ್ಲೆ ಘಟನೆ ಕ್ಷುಲ್ಲಕ ಕಾರಣಕ್ಕೆ ನಡೆದಿಲ್ಲ

* ಹ್ಯಾಕಿಂಗ್‌, ಬಿಟ್‌ಕಾಯಿನ್‌, ಹವಾಲಾ ಕೈವಾಡ ಇತ್ತು

* ಈ ಬಗ್ಗೆ ತನಿಖೆಗೆ ಕುಮಾರಸ್ವಾಮಿ ಆಗ್ರಹಿಸಿದ್ದರು

* ನನಗೇಕೆ ತಿಳಿಸಲಿಲ್ಲ ಎಂದ ಸಿದ್ದುಗೆ ಬಿಜೆಪಿ ತಿರುಗೇಟು

Bitcoin Scam Congress MLA NA Harris son 2018 assault case is not Trivial says BJP pod

ಬೆಂಗಳೂರು(ನ.16): ಮೂರು ವರ್ಷದ ಹಿಂದೆ ನಗರದ ಯುಬಿ ಸಿಟಿಯಲ್ಲಿ (UB Cuty) ನಡೆದಿದ್ದ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ (Congress MLA NA Harris) ಪುತ್ರ ಮೊಹಮ್ಮದ್‌ ನಲಪಾಡ್‌ (Mohammed Haris Nalapad) ಗಲಾಟೆ ಪ್ರಕರಣದ ಹಿಂದೆ ಬಿಟ್‌ ಕಾಯಿನ್‌ ದಂಧೆ ಇದೆ ಎಂಬ ಶಂಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಆಗಲೇ ವ್ಯಕ್ತಪಡಿಸಿದ್ದರೂ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಿರ್ಲಕ್ಷಿಸಿದ್ದು ಯಾಕೆ ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.

ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಬಿಟ್‌ ಕಾಯಿನ್‌ ಪ್ರಕರಣದ (Bitcoin Scam) ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ವಿರೋಧ ಪಕ್ಷದಲ್ಲಿದ್ದವರು ಸರ್ಕಾರದ ಗಮನಕ್ಕೆ ತರಬೇಕಾಗಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ (BJP) ಈ ತಿರುಗೇಟು ನೀಡಿದೆ.

ಆಗ ವಿರೋಧ ಪಕ್ಷದಲ್ಲಿದ್ದ ಕುಮಾರಸ್ವಾಮಿ ಅವರು ನಲಪಾಡ್‌ ಪ್ರಕರಣದ ಹಿಂದೆ ಬಿಟ್‌ ಕಾಯಿನ್‌ ದಂಧೆಯಿದೆ ಎಂಬ ಗಂಭೀರ ಆರೋಪವನ್ನು ಹುಬ್ಬಳ್ಳಿಯಲ್ಲಿ ಮಾಡಿದ್ದರು. ಆ ಬಗ್ಗೆ 2018ರ ಫೆ.21ರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆದರೆ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಆ ಆರೋಪವನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಆಗ ಸುಮ್ಮನಿದ್ದವರು ಈಗಿನ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಆಪಾದನೆ ಮಾಡುತ್ತಿದ್ದಾರೆ. ವಾಸ್ತವವಾಗಿ ಈಗ ನಮ್ಮ ಸರ್ಕಾರ ತನಿಖೆಗೆ ಆದೇಶಿಸಿ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ಕಿಡಿಕಾರಿದೆ.

ಯಾರೂ ದೂರು ಕೊಟ್ಟಿರಲಿಲ್ಲ-ಸಿದ್ದು:

ಇದಕ್ಕೂ ಮುನ್ನ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಮುಖ್ಯಮಂತ್ರಿಯಾಗಿದ್ದ 2018ರ ಅವಧಿಯಲ್ಲಿ ಬಿಟ್‌ಕಾಯಿನ್‌ ಪ್ರಕರಣದ ಬಗ್ಗೆ ಯಾರೂ ದೂರು ಕೊಟ್ಟಿರಲಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಬಿಜೆಪಿಯವರಿಗೆ ಬಿಟ್‌ಕಾಯಿನ್‌ ಪ್ರಕರಣದ ಬಗ್ಗೆ ಮೊದಲೇ ಗೊತ್ತಿತ್ತು ಎನ್ನುವುದಾದರೆ ಏಕೆ ಸುಮ್ಮನಿದ್ದರು? ವಿರೋಧಪಕ್ಷದಲ್ಲಿ ಇದ್ದವರು ಅದನ್ನು ಹೊರ ತರಬೇಕಿತ್ತು. ಅಂದು ಸುಮ್ಮನೆ ಇದ್ದಿದ್ದು ಏಕೆ ಪ್ರಶ್ನಿಸಿದರು.

ನಲಪಾಡ್‌ ವಿರುದ್ಧ ಅಂದು ಕ್ರಿಮಿನಲ್‌ ಕೇಸ್‌ ದಾಖಲಾಗಿದೆ. ಆದರೆ, ಬಿಟ್‌ ಕಾಯಿನ್‌ ಬಗ್ಗೆ ಏನೂ ಕೇಳಿಬಂದಿರಲಿಲ್ಲ. ಇದು ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ನಡೆದಿರುವ ಘಟನೆ. ಆಗ ಅಶೋಕ್‌ (R Ashok) ಗೃಹ ಸಚಿವರಾಗಿರಲಿಲ್ಲ. ಪ್ರಕರಣದಲ್ಲಿ ಯಾರಿದ್ದಾರೆ ಎಂಬುದನ್ನು ಬಸವರಾಜ ಬೊಮ್ಮಾಯಿ (Basavaraj Bommai) ಹೇಳಲಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಏಕೆ ತನಿಖೆ ನಡೆಸಲಿಲ್ಲ-ಅಶೋಕ್‌:

ಇದಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ್‌, ಯುಬಿ ಸಿಟಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಶ್ರೀಕಿ ಸಹ ಒಬ್ಬ ಆರೋಪಿಯಾಗಿದ್ದ. ಆಗ ಕಾಂಗ್ರೆಸ್‌ ಸರ್ಕಾರವೇ ಇತ್ತು. ಈ ಪ್ರಕರಣದಲ್ಲಿ ಶ್ರೀಕಿಯನ್ನು ಯಾಕೆ ಬಂಧಿಸಲಿಲ್ಲ? ದೆಹಲಿಯ ಒತ್ತಡವಿತ್ತೇ ಅಥವಾ ರಾಜ್ಯದವರ ಒತ್ತಡ ಇತ್ತೇ? ವಿಶೇಷವೆಂದರೆ ಮೂರು ತಿಂಗಳ ನಂತರ ಸರ್ಕಾರ ಕೋರ್ಟ್‌ಗೆ ಶ್ರೀಕಿ ನಾಪತ್ತೆಯಾಗಿರುವ ಆರೋಪಿ ಎಂದು ಪ್ರಮಾಣ ಪತ್ರ ಸಲ್ಲಿಸುತ್ತದೆ. ಆತನ ವಿರುದ್ಧ ಕ್ರಮ ಕೈಗೊಳ್ಳದಂತೆ ಯಾರು ಪ್ರಭಾವ ಬೀರಿದ್ದರು ಎಂದು ಪ್ರಶ್ನೆಗಳ ಮಳೆಗರೆದರು.

ಯುಬಿ ಸಿಟಿ ಗಲಾಟೆ ಪ್ರಕರಣದ ಸಂಬಂಧ 2018ರ ಅಕ್ಟೋಬರ್‌ 5ರಂದು ಶ್ರೀಕಿ ಹೈಕೋರ್ಟ್‌ನಲ್ಲಿ ಜಾಮೀನು ಪಡೆಯುತ್ತಾನೆ. ಆದರೆ ಜಾಮೀನು ಪಡೆಯದಂತೆ ಆಗಿನ ಕಾಂಗ್ರೆಸ್‌ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಜಾಮೀನು ತೆಗೆದುಕೊಂಡ ನಂತರ ಶ್ರೀಕಿಯನ್ನು ಪೊಲೀಸ್‌ ಠಾಣೆಗೆ ಕರೆಸಿ ಯಾಕೆ ವಿಚಾರಣೆ ನಡೆಸಲಿಲ್ಲ? ಈ ರೀತಿ ಮಾಡದಂತೆ ತಡೆದದ್ದು ಯಾರು? 2018ರಲ್ಲೇ ಶ್ರೀಕಿ ತಾನು ಹ್ಯಾಕ್‌ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದರೂ ಆತನ ವಿರುದ್ಧ ಯಾಕೆ ಪ್ರಕರಣ ದಾಖಲಿಸಲಿಲ್ಲ? ಆತನಿಗೆ ರಾಜಾತಿಥ್ಯ ಕೊಟ್ಟವರು ಯಾರು ಎಂಬುದಕ್ಕೆ ಕಾಂಗ್ರೆಸ್‌ ಮುಖಂಡರು ಉತ್ತರಿಸಬೇಕು ಎಂದು ಅವರು ಆಗ್ರಹಿಸಿದರು.

ಸಿದ್ದು ಹೇಳಿದ್ದೇನು?

1. ನಾನು ಮುಖ್ಯಮಂತ್ರಿ ಆಗಿದ್ದಾಗ ಶ್ರೀಕಿ ಹ್ಯಾಕರ್‌ ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ

2. ಆತ ಹ್ಯಾಕಿಂಗ್‌, ಬಿಟ್‌ಕಾಯಿನ್‌ ದಂಧೆಯಲ್ಲಿರುವ ಕುರಿತು ಯಾರೂ ದೂರು ಕೊಟ್ಟಿರಲಿಲ್ಲ

3. ಆ ರೀತಿಯ ಯಾವುದೇ ಪ್ರಕರಣ ಪತ್ತೆ ಆಗಿರಲಿಲ್ಲ. ದಂಧೆ ನಡೆದದ್ದು ಹೇಗೆ ಗೊತ್ತಾಗಬೇಕು?

4. ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿಗೆ ಗೊತ್ತಿದ್ದರೆ ಯಾಕೆ ಹೇಳಲಿಲ್ಲ? ಆಗ ಸುಮ್ಮನೆ ಇದ್ದದ್ದೇಕೆ?

5. ಶ್ರೀಕಿ ಬಣ್ಣ ಬಯಲಾದಾಗ ಗೃಹ ಸಚಿವರಾಗಿದ್ದ ಬೊಮ್ಮಾಯಿ ಯಾಕೆ ಏನೂ ಕ್ರಮ ಕೈಗೊಳ್ಳಲಿಲ್ಲ?

ಬಿಜೆಪಿ ತಿರುಗೇಟೇನು?

1. ಸಿದ್ದು ಸಿಎಂ ಆಗಿದ್ದಾಗಲೇ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಟ್‌ಕಾಯಿನ್‌ ಬಗ್ಗೆ ಎಚ್ಚರಿಸಿದ್ದರು

2. ಬೆಂಗಳೂರಿನಲ್ಲಿ ಫರ್ಜಿ ಕೆಫೆಯಲ್ಲಿ ನಡೆದ ಗಲಾಟೆಗೆ ಕಾಲು ತಾಗಿದ್ದಷ್ಟೇ ಕಾರಣ ಅಲ್ಲ ಎಂದಿದ್ದರು

3. ಹ್ಯಾರಿಸ್‌ ಪುತ್ರ ನಲಪಾಡ್‌ ಇದ್ದ ಘಟನೆ ಹಿಂದೆ ಕೋಟ್ಯಂತರ ರು. ದಂಧೆ ಇದೆ ಎಂದು ಎಚ್ಚರಿಸಿದ್ದರು

4. ಹ್ಯಾಕಿಂಗ್‌, ಬಿಟ್‌ಕಾಯಿನ್‌, ಹವಾಲಾ ದಂಧೆಯ ಹಿನ್ನೆಲೆ ಇದೆ, ತನಿಖೆ ಆಗಬೇಕೆಂದು ಆಗ್ರಹಿಸಿದ್ದರು

5. ಅಷ್ಟು ಗಂಭೀರ ಆರೋಪ ಕೇಳಿ ಬಂದಿದ್ದರೂ ಸಿದ್ದು ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದುದೇಕೆ?

ನಲಪಾಡ್‌ ಹಲ್ಲೆ ಕೇಸ್‌ ಹಿಂದೆ ಬಿಟ್‌ಕಾಯಿನ್‌ ದಂಧೆ ಇರುವ ಶಂಕೆ ಇದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ ಬಗ್ಗೆ 2018ರ ಫೆಬ್ರವರಿ 21ರಂದು ‘ಕನ್ನಡಪ್ರಭ’ದಲ್ಲಿ ಪ್ರಕಟವಾದ ವರದಿ.

Latest Videos
Follow Us:
Download App:
  • android
  • ios