ಬಿಟ್ ಕಾಯಿನ್ ಕೇಸ್ ವಿಚಾರಣೆಗೆ ಹ್ಯಾಕರ್ ಶ್ರೀಕಿಗೆ ಹೈಕೋರ್ಟ್ ವಿನಾಯಿತಿ, ಮನೆ ಮೇಲೆ ಎಸ್‌ಐಟಿ ದಾಳಿ
ಬಿಟ್ ಕಾಯಿನ್ ಹಗರಣದಲ್ಲಿ ಆರೋಪಿಗಳಾಗಿರುವ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಸೇರಿ ಇಬ್ಬರಿಗೆ ಹೈಕೋರ್ಟ್ ನ್ಯಾಯಾಲಯದ ಮುಂದೆ ಹಾಜರಾಗುವುದರಿಂದ ವಿನಾಯಿತಿ ನೀಡಿದೆ.

ಬೆಂಗಳೂರು (ಸೆ.13): ಬಿಟ್ ಕಾಯಿನ್ ಹಗರಣದಲ್ಲಿ ಆರೋಪಿಗಳಾಗಿರುವ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ, ಸುನೀಶ್ ಹೆಗ್ಡೆ ಮತ್ತು ಹೇಮಂತ್ ಮುದ್ದಪ್ಪ ಅವರಿಗೆ ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರಾಗುವುದರಿಂದ ವಿನಾಯಿತಿ ನೀಡಿ ಹೈಕೋರ್ಟ್ ಮಂಗಳವಾರ ಮಧ್ಯಂತರ ಆದೇಶ ಮಾಡಿದೆ.
ಬಿಟ್ ಕಾಯಿನ್ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಹಾಗೂ ಇತರೆ ಆರೋಪಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ಪೀಠ ಈ ಆದೇಶ ಮಾಡಿ ವಿಚಾರಣೆಯನ್ನು ಅ.3ಕ್ಕೆ ಮುಂದೂಡಿತು.
ಇದೇ ವೇಳೆ ಬಿಟ್ ಕಾಯಿನ್ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಸಿಐಡಿಗೆ ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ.
ಪ್ರಕರಣದಲ್ಲಿ ಸುಳ್ಳು ಸಾಕ್ಷಿ ಸೃಷ್ಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ವಿರುದ್ಧ ಹೊಸದಾಗಿ ಎಫ್ಐಆರ್ ದಾಖಲಿಸಲಾಗಿದೆ. ಇದರಲ್ಲಿ ತಮ್ಮನ್ನು ಬಂಧಿಸುವ ಸಾಧ್ಯತೆಯಿದೆ. ಹಾಗಾಗಿ, ಎಫ್‌ಐಆರ್ ರದ್ದುಪಡಿಸಬೇಕು ಎಂದು ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.
ಶ್ರೀಕಿ ಮನೆ ಮೇಲೆ ದಾಳಿ ಹಾರ್ಡ್‌ಡಿಸ್ಕ್, ಲ್ಯಾಪ್‌ಟಾಪ್, ಕೆಲ ದಾಖಲೆಗಳು ವಶಕ್ಕೆ
ಬಿಟ್ ಕಾಯಿನ್ ಹಗರಣ ಸಂಬಂಧ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಆತನ ಇಬ್ಬರು ಸ್ನೇಹಿತರ ಮನೆಗಳ ಮೇಲೆ ಮಂಗಳವಾರ ವಿಶೇಷ ತನಿಖಾ ದಳ (ಎಸ್‌ಐಟಿ) ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಜಯನಗರದಲ್ಲಿರುವ ಶ್ರೀಕಿ, ಸಂಜಯನಗರದಲ್ಲಿರುವ ಆತನ ಸ್ನೇಹಿತರಾದ ಸುನೀಶ್ ಹೆಗ್ಡೆ ಹಾಗೂ ಸದಾಶಿವನಗರದ ಪ್ರಸಿದ್ಧ ಶೆಟ್ಟಿ ಮನೆಗಳ ಮೇಲೆ ಎಸ್‌ಐಟಿ ಡಿವೈಎಸ್ಪಿ ರವಿಶಂಕರ್ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಕೆಲ ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್ ಸೇರಿದಂತೆ ಕೆಲ ದಾಖಲೆಗಳನ್ನು ಎಸ್‌ಐಟಿ ಜಪ್ತಿ ಮಾಡಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ವೆಬ್‌ಸೈಟ್ ಹ್ಯಾಕ್ ಮಾಡಿ ಹಣ ದೋಚಿದ ಹಾಗೂ ಡ್ರಗ್ಸ್ ಮಾರಾಟ ಪ್ರಕರಣಗಳಲ್ಲಿ ಸಹ ಶ್ರೀಕಿ ಮತ್ತು ಆತನ ಸ್ನೇಹಿತರ ಬಂಧನವಾಗಿತ್ತು. ಈಗ ಶ್ರೀಕಿ ಗ್ಯಾಂಗ್‌ಗೆ ಎಸ್‌ಟಿಐ ಬಿಸಿ ತಟ್ಟಿದೆ.
ನ್ಯಾಯಾಲಯದಲ್ಲಿ ಸರ್ಚ್ ವಾರೆಂಟ್ ಪಡೆದ ಎಸ್‌ಐಟಿ ತಂಡವು, ಬೆಳ್ಳಂಬೆಳಗ್ಗೆ ಶ್ರೀಕಿ ಗ್ಯಾಂಗ್ ಸದಸ್ಯರ ಮನೆಗಳ ಬಾಗಿಲು ಬಡಿದಿದೆ. ಈ ವೇಳೆ ಶ್ರೀಕಿ ಹಾಗೂ ಆತನ ಸ್ನೇಹಿತರು ಮನೆಯಲ್ಲೇ ಇದ್ದ ಬಗ್ಗೆ ಖಚಿತವಾಗಿಲ್ಲ. ಈ ಮೂವರ ಮನೆಗಳಲ್ಲಿ ನಾಲ್ಕು ತಾಸಿಗೂ ಅಧಿಕ ಹೊತ್ತು ತಪಾಸಣೆ ನಡೆಸಿದ ಕೆಲ ದಾಖಲೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಿ ಅಧಿಕಾರಿಗಳು ಮರಳಿದ್ದಾರೆ ಎಂದು ತಿಳಿದು ಬಂದಿದೆ.