ಬೆಂಗಳೂರು[ಜ.12]: ಕಾಲೇಜುಗಳಿಗೆ ಬಂದರೂ ಕ್ಲಾಸ್‌ಗಳಿಗೆ ಬಾರದೆ ‘ಚಕ್ಕರ್‌’ ಹಾಕುತ್ತಿದ್ದ ಪ್ರಾಧ್ಯಾಪಕರಿಗೆ ಬಿಸಿ ಮುಟ್ಟಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಜ್ಯದ ವಿಶ್ವವಿದ್ಯಾಲಯಗಳು ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರಿಗೂ ಇನ್ನು ಮುಂದೆ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರು ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಕುಲಸಚಿವರೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬೋಧನಾ ಸಿಬ್ಬಂದಿ ತರಗತಿಗಳಿಗೆ ಹಾಜರಾಗಿದ್ದಾರೆಯೇ? ಬೋಧನೆ ಮಾಡಿದ್ದಾರೆಯೇ ಎಂಬುದನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡ ಪರಿಶೀಲನೆ ಮಾಡಬಹುದಾಗಿದೆ. ಸದ್ಯ ಶೇ.75ರಷ್ಟುಹಾಜರಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗುತ್ತಿದೆ. ಇದೇ ರೀತಿ ಪ್ರಾಧ್ಯಾಪಕರಿಗೂ ಹಾಜರಾತಿ ಕಡ್ಡಾಯ ಮಾಡಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಸಚಿವ ಜಿ.ಟಿ. ದೇವೇಗೌಡ, ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರು ತರಗತಿಗಳಿಗೆ ಸರಿಯಾಗಿ ಹಾಜರಾಗದ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ನಿಗಾ ವಹಿಸಲಾಗಿದೆ. ಅಂತಿಮವಾಗಿ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಸಮಸ್ಯೆಗಳೇನು?

ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಕಾಲೇಜುಗಳಿಗೆ ಬಂದು ಸಹಿ ಮಾಡಿ ಹರಟೆ ಹೊಡೆಯುತ್ತಿದ್ದಾರೆ. ಬೋಧನೆ ಮಾಡುತ್ತಿಲ್ಲ. ಬದಲಾಗಿ ಕಾಲೇಜಿನ ಹೊರಗೆ ತಮ್ಮ ವೈಯಕ್ತಿಕ ಕೆಲಸಗಳಿಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಇದರಿಂದ ಶಿಕ್ಷಣ ಗುಣಮಟ್ಟಕೂಡ ಕುಸಿಯುತ್ತಿದೆ ಎಂಬ ದೂರುಗಳಿವೆ.

ಬೆಂವಿವಿ ಪ್ರಯತ್ನ ಮಾಡಿತ್ತು:

ಡಾ. ಎನ್‌. ಪ್ರಭುದೇವ್‌ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಅವಧಿಯಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಕೊನೆಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸರಿಯಾಗಿ ಪಾಲನೆ ಮಾಡದಿದ್ದರಿಂದ ಕೈಬಿಡಲಾಗಿತ್ತು. ಇದೀಗ ಮತ್ತೆ ಹೊಸ ವ್ಯವಸ್ಥೆ ಕುರಿತು ಮಾತನಾಡಿದ ಬೆಂವಿವಿ ಕುಲಪತಿ ಪ್ರೊ. ಕೆ.ಆರ್‌. ವೇಣುಗೋಪಾಲ್‌, ನನ್ನಿಂದಲೇ ಬಯೋಮೆಟ್ರಿಕ್‌ ಆರಂಭವಾಗಲಿದೆ. ಸಿಬ್ಬಂದಿ ಕೂಡ ಪಾಲನೆ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.