ಲಂಡನ್‌[ಫೆ.07]: ಮಾರಣಾಂತಿಕ ಕೊರೋನಾ ವೈರಸ್‌ಗೆ ಔಷಧ ಕಂಡುಹಿಡಿಯಲು ಜಾಗತಿಕ ಮಟ್ಟದಲ್ಲಿ ವೈದ್ಯ ಸಮುದಾಯ ಹರಸಾಹಸ ಪಡುತ್ತಿರುವಾಗಲೇ, ಮಹಾವಾಕ್ಯ ಮಂತ್ರದ ಮೂಲಕ ಕೊರೋನಾ ವೈರಸ್‌ ಅನ್ನು ತೊಡೆದು ಹಾಕುವುದಾಗಿ, ವಿದೇಶಕ್ಕೆ ಪರಾರಿಯಾಗಿರುವ ವಿವಾದಿತ ಧರ್ಮಗುರು ನಿತ್ಯಾನಂದ ಘೋಷಿಸಿದ್ದಾನೆ.

ಈ ಸಂಬಂಧ ತನ್ನ ಫೇಸ್ಬುಕ್‌ ಖಾತೆಯಲ್ಲಿ ವಿಡಿಯೋ ಪೋಸ್ಟ್‌ ಮಾಡಿರುವ ನಿತ್ಯಾ, ‘ಓಂ ನಿತ್ಯಾನಂದ ಪರಮ ಶಿವೋಹಂ‘ ಎಂದು ಸತತ 48 ಗಂಟೆಗಳ ಮಂತ್ರ ಪಠಣದ ಮೂಲಕ ಧನಾತ್ಮಕ ಹಾಗೂ ಆಧ್ಯಾತ್ಮಿಕ ಶಕ್ತಿ ಉತ್ಪತ್ತಿಯಾಗುವಂತೆ ಮಾಡುತ್ತೇವೆ. ಅದರ ಮೂಲಕ ಕೊರೋನಾ ವೈರಾಣು ಅನ್ನು ಗುಣಪಡಿಸಬಹುದು ಎಂದು ಹೇಳಿದ್ದಾನೆ.

'ಕೈಲಾಸವಾಸಿ' ನಿತ್ಯಾನಿಗೆ ದೊಡ್ಡ ಶಾಕ್, ರೇಪ್ ಕೇಸ್‌ನಲ್ಲಿ ಮತ್ತೆ ಜೈಲಿಗೆ?

ಶುಕ್ರವಾರ ರಾತ್ರಿ 9 ಗಂಟೆಯಿಂದ ಭಾನುವಾರ ರಾತ್ರಿ 9 ಗಂಟೆವರೆಗೂ ಕಠಿಣ ಮಂತ್ರ ಪಠಣದ ಮೂಲಕ ಈ ಕಾಯಿಲೆ ಗುಣಪಡಿಸಲಾಗುತ್ತದೆ. ಸಾಂಕ್ರಾಮಿಕ ಕೊರೋನಾ ವಿರುದ್ಧದ ಈ ಅಖಂಡ ಮಹಾಜಪದಲ್ಲಿ ವಿಶ್ವದ ಎಲ್ಲಾ ನಾಗರಿಕರಿಗೂ ಆಹ್ವಾನಿಸುತ್ತೇನೆ. ರಾಷ್ಟ್ರಗಳ ಒಗ್ಗಟ್ಟಿಗಾಗಿ ಶ್ರೀ ಕೈಲಾಸದಲ್ಲಿ ಆಯೋಜನೆಯಾದ ಈ ಯೋಜನೆಯು, ಸಮಗ್ರ ವೈದ್ಯಕೀಯ ಚಿಕಿತ್ಸೆಗೆ ನೆರವಾಗಲಿದೆ. ಈ ಓಂ ನಿತ್ಯಾನಂದ ಪರಮ ಶಿವೋಹಂ ಮಂತ್ರ ಪಠಣದಿಂದ ಕೊರೋನಾ ವೈರಸ್‌ನಿಂದ ಗುಣಮುಖವಾಗುವುದು ಖಚಿತ. ಈ ಬಗ್ಗೆ ನಾನು ಗ್ಯಾರಂಟಿ ನೀಡುತ್ತೇವೆ ಹಾಗೂ ಸವಾಲು ಹಾಕುತ್ತೇನೆ ಎಂದು ಹೇಳಿದ್ದಾನೆ