ನವದೆಹಲಿ[ಜ.23]: ಅತ್ಯಾಚಾರ ಸೇರಿ ಹಲವು ಪ್ರಕರಣಗಳಲ್ಲಿ ಬೆಂಗಳೂರು ಹಾಗೂ ಗುಜರಾತ್‌ ಪೊಲೀಸರಿಗೆ ಬೇಕಾಗಿರುವ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಕೆರೀಬಿಯನ್‌ ದೇಶವೊಂದರಲ್ಲಿ ಬೀಡುಬಿಟ್ಟಿದ್ದಾನೆ ಎನ್ನಲಾಗಿದೆ. ಕ್ಯೂಬಾ ಮತ್ತು ಮೆಕ್ಸಿಕೋ ದೇಶಗಳ ನಡುವೆ ಬರುವ ಬೆಲಿಝ್‌ ಎಂಬ ಪುಟ್ಟದೇಶದ ಪಾಸ್‌ಪೋರ್ಟ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ನಿತ್ಯಾನಂದ, ಬಳಿಕ ಕೆರೆಬಿಯನ್‌ ದೇಶವೊಂದರಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ನಿತ್ಯಾನಂದ ಎಲ್ಲಿದ್ದಾನೆಂದು ಪತ್ತೆಗೆ 'ಬ್ಲೂ' ಕಾರ್ನರ್ ನೊಟೀಸ್

ಭಾರತದಲ್ಲಿ ಬಂಧನಕ್ಕೊಳಗಾಗುವ ಭೀತಿಯಲ್ಲಿ ಕೆಲ ತಿಂಗಳ ಹಿಂದೆ ದೇಶ ತೊರೆದಿದ್ದ ನಿತ್ಯಾನಂದ, ಈಕ್ವೆಡಾರ್‌ನಲ್ಲಿ ನೆಲೆ ಕಂಡುಕೊಳ್ಳುವ ಯತ್ನ ಮಾಡಿದ್ದ. ಅಲ್ಲಿನ ದ್ವೀಪವೊಂದನ್ನು ಖರೀದಿಸಿ ಅದಕ್ಕೆ ಕೈಲಾಸ ಎಂದು ಹೆಸರಿಟ್ಟು ಹೊಸ ಹಿಂದೂ ದೇಶ ರಚನೆಯ ಘೋಷಣೆ ಮಾಡಿ, ವಿಡಿಯೋ ಬಿಡುಗಡೆ ಮಾಡಿದ್ದ. ಆದರೆ ನಿತ್ಯಾನಂದನಿಗೆ ದ್ವೀಪ ಮಾರಾಟ ಮಾಡಿದ ವರದಿಗಳನ್ನು ಈಕ್ವೆಡಾರ್‌ ದೇಶ ನಿರಾಕರಿಸಿತ್ತು. ಅಲ್ಲಿಂದ ಆತ ಹೈಟಿ ಎಂಬ ದೇಶಕ್ಕೆ ಪರಾರಿಯಾಗಿದ್ದಾನೆ ಎಂದು ವರದಿಗಳು ಹೇಳಿದ್ದವು.

ಅದರ ಬೆನ್ನಲ್ಲೇ ಇದೀಗ ಬೆಲಿಝ್‌ ದೇಶದ ಪಾಸ್‌ಪೋರ್ಟ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ನಿತ್ಯಾನಂದ ಕೆರೆಬಿಯನ್‌ ದೇಶಗಳ ಪೈಕಿ ಯಾವುದೋ ಒಂದು ದ್ವೀಪದಲ್ಲಿ ತಂಗಿದ್ದಾನೆ ಎಂದು ಹೇಳಲಾಗಿದೆ.

ನಿತ್ಯಾನಂದನ ಕೈಲಾಸ ನಿರ್ಮಾಣಕ್ಕೆ ಹಣ ಕೊಟ್ಟಿದ್ದು ಶಿಷ್ಯೆ!

2 ವರ್ಷಗಳ ಹಿಂದೆ ಬೆಲಿಝ್‌ ದೇಶದ ವಿಶ್ವವಿದ್ಯಾಲಯವೊಂದು ನಿತ್ಯಾನಂದನಿಗೆ ಗೌರವ ಡಾಕ್ಟರೆಟ್‌ ಪದವಿ ನೀಡಿತ್ತು.