ಭೋಪಾಲ(ಡಿ.06): ಕೊರೋನಾ ತಗಲುತ್ತದೆಯೆಂದು ಹೆದರಿ ಪತ್ನಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದ ನವವಿವಾಹಿತನೊಬ್ಬ ಕೊನೆಗೆ ಅನಿವಾರ್ಯವಾಗಿ ಪುರುಷತ್ವ ಪರೀಕ್ಷೆಗೆ ಒಳಗಾಗಬೇಕಾಗಿ ಬಂದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗಂಡ ತನ್ನ ಹತ್ತಿರ ಬರುತ್ತಿಲ್ಲ ಎಂದು ಬೇಸರಿಸಿಕೊಂಡು ತವರಿಗೆ ಹೋದ ಪತ್ನಿಯನ್ನು ಮರಳಿ ಕರೆತರಲು ಆತ ಪುರುಷತ್ವ ಪರೀಕ್ಷೆಗೆ ಒಳಗಾಗಿದ್ದಾನೆ.

ಕೊರೋನಾ ಜೋರಾಗಿ ಹರಡುತ್ತಿದ್ದ ವೇಳೆ ಜೂ.29ರಂದು ಭೋಪಾಲದ ಯುವಕ-ಯುವತಿ ಮದುವೆಯಾಗಿದ್ದರು. ಮದುವೆಯ ನಂತರ ಯುವತಿಯ ಮನೆಯವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಆಗ, ತನ್ನ ಹೆಂಡತಿಗೆ ರೋಗನಿರೋಧಕ ಶಕ್ತಿ ಚೆನ್ನಾಗಿರುವುದರಿಂದ ಅವಳಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೆದರಿದ ಗಂಡ ಆಕೆಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾನೆ. ಆದರೆ, ಆತನಿಗೆ ಪುರುಷತ್ವವಿಲ್ಲ, ಹೀಗಾಗಿ ತನ್ನ ಬಳಿಗೆ ಬರುತ್ತಿಲ್ಲ ಎಂದು ಭಾವಿಸಿದ ಪತ್ನಿ ಆತನನ್ನು ಬಿಟ್ಟು ತವರಿಗೆ ತೆರಳಿದ್ದಾಳೆ.

ನಂತರ ಎರಡೂ ಮನೆಯವರು ಸಂಧಾನ ನಡೆಸಿದರೂ ಪ್ರಯೋಜನವಾಗಿಲ್ಲ. ಡಿ.2ರಂದು ವೈವಾಹಿಕ ವ್ಯಾಜ್ಯಗಳ ಕೇಂದ್ರಕ್ಕೆ ಹೋದ ಆಕೆ, ತನಗೆ ಗಂಡನಿಂದ ವಿಚ್ಛೇದನ ಕೊಡಿಸಿ ಜೀವನಾಂಶ ಸಿಗುವಂತೆ ಮಾಡಬೇಕೆಂದು ಕೇಳಿಕೊಂಡಿದ್ದಾಳೆ. ಜೊತೆಗೆ ಅತ್ತೆ-ಮಾವನ ವಿರುದ್ಧ ಕಿರುಕುಳದ ಆರೋಪವನ್ನೂ ಮಾಡಿದ್ದಾಳೆ. ಆಕೆಗೆ ಕೌನ್ಸೆಲಿಂಗ್‌ ನಡೆಸಿದ ಅಧಿಕಾರಿಗಳು ಗಂಡನನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಆಗ ಆಕೆ ಗಂಡನಿಗೆ ಪುರುಷತ್ವ ಪರೀಕ್ಷೆ ನಡೆಸಬೇಕೆಂದು ಪಟ್ಟು ಹಿಡಿದಿದ್ದಾಳೆ. ಅದಕ್ಕೆ ಒಪ್ಪಿದ ಆತ ಶುಕ್ರವಾರ ಪರೀಕ್ಷೆಗೆ ಒಳಗಾಗಿ ಪುರುಷತ್ವ ಸಾಬೀತುಪಡಿಸಿದ್ದಾನೆ. ನಂತರ ಗಂಡನ ಮನೆಗೆ ಹೋಗಲು ಆಕೆ ಒಪ್ಪಿಕೊಂಡಿದ್ದಾಳೆ.