ಕಬಿನಿಯ ಆಕರ್ಷಣೆ ಶಕ್ತಿಮಾನ್ 'ಭೋಗೇಶ್ವರ' ಇನ್ನಿಲ್ಲ
* ಕಬಿನಿಯ ಆಕರ್ಷಣೆಯಾಗಿದ್ದ ಭೋಗೇಶ್ವರ
* ವಯೋಸಹಜವಾಗಿ ಮೃತಪಟ್ಟ ಭೋಗೇಶ್ವರ
* ಭೋಗೇಶ್ವರನ ಕಳೆದುಕೊಂಡ ಕಬಿನಿಯಲ್ಲಿ ನೀರವ ಮೌನ
ಮೈಸೂರು(ಜೂ.12): ಮೈಸೂರು ಜಿಲ್ಲೆಯ ಕಬಿನಿ ಹಿನ್ನೀರಿನ ಆಕರ್ಷಣೆಯ ಕೇಂದ್ರವಾಗಿದ್ದ, ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ, ಕಬಿನಿಯ ಶಕ್ತಿಮಾನ್ ಎಂದೇ ಖ್ಯಾತಿ ಪಡೆದಿದ್ದ ನೀಳ ದಂತದ ಆನೆ ಭೋಗೇಶ್ವರ ಇಂದು ನಿಧನವಾಗಿದೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಭೋಗೇಶ್ವರ ಆನೆಯ ಕಳಬರಹ ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.
60 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದ ಕಬಿನಿಯ ಹಿರಿಯಣ್ಣ, ಸುಮಾರು 4 ಅಡಿಗೂ ಉದ್ದದ ನೀಳ ದಂತ, ಸುಂದರ ನಡಿಗೆ ಮೂಲಕವೇ ಪ್ರಾಣಿಪ್ರಿಯರ ಮನಗೆದ್ದಿತ್ತು. ಆದರೀಗ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದ ಭೋಗೇಶ್ವರ ಸಾವಿನಿಂದ ಪ್ರವಾಸಿಗರಲ್ಲಿ, ಪ್ರಾಣಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.
ಭೋಗೇಶ್ವರ ಆನೆಯ ಫೋಟೋಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಈ ಆನೆಯ ದಂತವನ್ನು ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ. ಭೋಗೇಶ್ವರ ತನ್ನ ದಂತಗಳಿಂದಲೇ ಜನ ಮನ ಗೆದ್ದಿದ್ದಾನೆ. ಇದೀಗ ಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಾ ಕಾಡಿನಗಲಕ್ಕೂ ಓಡಾಡುತ್ತಿದ್ದ ಭೋಗೇಶ್ವರ ಇಲ್ಲದೆ, ಕಬಿನಿಯಲ್ಲಿ ನೀರವ ಮೌನ ಮನೆ ಮಾಡಿದೆ.
ಭೋಗೇಶ್ವರ ಆನೆ ಕಳೆಬರಹ ಪತ್ತೆಯಾದ ಬಳಿಕ ಅನೇಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಈ ಆನೆ ಕಬಿನಿ ಸುತ್ತಮುತ್ತ ದರ್ಶನ ನೀಡುತ್ತಿತ್ತು. ವಯೋಸಹಜವಾಗಿ ಭೋಗೇಶ್ವರ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ. ಒಟ್ಟಿನಲ್ಲಿ ಭೋಗೇಶ್ವರ ಆನೆ ಸಾವು ಎಲ್ಲೆಡೆ ತೀವ್ರ ದುಃಖ ತಂದಿದ್ದು, ಪ್ರಾಣಿಪ್ರಿಯರು ತೀವ್ರ ಬೇಸರಗೊಂಡಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ಅಂತ್ಯಕ್ರಿಯೆ ಕೂಡ ನೆರವೇರಿಸಿದ್ದಾರ. ಇದೇ ವೇಳೆ ಭೋಗೇಶ್ವರನ ನೆನಪು ಅಮರವಾಗಿಸುವ ಯಾವುದಾದರೂ ಕೆಲಸ ಮಾಡಲೂ ಚಿಂತನೆ ನಡೆಸಿದ್ದಾರೆನ್ನಲಾಗಿದೆ.