Asianet Suvarna News Asianet Suvarna News

‘ಸಿದ್ಧಗಂಗಾ ಶ್ರೀ ಇದ್ದಾಗಲೇ ಭಾರತ ರತ್ನ ನೀಡಬೇಕಿತ್ತು’

ಶಿವಕುಮಾರ ಸ್ವಾಮೀಜಿ ಅವರು ಜೀವಂತ ಬದುಕಿದ್ದಾಗಲೇ ‘ಭಾರತ ರತ್ನ’ ನೀಡಿದ್ದರೆ, ಪ್ರಶಸ್ತಿ ಮೌಲ್ಯವೇ ಹೆಚ್ಚಾಗುತ್ತಿತ್ತು. ಇದೀಗ ಶ್ರೀಗಳಿಗೆ ಭಾರತ ರತ್ನ ನೀಡದೆ ನಮಗೆ ನಾವೇ ಅನ್ಯಾಯ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. 
 

Bharata Ratna should have been conferred before Siddagana Seer dies says Siddaramaiah
Author
Bengaluru, First Published Jan 30, 2019, 3:37 PM IST

ಬೆಂಗಳೂರು :  ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಜೀವಂತ ಬದುಕಿದ್ದಾಗಲೇ ‘ಭಾರತ ರತ್ನ’ ನೀಡಿದ್ದರೆ, ಪ್ರಶಸ್ತಿ ಮೌಲ್ಯವೇ ಹೆಚ್ಚಾಗುತ್ತಿತ್ತು. ‘ಸಮಾಜದ ರತ್ನ’ವಾಗಿದ್ದ ಅವರಿಗೆ ಪ್ರಶಸ್ತಿ ನೀಡಿದ ಗೌರವ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತಿತ್ತು. ಇದೀಗ ಶ್ರೀಗಳಿಗೆ ಭಾರತ ರತ್ನ ನೀಡದೆ ನಮಗೆ ನಾವೇ ಅನ್ಯಾಯ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. 

ಕರ್ನಾಟಕ ರಕ್ಷಣಾ ವೇದಿಕೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿಶ್ವ ಗುರುವಿಗೆ ನಮನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಗಳು ಪ್ರಶಸ್ತಿಗಳನ್ನು ಬಯಸಿದವರಲ್ಲ. ಅನ್ನ, ಅಕ್ಷರ, ಆಶ್ರಯ ನೀಡಿದ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ‘ಭಾರತ ರತ್ನ’ ನೀಡುವಂತೆ ಶಿಫಾರಸು ಮಾಡಲಾಗಿತ್ತು. 

ಕೇಂದ್ರ ಸರ್ಕಾರ ನೀಡುವ ಮನಸು ಮಾಡಿಲ್ಲ. ಮರಣೋತ್ತರ ಪ್ರಶಸ್ತಿ ನೀಡುವಂತೆ ನಾನು ಒತ್ತಾಯಿಸುವುದಿಲ್ಲ. ಬದುಕಿದ್ದಾಗ ನೀಡಿದ್ದರೆ, ಇಡೀ ಸಮಾಜಕ್ಕೆ ಗೌರವ ಸಿಗುತ್ತಿತ್ತು ಎಂದು ಹೇಳಿದರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಶಿವಕುಮಾರ ಶ್ರೀಗಳು ಇಷ್ಟಲಿಂಗದಲ್ಲಿ ಮಾತ್ರ ದೇವರನ್ನು ಕಂಡಿಲ್ಲ. 

ಬಡವರು, ಮಕ್ಕಳು, ಎಲ್ಲ ವರ್ಗದ ಜನರು, ಪ್ರಾಣಿ, ಪಕ್ಷಿಗಳು ಸೇರಿದಂತೆ ಎಲ್ಲ ಕಡೆಯಲ್ಲೂ ದೇವರನ್ನು ಕಂಡಿದ್ದಾರೆ. ಅನ್ನ, ಅಕ್ಷರ, ಆಶ್ರಯದ ಸೇವೆ ಮೂಲಕ ದೇಶದ ಎಲ್ಲ ಮಠಾಧೀಶರು ಹಾಗೂ ಮಠಗಳಿಗೆ ಮಾದರಿಯಾಗಿದ್ದರು ಎಂದು ಸ್ಮರಿಸಿದರು. 

ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ಮಹಾನ್ ತಪಸ್ವಿಗೆ, ದಾರ್ಶನಿಕನಿಗೆ ಸರ್ಕಾರ ನೀಡಿದ ಗೌರವ. ಮುಂದಿನ ಪೀಳಿಗೆಗೆ ಉತ್ತಮ ಸಂದೇಶವಾಗಿದೆ. 12 ನೇ ಶತಮಾನದಲ್ಲಿ ಬಸವಣ್ಣ, 16 ನೇ ಶತಮಾನದಲ್ಲಿ ಯಡಿಯೂರು ಶ್ರೀಗಳು, 20 ನೇ ಶತಮಾನದ ಕೊನೆಯಲ್ಲಿ ಶಿವಕುಮಾರ ಶ್ರೀಗಳು ಶಾಶ್ವತವಾಗಿ ಜನಮಾನಸದಲ್ಲಿ ಉಳಿಯಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಕರಿಬಸವ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಅಥಣಿಯ ಮೊಟಗಿ ಮಠದ ಪ್ರಭು ಚೆನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್, ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಕುಂ.ವೀರಭದ್ರಪ್ಪ, ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಉಪಸ್ಥಿತರಿದ್ದರು.

Follow Us:
Download App:
  • android
  • ios