ಭದ್ರಾವತಿಯಲ್ಲಿ ಮತ್ತೆ ಸುವರ್ಣಯುಗ ಆರಂಭ: ವಿಐಎಸ್‌ಎಲ್ ಬಾರ್‌ಮಿಲ್ ಆ.10ರಿಂದ ಶುರು
ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಆ.10 ರಿಂದ ಪುನಾರಂಭ ಆಗಲಿದ್ದು, ಮತ್ತೊಮ್ಮೆ ಸುವರ್ಣಯುಗ ಆರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಶಿವಮೊಗ್ಗ (ಆ.01): ರಾಜ್ಯದ ಭದ್ರಾವತಿಯಲ್ಲಿ ಸುವರ್ಣಯುಗದ ಆರಂಭಕ್ಕೆ ನಾಂದಿ ಹಾಡಿದ್ದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ಹಲವು ವರ್ಷಗಳಿಂದ ಸ್ಥಗಿತಗೊಂಡಿತ್ತು. ಈಗ ಆಗಸ್ಟ್ 10 ರಿಂದ ಪುನಾರಂಭ ಆಗಲಿದ್ದು, ಮತ್ತೊಮ್ಮೆ ಭದ್ರಾವತಿಯಲ್ಲಿ ಸುವರ್ಣಯುಗ ಪುನಾರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಮತ್ತೆ ಶುರುವಾಗುತ್ತಿದೆ ಭದ್ರಾವತಿಯ ಸುವರ್ಣಯುಗ! ಮತ್ತೆ ಫಳಫಳಿಸಲಿದೆ ಕಪ್ಪು ಚಿನ್ನ! ವಿಐಎಸ್ಎಲ್ ಮೈಕೊಡವಿ ಮೇಲೇಳುತ್ತಿದೆ! ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ. ಜೊತೆಗೆ, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಕಬ್ಬಿಣ ಉತ್ಪಾದನೆ ಶುರುಮಾಡಲು SAIL ಮ್ಯಾನೇಜ್ಮೆಂಟ್ ಒಪ್ಪಿಕೊಂಡಿದೆ. ಇದೇ ತಿಂಗಳ 10 ಕ್ಕೆ ಬಾರ್ ಮಿಲ್ (bar mill) ಶುರುವಾಗಿ, ಅದಾದ ಕೆಲದಿನದಲ್ಲೇ ಪೂರ್ಣ ಪುನರಾರಂಭವಾಗಲಿದೆ. ಈವರೆಗೆ ಬಂದ ಸವಾಲುಗಳನ್ನೆಲ್ಲಾ ಎದುರಿಸಿ ಗೆದ್ದ ಹೆಮ್ಮೆ ಶಿವಮೊಗ್ಗ ಜಿಲ್ಲೆ ಹಾಗೂ ಭದ್ರಾವತಿ ನಗರದ ಜನರದ್ದು ಆಗಿದೆ. ಭರವಸೆ ಕಳೆದುಕೊಳ್ಳದ ನೌಕರ ಸಮುದಾಯ ಕೂಡ ಸವಾಲುಗಳನ್ನು ಎದುರಿಸಿದ ತಂಡವಾಗಿದೆ.
ಬೆಂಗಳೂರು- ಶಿವಮೊಗ್ಗ ವಿಮಾನ ಟಿಕೆಟ್ ಬುಕಿಂಗ್ ಆರಂಭ: ಟಿಕೆಟ್ ದರ 3,999 ರೂ.
ಭದ್ರಾವತಿಯ ಸಮಸ್ತ ಜನರ ಪ್ರಾರ್ಥನೆ ಫಲ ಕೊಟ್ಟಿದೆ: ಇದಕ್ಕೆ ಕಾರಣರಾದ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ (Narendra Modi) ಅವರಿಗೆ, ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಜಿ, ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಜಿ, ಮತ್ತು ಕೇಂದ್ರ ಉಕ್ಕು ಸಚಿವ ಸನ್ಮಾನ್ಯ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾಜಿ ಅವರಿಗೆ ಕೃತಜ್ಞತೆಗಳು. ಅಭಿನಂದನೆಗಳು. ಭದ್ರಾವತಿಯ ಸಮಸ್ತ ಜನರ ಪ್ರಾರ್ಥನೆ ಫಲ ಕೊಟ್ಟಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಭದ್ರಾವತಿ ಕಾರ್ಖಾನೆ ಉಳಿಸಲು ನಿರ್ಣಯ: ರಾಜ್ಯದ ಹೆಮ್ಮೆಯಾಗಿರುವ ಹಾಗೂ ಸ್ವಾತಂತ್ರ್ಯದ ನಂತರ ದೇಶದಲ್ಲಿ ಸೃಷ್ಟಿಯಾಗಿದ್ದ ಕೈಗಾರಿಕಾ ಕ್ರಾಂತಿಯ ವೇಳೆ ಭದ್ರಾವತಿಯಲ್ಲಿ ಆರಂಭಿಸಲಾಗಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್)ಯನ್ನು ಮುಚ್ಚಲು ಬಿಡುವುದಿಲ್ಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಸರ್ವಪಕ್ಷಗಳ ನಾಯಕರು ಒಮ್ಮತದ ನಿರ್ಣಯ ಕೈಗೊಂಡಿದ್ದರು. ಈ ಕುರಿತಿ ಮಾತನಾಡಿದ್ದ ಶಾಸಕ ಸಂಗಮೇಶ ಅವರು, ಭದ್ರಾವತಿ (Visvesvaraya Iron and Steel Plant -VISL) ಕಾರ್ಖಾನೆ ಬಂದ್ ಆಗುತ್ತಿರುವ ವಿಚಾರ ಪ್ರಸ್ತಾಪಿಸಿ, ಕಂಪನಿ ಉಳಿಸಲು ಒಂದು ಸರ್ವಾನುಮತದಿಂದ ನಿರ್ಣಯ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yadiyurappa) ಕೂಡ ವಿಐಎಸ್‌ಎಲ್ ಉಳಿಸುವಂತೆ ಆಗ್ರಹ ವ್ಯಕ್ತಪಡಿಸಿದರು. ಕೂಡಲೇ ಕಂಪನಿ ಉಳಿಸಲು ನಿರ್ಣಯ ಮಾಡುವಂತೆ ಮನವಿ ಮಾಡಿದ್ದರು.
ಸದ್ಯಕ್ಕೆ ವಿಐಎಸ್‌ಎಲ್ ಕಾರ್ಖಾನೆ ಬಂದ್ ಮಾಡೋದಿಲ್ಲ: ಸಂಸದ ಬಿ.ವೈ.ರಾಘವೇಂದ್ರ
ಕೇಂದ್ರ ಸರ್ಕಾರ ಕಾರ್ಖಾನೆ ಉಳಿಸಲು ಭರವಸೆ ಕೊಟ್ಟಿದೆ: ಇದೇ ವೇಳೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಮಾತನಾಡಿ, ಭದ್ರಾವತಿಯ ವಿಐಎಸ್‌ಎಲ್ ಕೈಗಾರಿಕೆ ಮುಚ್ಚಲು ಅವಕಾಶ ಕೊಡಲ್ಲ. ಮೊದಲು ಕಾರ್ಖಾನೆ ಮುಚ್ಚಲು ಬಂದಿರುವ ಆದೇಶಕ್ಕೆ ತಡೆಯಾಜ್ಞೆ (Stay Order) ಕೊಡಬೇಕು. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸಂಸದ ರಾಘವೇಂದ್ರ (MP Raghavendra) ಅವರ ನೇತೃತ್ವದಲ್ಲಿ ಈಗಾಗಲೇ ಮನವಿ ನೀಡಲಾಗಿದೆ. ಕಾರ್ಖಾನೆ ಬಂದ್ ಮಾಡುವುದಕ್ಕೆ ತಡೆಯಾಜ್ಞೆ ಕೊಟ್ಟರೆ ಜನರ ಆತಂಕ ದೂರವಾಗುತ್ತದೆ. ಈಗಾಗಲೇ ಕೇಂದ್ರಕ್ಕೂ ಸಹ ಬರೆದಿದ್ದೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಕೇಂದ್ರ ಸರ್ಕಾರ ಕೊಟ್ಟಿದೆ ಎಂದು ಹೇಳಿದರು.