ಬೆಂಗಳೂರು :  ವೈಟ್‌ಫೀಲ್ಡ್-ಬಾಣಸವಾಡಿ ನಡುವಿನ ಡೆಮು (ಡೀಸೆಲ್ ಚಾಲಿತ) ರೈಲಿಗೆ ಸಂಸದ ಪಿ.ಸಿ.ಮೋಹನ್ ಭಾನುವಾರ ಬೈಯಪ್ಪನ ಹಳ್ಳಿ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು. 

ಈ ವೇಳೆ ಮಾತನಾಡಿದ ಅವರು, ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಕೇಂದ್ರ ರೈಲ್ವೆ ಸಚಿವರು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಆದರೆ, ರಾಜ್ಯ ಸರ್ಕಾರದಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಕಳೆದ ಕೇಂದ್ರ ಬಜೆಟ್‌ನಲ್ಲಿ ಯೋಜನೆ ಘೋಷಣೆಯಾಗಿದ್ದು, ಇನ್ನೂ ಅನುಷ್ಠಾನಕ್ಕೆ ಚಾಲನೆ ಸಿಕ್ಕಿಲ್ಲ. 

ರಾಜ್ಯ ಸರ್ಕಾರ ಪ್ರತಿ ಹಂತದಲ್ಲೂ ಒಂದಿಲ್ಲೊಂದು ಷರತ್ತು ವಿಧಿಸುತ್ತಿದೆ. ಮೊದಲಿಗೆ ಯೋಜನಾ ವೆಚ್ಚದ ಬಗ್ಗೆ ಗೊಂದಲ ಉಂಟಾಗಿತ್ತು. ಇದೀಗ ಹೊಸದಾಗಿ 19 ಷರತ್ತುಗಳನ್ನು ಮುಂದಿ ಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೇಂದ್ರ ರೈಲ್ವೆ ಸಚಿವರು ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಆಸಕ್ತಿ ತೋರಿರುವಾಗ ರಾಜ್ಯ ಸರ್ಕಾರವೂ ಆಸಕ್ತಿ ತೋರಬೇಕು. ಉಪನಗರ ರೈಲು ಯೋಜನೆಯಿಂದ ಲಕ್ಷಾಂತರ ಮಂದಿಗೆ ಉಪಯೋಗವಾಗಲಿದೆ. 

ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಈ ಯೋಜನೆಯಿಂದ ಮೆಟ್ರೋ ರೈಲು ಆದಾಯ ಕುಸಿಯುವ ಪ್ರಮೆಯವೇ ಇಲ್ಲ. ಏಕೆಂದರೆ, ಇನ್ನು ಕೆಲವೇ ವರ್ಷಗಳಲ್ಲಿ ಬೆಂಗಳೂರು ನಗರದ ಜನ ಸಂಖ್ಯೆ ಎರಡು ಕೋಟಿ ದಾಟಲಿದೆ. ಹೀಗಿರುವಾಗ ನಗರಕ್ಕೆ ಬಹು ಮಾದರಿಯ ಸಾರಿಗೆ ವ್ಯವಸ್ಥೆಯ ಅಗತ್ಯ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಉಪನಗರ ಯೋಜನೆ ಪ್ರಮುಖವಾಗಿದೆ ಎಂದರು. 

ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್.ಎಸ್.ಸಕ್ಸೇನಾ ಮಾತನಾಡಿ, ಡೆಮು ರೈಲು ಸೇವೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮಾರಿಕುಪ್ಪಂ- ಬೆಂಗಳೂರು ನಡುವೆ ಸಂಚರಿಸುವ ಸ್ವರ್ಣ ಪ್ಯಾಸೆಂಜರ್ ರೈಲಿನ ದಟ್ಟಣೆ ಕೊಂಚ ಕಡಿಮೆಯಾಗಲಿದೆ. ಈ ಡೆಮು ರೈಲನ್ನು ಯಶವಂತಪುರ ಅಥವಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ವಿಸ್ತರಿಸುವಂತೆ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ಕ್ರಮ ವಹಿಸುವುದಾಗಿ ಹೇಳಿದರು. 

ಭಾನುವಾರ ಹೊರತುಪಡಿಸಿ ವಾರದ ಆರು ದಿನ ವೈಟ್‌ಫೀಲ್ಡ್‌ನಿಂದ ಬೆಳಗ್ಗೆ 7.50ಕ್ಕೆ ಹೊರಡಲಿರುವ ಈ ಡೆಮು ರೈಲು 7.54ಕ್ಕೆ ಹೂಡಿ ನಿಲ್ದಾಣ, 8.02ಕ್ಕೆ ಕೆ.ಆರ್.ಪುರಂ, 8.09ಕ್ಕೆ ಬೈಯಪ್ಪನಹಳ್ಳಿ ಹಾಗೂ 8.30ಕ್ಕೆ ಬಾಣಸವಾಡಿ ತಲುಪಲಿದೆ. ಬಾಣಸವಾಡಿಯಿಂದ ಸಂಜೆ 6.25ಕ್ಕೆ ಹೊರಡುವ ರೈಲು, 6.44ಕ್ಕೆ ಬೈಯಪ್ಪನಹಳ್ಳಿ, 6.51ಕ್ಕೆ ಕೆ. ಆರ್.ಪುರ, 7 ಗಂಟೆಗೆ ಹೂಡಿ ಹಾಗೂ 7.20ಕ್ಕೆ ವೈಟ್‌ಫೀಲ್ಡ್ ತಲುಪಲಿದೆ.