ಬೆಂಗಳೂರಿನ ಅವಿಭಾಜ್ಯ ಸಾರಿಗೆ ಸಂಸ್ಥೆಯಾಗಿರುವ ನಮ್ಮ ಮೆಟ್ರೋ ಮೊಟ್ಟ ಮೊದಲ ಸಲ ಅಂತರ ಜಿಲ್ಲೆ ಸಂಚಾರ ಆರಂಭಿಸುವ ಸುದ್ದಿ ಹೊರಬಿದ್ದಿದೆ. ಬೆಂಗಳೂರು ಟು ತುಮಕೂರಿಗೆ ಮೆಟ್ರೋ ವಿಸ್ತರಣೆಗೆ ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಬೆಂಗಳೂರು (ನ.17): ಮೆಟ್ರೋ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅದರಲ್ಲೂ ತುಮಕೂರಿನ ಜನರಿಗೆ ನಮ್ಮ ಮೆಟ್ರೋ ಕಡೆಯಿಂದ ಸಖತ್ ಸುದ್ದಿ ಹೊರಬಿದ್ದಿದೆ. ಬೆಂಗಳೂರಿನ ಅವಿಭಾಜ್ಯ ಸಾರಿಗೆ ಸಂಸ್ಥೆಯಾಗಿರುವ ನಮ್ಮ ಮೆಟ್ರೋ ಮೊಟ್ಟ ಮೊದಲ ಸಲ ಅಂತರ ಜಿಲ್ಲೆ ಸಂಚಾರ ಆರಂಭಿಸುವ ಸುದ್ದಿ ಹೊರಬಿದ್ದಿದೆ. ಬೆಂಗಳೂರು ಟು ತುಮಕೂರಿಗೆ ಮೆಟ್ರೋ ವಿಸ್ತರಣೆಗೆ ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದೆ.

59.6 ಕಿಮೀ ಗ್ರೀನ್ ಲೈನ್ ವಿಸ್ತರಣೆಗೆ ಡಿಪಿಆರ್ ರೆಡಿ ಮಾಡಲು ಬಿಎಂಆರ್‌ಸಿಎಲ್ ಬಿಡ್ ಕರೆದಿದೆ. ಈ ಹಿಂದೆ ಮಾದವರ-ತುಮಕೂರು ಕಾರಿಡಾರ್‌ನ ಡಿಪಿಆರ್‌ಗಾಗಿ ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಳ್ಳಲು ಸರ್ಕಾರದ ನಿರ್ದೇಶನ ನೀಡಿತ್ತು. ಈ ಹಿನ್ನಲೆ ಡಿಪಿಆರ್ ರೆಡಿ ಮಾಡಲು ಬಿಎಂಆರ್‌ಸಿಎಲ್ ಬಿಡ್‌ಗಳನ್ನು ಆಹ್ವಾನಿಸಿದೆ. ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲು ಪ್ಲಾನ್ ಮಾಡಲಾಗಿದ್ದು, ಮಾದವರ (ಬಿಐಇಸಿ)ದಿಂದ ತುಮಕೂರುವರೆಗಿನ ಹಸಿರು ಮಾರ್ಗದ 59.60 ಕಿಮೀ ವಿಸ್ತರಣೆಗಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಗೆ ಆಹ್ವಾನಿಸಲಾಗಿದೆ.

ಹೊಸ ಕಾರಿಡಾರ್ ನೆಲಮಂಗಲ, ದಾಬಸ್ ಪೇಟೆ ಮತ್ತು ಕ್ಯಾತಸಂದ್ರ ಮೂಲಕ ಹಾದು ಹೋಗಲಿದೆ. ನವೆಂಬರ್ 21, 2025 ರಂದು ಟೆಂಡರ್ ತೆರೆಯುವ ಸಾಧ್ಯತೆಯಿದೆ. ಇದು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನಡೆಯಲಿದೆ. ಈ ಯೋಜನೆಯ ಮೊದಲ ಹಂತಕ್ಕೆ 20,649 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದೆ. ಇನ್ನು ಈ ಯೋಜನೆಯನ್ನು 2024-25ರ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರು.

ಕೆಂಪು ಮಾರ್ಗ ವೆಚ್ಚ ತಗ್ಗಿಸಲು ಮುಂದಾದ ಮೆಟ್ರೋ

ಸರ್ಜಾಪುರ - ಹೆಬ್ಬಾಳ ಸಂಪರ್ಕಿಸುವ (ಕೆಂಪು ಮಾರ್ಗ) ನಮ್ಮ ಮೆಟ್ರೋ ಯೋಜನಾ ವೆಚ್ಚ ಮರು ಪರಿಶೀಲಿಸುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸೂಚಿಸಿದ್ದ ಹಿನ್ನೆಲೆಯಲ್ಲಿ ಈ ಮಾರ್ಗದ ಸುರಂಗದ ನಿಲ್ದಾಣಗಳನ್ನು ತಗ್ಗಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಇದರಿಂದ ಯೋಜನಾ ವೆಚ್ಚ ₹3 ಸಾವಿರ ಕೋಟಿಯಷ್ಟು ತಗ್ಗಲಿದೆ. ಈ ಯೋಜನೆ ನಮ್ಮ ಮೆಟ್ರೋದ ಅತ್ಯಂತ ದುಬಾರಿ ಮಾರ್ಗ ಎನ್ನಿಸಿಕೊಂಡಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜ್ಯ ಸಚಿವ ಸಂಪುಟ ಈ ಮಾರ್ಗದ ಡಿಪಿಆರ್‌ ಅನುಮೋದನೆ ನೀಡಿತ್ತು.

ಅದರಂತೆ ಪ್ರತಿ ಕಿಮೀಗೆ ₹ 776 ಕೋಟಿ ಹಾಗೂ ಒಟ್ಟಾರೆ ಯೋಜನಾ ವೆಚ್ಚ ₹28,405 ಕೋಟಿಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಇದು, ಈವರೆಗಿನ ಅತ್ಯಂತ ದುಬಾರಿ ಮೆಟ್ರೋ ಯೋಜನೆಯಾಗಲಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿತ್ತು. ರಾಜ್ಯ ಒಪ್ಪಿಗೆ ಕೊಟ್ಟ ಬಳಿಕ ಕೇಂದ್ರಕ್ಕೆ ಅನುಮೋದನೆಗೆ ವರದಿ ಸಲ್ಲಿಸಲಾಗಿತ್ತು. ಈ ಹಂತದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಯೋಜನಾ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಮರು ಪರಿಶೀಲಿಸುವಂತೆ ಬಿಎಂಆರ್‌ಸಿಎಲ್‌ಗೆ ಸೂಚಿಸಿತ್ತು.