ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದಾಗಿ ನಟ ನಾಗಭೂಷಣ್ ಕಾರು ಅಪಘಾತ: ಚಾರ್ಜ್‌ಶೀಟ್ ಸಲ್ಲಿಕೆ
ಎರಡು ತಿಂಗಳ ಹಿಂದೆ ನಡೆದಿದ್ದ, ಸ್ಯಾಂಡಲ್‌ವುಡ್ ನಟ ನಾಗಭೂಷಣ್ ಕಾರು ಅಪಘಾತ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ಸುಮಾರು 70 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಬೆಂಗಳೂರು (ನ.13): ಎರಡು ತಿಂಗಳ ಹಿಂದೆ ನಡೆದಿದ್ದ, ಸ್ಯಾಂಡಲ್‌ವುಡ್ ನಟ ನಾಗಭೂಷಣ್ ಕಾರು ಅಪಘಾತ ಪ್ರಕರಣ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ಸುಮಾರು 70 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ನಟ ನಾಗಭೂಷಣ್ ಕಾರು ಚಾಲನೆ ವೇಳೆ ಮದ್ಯ ಸೇವಿಸಿರಲಿಲ್ಲ. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದೋಷಾರೋಪ ಪಟ್ಟಿಯಲ್ಲಿ 20ಕ್ಕೂ ಅಧಿಕ ಸಾಕ್ಷಿಗಳು, ಪ್ರತ್ಯಕ್ಷ ದರ್ಶಿಗಳು, ಗಾಯಾಳು ಕೃಷ್ಣ ಅವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದಾರೆ. ಇದರ ಜತೆಗೆ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳ ಬಗ್ಗೆಯೂ ದೋಷಾರೋಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ನಟ ನಾಗಭೂಷಣ್ ಅವರು ಸೆ.30ರ ರಾತ್ರಿ 9.30ರ ಸುಮಾರಿಗೆ ತಮ್ಮ ಕಿಯಾ ಕಾರಿನಲ್ಲಿ ಉತ್ತರಹಳ್ಳಿ ಕಡೆಯಿಂದ ಜೆ.ಪಿ.ನಗರದ ತಮ್ಮ ಮನೆಗೆ ಹೊರಟಿದ್ದರು. ಮಾರ್ಗ ಮಧ್ಯೆ ವಸಂತಪುರ ಮುಖ್ಯರಸ್ತೆಯಲ್ಲಿ ಪ್ರೇಮಾ(48) ಮತ್ತು ಕೃಷ್ಣ(58) ದಂಪತಿ ಊಟ ಮುಗಿಸಿ ವಾಯುವಿಹಾರಕ್ಕೆ ತೆರಳಲು ಅಪಾರ್ಟ್‌ಮೆಂಟ್‌ನಿಂದ ಹೊರಗೆ ಬಂದು ಪಾದಚಾರಿ ಮಾರ್ಗದಿಂದ ರಸ್ತೆಗೆ ಇಳಿದಿದ್ದರು.
ಈ ವೇಳೆ ಹಿಂದಿನಿಂದ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದ ನಾಗಭೂಷಣ್ ಏಕಾಏಕಿ ದಂಪತಿಗೆ ಡಿಕ್ಕಿ ಹೊಡೆದು ಬಳಿಕ ಪಾದಚಾರಿ ಮಾರ್ಗದ ವಿದ್ಯುತ್ ಕಂಬಕ್ಕೆ ಗುದ್ದಿಸಿದ್ದರು. ಡಿಕ್ಕಿಯ ರಭಸಕ್ಕೆ ಪ್ರೇಮಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಇವರ ಪತಿ ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದರಿಂದ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ಮೃತರ ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು, ನಟ ನಾಗಭೂಷಣ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು.
ನಮಗೆ ಭಯಪಟ್ಟು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ನಡೆದಿದೆ: ಆಯನೂರು ಮಂಜುನಾಥ್
ಮದ್ಯ ಸೇವಿಸಿರಲಿಲ್ಲ: ಅಪಘಾತದ ಬಳಿಕ ನಟ ನಾಗಭೂಷಣ್ ಅವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ರಕ್ತದ ಮಾದರಿ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದ್ದರು. ಈ ಎಫ್‌ಎಸ್‌ಎಲ್ ವರದಿಯಲ್ಲಿ ಕಾರು ಚಾಲನೆ ವೇಳೆ ನಾಗಭೂಷಣ್ ಮದ್ಯ ಸೇವಿಸಿಲ್ಲ ಎಂಬುದು ದೃಢಪಟ್ಟಿದೆ. ಇನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಕಾರಿನ ಬಗ್ಗೆ ನೀಡಿರುವ ವರದಿಯಲ್ಲಿ ಘಟನೆ ವೇಳೆ ಕಾರಿನಲ್ಲಿ ಯಾವುದೇ ಲೋಪದೋಷಗಳು ಇರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಹೇಳಿಕೆಗಳು ಹಾಗೂ ವರದಿಯ ಅಂಶಗಳನ್ನು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.