ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಸಿಎಂ ಮತ್ತು ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಆರ್. ಅಶೋಕ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪೊಲೀಸ್ ಭದ್ರತೆ ಕೊರತೆ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು (ಜೂ.8): 'ಇದನ್ನ ಬೆವರ್ಸಿ ಸರ್ಕಾರ ಅಂತೀರೋ, ದರಿದ್ರ ಸರ್ಕಾರ ಅಂತೀರೋ? ಇವತ್ತು ನಮ್ಮ ಪ್ರತಿಭಟನೆಗೆ ಹಾಕಿರೋ ಪೊಲೀಸ್ ಕಾವಲನ್ನು ಅಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹಾಕಿಸಬೇಕಿತ್ತು' ರಾಜ್ಯ ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಹಿಗ್ಗಾಮುಗ್ಗಾ ಜಾಡಿಸಿದರು.
ಕಾಲ್ತುಳಿತ ಪ್ರಕರಣ ಪ್ರಕರಣ ಸಂಬಂದ ಸಿಎಂ ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಇಂದು ವಿಧಾನಸೌಧದ ಮುಂಭಾಗ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ ಅಶೋಕ್, ಉಪಮುಖ್ಯಮಂತ್ರಿ ಅಲ್ಲಿ ಹೋಗಿ ಬಾವುಟ ಹಾರಿಸಿದ್ದೇ ಹಾರಿಸಿದ್ದು. ಆರ್‌ಸಿಬಿ ಕನ್ನಡದ್ದ? ಅದು ಹುಟ್ಟಿಕೊಂಡಿದ್ದೇ ವಿಜಯಮಲ್ಯನ ವಿಸ್ಕಿ ಬ್ರಾಂಡ್ ಮಾಡಲು ಇದೀಗ ಆ ಬ್ರಾಂಡ್ ಡಿಕೆ ಶಿವಕುಮಾರ, ಸಿದ್ದರಾಮಯ್ಯ ಇಬ್ಬರು ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಎಂದು ಲೇವಡಿ ಮಾಡಿದರು.
ನಾವು ಪೊಲೀಸರ ಪರ ನಿಲ್ಲುತ್ತೇವೆ:
ಅಂದು ಡಿಸಿಪಿ ವಿಧಾನಸೌಧಕ್ಕೆ ಪತ್ರ ಬರೆದಿದ್ದಾರೆ. ಇಲ್ಲಿ ಕಾರ್ಯಕ್ರಮ ಮಾಡಲು ಸಾಕಷ್ಟು ಸಿಬ್ಬಂದಿ ಇಲ್ಲ. ಮಾಡುವುದು ಬೇಡವೆಂದು. ಒಬ್ಬ ಅಧಿಕಾರಿ ಪತ್ರ ಬರೆದ ಮೇಲೂ ಹೇಗೆ ನೀನು ಕಾರ್ಯಕ್ರಮ ಮಾಡಿದೆ? ನಿನಗೆ ಯಾವ ರೈಟ್ಸ್ ಇದೆ? ಎಂದು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ ವಿರುದ್ಧ ಏಕವಚನದಲ್ಲಿ ಪ್ರಶ್ನಿಸಿದರು. ನಮ್ಮ ಸಿಟಿ ರವಿ ಏನೂ ಮಾಡಿದನೆಂದು ಕಬ್ಬಿನಗದ್ದೆ, ಕಲ್ಲಿನ ಕ್ವಾರಿ ಸುತ್ತಾಡಿಸಿದ್ರಿ? ಈಗ ನೀವಿಬ್ಬರು ಹನ್ನೊಂದು ಜನರ ಸಾವಿಗೆ ಕಾರಣರಾಗಿದ್ದೀರಿ. ಹಾಗಾದರೆ ನಿಮ್ಮನ್ನ ಯಾವ ಕಲ್ಲು ಕ್ವಾರಿಗೆ ಓಡಾಡಿಸಬೇಕು? ಯಾವ ಕಬ್ಬಿನ ಗದ್ದೆಗೆ ತೆಗೆದುಕೊಂಡು ಹೋಗಬೇಕು?
ವಿಧಾನಸೌಧ ಕಾರ್ಯಕ್ರಮ ಮಾತ್ರ ನಮ್ದು ಅಂತಾರೆ ಸಿದ್ದರಾಮಯ್ಯ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾರ್ಯಕ್ರಮ ನಮ್ಮದಲ್ಲ ಎನ್ನುತ್ತಾರೆ. 3.10 ಕ್ಕೆ ಮೊದಲ ಸಾವು ಆಗಿದೆ
ಸಿದ್ದರಾಮಯ್ಯ 6 ಗಂಟೆಗೆ ಮಸಾಲೆ ದೋಸೆ ತಿನ್ನುತ್ತಾರೆ. ಮೈದಾನಕ್ಕೆ ಡಿಸಿಎಂ ಹೋಗುತ್ತಾರೆ. ಅಲ್ಲಿ ರಘು ದೀಕ್ಷಿತ್ ಗೀಟಾರ್ ವಾದನ ನಡೆತಿದೆ. ಮೈದಾನದಲ್ಲಿ ಒಂದು ಕೋಟಿ ರೂಪಾಯಿ ಬೆಲೆಯ ಪಟಾಕಿ ಹೊಡೆಯುತ್ತಾರೆ. ಇಷ್ಟೆಲ್ಲ ಆದ್ರೂ ಕಾರ್ಯಕ್ರಮ ನಮ್ಮದಲ್ಲ ಅಂತಾರೆ? ಇದನ್ನ ಬೇವರ್ಸಿ ಸರ್ಕಾರ ಅಂತೀರೋ, ದರಿದ್ರ ಸರ್ಕಾರ ಅಂತೀರೋ? ತೀವ್ರ ವಾಗ್ದಾಳಿ ನಡೆಸಿದರು.
ಮೊದಲ ಸಾವು ಆಗ್ತಿದ್ದಂತೆ ಕ್ಷಣ ಕ್ಷಣದ ಮಾಹಿತಿ ಟಿವಿಗಳಲ್ಲಿ ಬಿತ್ತರಿಸಲಾಗುತ್ತಿತ್ತು. ಆದ್ರೂ ಸಾವಾಗಿದ್ದು ಗೊತ್ತೇ ಇಲ್ಲ ಎನ್ನುತ್ತಾರೆ. ನಿಮ್ಮ ಪಿಎಗಳು ಮಣ್ಣು ತಿಂತಾ ಇದ್ರಾ? ಇಡೀ ಸರ್ಕಾರ ಡಯಾಸ್ ಮೇಲೆ ಇತ್ತು. ಸತ್ತವರೆಲ್ಲ ಯುವಕರು. ಇವರೆಲ್ಲ ಹುತಾತ್ಮರು. ಇವರದು ಕೇವಲ ಹೆಣ ಅಲ್ಲ ಅವರನ್ನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ಕರೆದು ಸಾಯಿಸಿದ್ದೀರಿ. ಅವರ ಶಾಪ ನಿಮಗೆ ತಟ್ಟದೇ ಇರೋಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
