ಬೆಂಗಳೂರು[ಜ.14]: ಉದ್ಯಾನನಗರಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಎದೆ ಹಾಲು ಬ್ಯಾಂಕ್ ಸ್ಥಾಪನೆಗೆ ಸಿದ್ಧತೆ ನಡೆದಿದೆ.

ತಾಯಿ ಎದೆ ಹಾಲು ಕೊರತೆಯಿಂದ ಸಾವಿಗೀಡಾಗುವ ಮಕ್ಕಳ ರಕ್ಷಣೆಗೆ ವಾಣಿವಿಲಾಸ್ ಆಸ್ಪತ್ರೆ ಯಲ್ಲಿ ಸ್ಥಾಪನೆಯಾಗಲಿರುವ ಎದೆ ಹಾಲು ಬ್ಯಾಂಕ್ ವರದಾನವಾಗಲಿದೆ.

ಸತತ ಮೂರು ವರ್ಷದಿಂದ ಎದೆ ಹಾಲು ಬ್ಯಾಂಕ್ ಸ್ಥಾಪನೆ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ವರ್ಷ ₹೩೫ ಲಕ್ಷ ಮಂಜೂರಾಗಿದ್ದು, ಪರಿಕರಗಳಿಗೆ ಅಗತ್ಯವಿರುವ ₹೯೦ ಲಕ್ಷ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸದ್ಯದಲ್ಲೇ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಹೀಗಾಗಿ ಕೆಲವೇ ತಿಂಗಳುಗಳಲ್ಲಿ ಕೇಂದ್ರ ಪ್ರಾರಂಭವಾಗಲಿದೆ. ತಾಯಿ ಎದೆಹಾಲು ಸಂರಕ್ಷಣೆ ಮಾಡುವುದಕ್ಕೆ ಸಾಕಷ್ಟು ಮುತುವರ್ಜಿ ವಹಿಸಬೇಕು. ಹೀಗಾಗಿ ಕೆಲಸ ನಿದಾನವಾದರೂ ಎಲ್ಲಾ ಸಿದ್ಧತೆಯನ್ನೂ ಸುಸಜ್ಜಿತವಾಗಿ ಮಾಡಲಾಗುತ್ತಿದೆ ಎಂದು ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಎಂ.ಎಸ್.ಗೀತಾ ಶಿವಮೂರ್ತಿ ಹೇಳಿದ್ದಾರೆ.

ಮೊದಲ ಸರ್ಕಾರಿ ಬ್ಯಾಂಕ್: ನಗರದಲ್ಲಿ ಈಗಾಗಲೇ ಹಲವು ಖಾಸಗಿ ಎದೆ ಹಾಲಿನ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿವೆ. ವಾಣಿವಿಲಾಸ್ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿನ ನವಜಾತ ಶಿಶುಗಳಿಗೆ ಅಗತ್ಯವಿರುವ ಎದೆ ಹಾಲನ್ನೂ ಅದೇ ಕೇಂದ್ರಗಳಿಂದ ತರಲಾಗುತ್ತಿದೆ.

ಪ್ರತಿಯೊಂದು ನವಜಾತ ಶಿಶುಗಳಿಗೂ ತಾಯಿ ಯ ಎದೆಹಾಲು ಅಗತ್ಯ. ಹುಟ್ಟಿದ ಮಗುವಿಗೆ ತಕ್ಷಣ ಎದೆ ಹಾಲುಣಿಸಲಾಗುತ್ತದೆ. ಆದರೆ ಇತ್ತೀಚೆಗೆ ನಾನಾ ಕಾರಣಗಳಿಂದ ಪೌಷ್ಟಿಕ ಎದೆಹಾಲಿನ ಕೊರತೆಯಿಂದಾಗಿ ಸಾಕಷ್ಟು ಶಿಶುಗಳು ಮರಣ ಹೊಂದುತ್ತಿವೆ. ಈ ನಿಟ್ಟಿನಲ್ಲಿ ಎದೆಹಾಲಿನ ಕೊರತೆ ನೀಗಿಸಲು ನಗರದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಎದೆಹಾಲು ಮಾರಾಟ ಕೇಂದ್ರವನ್ನು ಪ್ರಾರಂಭಿಸಿದ್ದು, ಇದು ಮೊದಲ ಸರ್ಕಾರಿ ತಾಯಿ ಎದೆ ಹಾಲಿನ ಬ್ಯಾಂಕ್ ಎಂಬ ಶ್ರೇಯಕ್ಕೆ ಭಾಜನವಾಗುತ್ತಿ

ತಾಯಿಯ ಎದೆಹಾಲು ಸಂಗ್ರಹ

ಎದೆ ಹಾಲು ಸಂಗ್ರಹ ಹಾಗೂ ವಿತರಣೆ ತೀರಾ ಸಂಕೀರ್ಣವಾದ ಕೆಲಸ. ಬೇರೆ ತಾಯಂದಿರಿಂದ ಸಂಗ್ರಹಿಸುವ ಎದೆಹಾಲನ್ನು ಮಕ್ಕಳ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಸೂಕ್ತ ಪರೀಕ್ಷೆಗೆ ಒಳಪಡಿಸಬೇಕು. ಬ್ಯಾಕ್ಟೀರಿಯಾ ಪರೀಕ್ಷೆಗೆ ಒಳಪಡಿಸಿದ ನಂತರ ಸುಮಾರು 62.05 ಡಿಗ್ರಿ ಉಷ್ಣಾಂಶದಲ್ಲಿ ಕುದಿಸಿ ಪ್ಯಾಕ್ ಮಾಡಲಾಗುತ್ತದೆ. ಬಳಿಕ ಈ ಹಾಲನ್ನು 20 ಡ್ರಿಗಿ ಸೆಲ್ಸಿಯೆಸ್‌ನಲ್ಲಿ ಶೇಖರಿಸಿಡಲಾಗುತ್ತಿದೆ. ಇಂತಹ ಹಾಲನ್ನು ಗರಿಷ್ಠ 2 ತಿಂಗಳ ಕಾಲ ಸಂಗ್ರಹಿಸಿ ನೀಡಬಹುದು ಎನ್ನುತ್ತಾರೆ ವೈದ್ಯರು.